ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರದ ರಸ್ತೆಗಳಲ್ಲಿ ಸಂಚರಿಸಿದರೇ ಸುಸ್ತು!

ಮಳೆಗಾಲದ ಪರಿಣಾಮ ತಾಲ್ಲೂಕಿನ ವಿವಿಧ ಹೆದ್ದಾರಿಗಳಲ್ಲಿ ಹೊಂಡಗಳದ್ದೇ ದರ್ಬಾರು
Last Updated 25 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಬಹುತೇಕ ರಸ್ತೆಗಳು ಹೊಂಡಮಯವಾಗಿವೆ. ಈ ಬಾರಿ ಸುರಿದ ದಾಖಲೆ ಮಳೆ, ರಸ್ತೆಗಳನ್ನು ಹಾಳು ಮಾಡುವಲ್ಲಿ ಪಟ್ಟಣದ ರಸ್ತೆಗಳು, ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ಎಂಬ ತಾರತಮ್ಯ ಮಾಡಿಲ್ಲ!

ತಾಲ್ಲೂಕಿನ ಯಾವುದೇ ಹೆದ್ದಾರಿಯಲ್ಲಿ ಸಂಚರಿಸಿದರೂ ಹೊಂಡಗಳು ಎದುರಾಗುತ್ತವೆ. ಅದರಲ್ಲೂ ಪಟ್ಟಣದೊಳಗೆಹೊಂಡಗಳು ಹಲವೆಡೆ ಇವೆ. ಇನ್ನು ಗ್ರಾಮೀಣ ರಸ್ತೆಗಳ ಪಾಡಂತೂ ಕೇಳುವುದೇ ಬೇಡ.

‘ರಸ್ತೆಗಳ ದುರಸ್ತಿಗಾಗಿ ಟೆಂಡರ್ ಕರೆದಿದ್ದೇವೆ. ರಾಜ್ಯ ಹೆದ್ದಾರಿಗಳ ಸುಧಾರಣೆಗೆ₹ 2.10 ಕೋಟಿ ಅನುದಾನ ಲಭ್ಯ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅನಿಲ್ ಕುಮಾರ್ ವಿವರ ನೀಡಿದರು.

‘ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳ ನಿರ್ವಹಣೆಗೆ ಬಂದಿರುವ₹ 1.22 ಕೋಟಿ ಮೊತ್ತದ ಕ್ರಿಯಾಯೋಜನೆ ಮಾಡಲಾಗುತ್ತಿದೆ. ಸಿ.ಎಂ.ಜಿ.ಎಸ್‌.ವೈಅಡಿ ಬಂದಿರುವ₹ 1.63 ಕೋಟಿ ಮೊತ್ತದ ಕ್ರಿಯಾಯೋಜನೆ ಮಾಡಿದ್ದೇವೆ’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಜಯಪ್ರಕಾಶ್ ವಿವರಿಸಿದರು.

ಈ ರಸ್ತೆಗಳ ಸ್ಥಿತಿ ನೋಡಿದರೆ ವಿಶೇಷ ಅನುದಾನ ಅಗತ್ಯವಿದೆ ಎಂದೆನಿಸದೇ ಇರದು. ಆದರೆ, ರಸ್ತೆ ಸುಧಾರಣೆಯ ಅನುದಾನ ಮಾತ್ರ ಮಾಮೂಲಿಯಾಗಿ ಕಂಡುಬರುತ್ತದೆ. ವರ್ಷವೂ ದೊರೆಯುವಷ್ಟೇ ಅನುದಾನ ಈ ವರ್ಷವೂ ಮಂಜೂರಾದರೆ,ತಾಲ್ಲೂಕಿನ ರಸ್ತೆಗಳ ಸ್ಥಿತಿ ಸುಧಾರಿಸುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.

‘ಇಡೀತಾಲ್ಲೂಕಿನಲ್ಲಿ ರಸ್ತೆಗಳು ಹಾಳಾಗಿವೆ. ನಾನು ನನ್ನೂರಿಗೆ ಹೋಗಲು ಸಿದ್ದಾಪುರ– ಸಾಗರ ಮುಖ್ಯ ರಸ್ತೆಯನ್ನು ಬಳಸಲು ಸಾಧ್ಯವೇ ಇಲ್ಲ. ಆದ್ದರಿಂದ ಮುಗದೂರು (ಹಳ್ಳಿಯ ಮೂಲಕ) ಮೂಲಕ ಹೋಗುತ್ತೇನೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ನಾಸೀರ್ ಖಾನ್ ಹೇಳಿದರು.

‘ಕೇವಲ ರಸ್ತೆ ಹೊಂಡಗಳನ್ನು ತುಂಬಿ, ಪ್ಯಾಚ್ ವರ್ಕ್ ಮಾಡಿದರೇ ಏನೂ ಪ್ರಯೋಜನವಿಲ್ಲ. ಬದಲಿಗೆ ರಸ್ತೆಗಳ ರಿಕಾರ್ಪೆಟಿಂಗ್ (ಮರು ಡಾಂಬರೀಕರಣ) ಆಗಬೇಕು. ಇಂತಹ ಕಾಮಗಾರಿಗೆ ಅಗತ್ಯವಿರುವ ಹೆಚ್ಚಿನ ಅನುದಾನ ತರುವ ಶಕ್ತಿ ವಿಧಾನಸಭಾ ಅಧ್ಯಕ್ಷರಿಗಿದೆ’ ಎಂಬುದು ಅವರ ಅಭಿಪ್ರಾಯ.

ವಿಧಾನ ಸಭಾಧ್ಯಕ್ಷರ ಸೂಚನೆ:ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ರಸ್ತೆಗಳ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆಯನ್ನು ಈಗಾಗಲೇ ನಡೆಸಿದ್ದಾರೆ. ವಾಹನಗಳು ಸಲೀಸಾಗಿ ಸಂಚಾರ ಮಾಡುವಷ್ಟಾದರೂ ರಸ್ತೆಗಳು ಸರಿ ಇರಬೇಕು. ಅದಕ್ಕೆ ಬೇಕಾದ ದುರಸ್ತಿಯನ್ನು ತಕ್ಷಣ ಮಾಡಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.

**

ಸಿದ್ದಾಪುರ ತಾಲ್ಲೂಕಿನಲ್ಲಿ ರಸ್ತೆಗಳು

563 ಕಿ.ಮೀ -ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು

2,348 ಕಿ.ಮೀ -ಗ್ರಾಮೀಣ ರಸ್ತೆಗಳು

₹ 4.95 ಕೋಟಿ -ಮಂಜೂರಾದ ಒಟ್ಟು ಅನುದಾನ

**

ಯಾವುದು, ಎಷ್ಟು ಕಿಲೋಮೀಟರ್?

225 ಕಿ.ಮೀ -ಲೋಕೋಪಯೋಗಿ ಇಲಾಖೆ ಸುಪರ್ದಿ

338 ಕಿ.ಮೀ -ಜಿಲ್ಲಾ ಮುಖ್ಯ ರಸ್ತೆಗಳು ಮಾತ್ರ

2,348 ಕಿ.ಮೀ -ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT