ಎಕ್ಸ್‌ಪ್ರೆಸ್ ರೈಲಿನಲ್ಲಿ ಆರು ಕೆ.ಜಿ ಗಾಂಜಾ ಪತ್ತೆ

ಕಾರವಾರ: ಮುಂಬೈನಿಂದ ಮಂಗಳೂರಿಗೆ ಸಾಗುತ್ತಿದ್ದ ರೈಲಿನಲ್ಲಿ ಇಡಲಾಗಿದ್ದ ಬರೋಬ್ಬರಿ ಆರು ಕೆ.ಜಿ ಗಾಂಜಾವನ್ನು ಕಾರವಾರದಲ್ಲಿ ರೈಲ್ವೆ ಪೊಲೀಸರು ಸೋಮವಾರ ಜಪ್ತಿ ಮಾಡಿದ್ದಾರೆ.
ಇಲ್ಲಿನ ಶಿರವಾಡ ನಿಲ್ದಾಣಕ್ಕೆ ಬಂದಾಗ ರೈಲ್ವೆ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಸಜೀರ್ ಎಂದಿನಂತೆ ಪರಿಶೀಲನೆ ನಡೆಸಿದರು. ಆಗ ಅವರಿಗೆ ಸೇನಾ ಸಿಬ್ಬಂದಿ ಬಳಸುವ ಬಣ್ಣದ ಚೀಲವೊಂದು ಸಾಮಾನ್ಯ ಬೋಗಿಯಲ್ಲಿ ಕಂಡುಬಂತು. ಅದು ಯಾರದ್ದೆಂದು ಇತರ ಪ್ರಯಾಣಿಕರನ್ನು ಪ್ರಶ್ನಿಸಿದಾಗ ಎಲ್ಲರೂ ತಮ್ಮದಲ್ಲ ಎಂದು ಹೇಳಿದರು.
ಇದರಿಂದ ಅನುಮಾನಗೊಂಡ ಪೊಲೀಸರು ಚೀಲವನ್ನು ತೆರೆದಾಗ ಗಮ್ ಟೇಪ್ ಸುತ್ತಿದ್ದ ಪೊಟ್ಟಣವೊಂದು ಕಾಣಿಸಿತು. ಈ ಬಗ್ಗೆ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ರೈಲ್ವೆ ಭದ್ರತಾ ಪಡೆಯ ಇನ್ಸ್ಪೆಕ್ಟರ್ ವಿನೋದ ಕುಮಾರ್, ಕಾನ್‌ಸ್ಟೆಬಲ್ ಎಚ್.ಸಿ.ಕೋಳೂರ್ ಹಾಗೂ ಸಿ.ಟಿ.ನರೇಂದರ್ ಚೀಲವನ್ನು ತಮ್ಮ ಕಚೇರಿಗೆ ತಂದು ತೆರೆದರು. ಆಗ ಅದರಲ್ಲಿ ಸುಮಾರು ₹ 60 ಸಾವಿರ ಮೌಲ್ಯದ ಗಾಂಜಾ ಪತ್ತೆಯಾಯಿತು. ಬಳಿಕ ಅದನ್ನು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಹಸ್ತಾಂತರಿಸಿ, ಪ್ರಕರಣ ದಾಖಲಿಸಲಾಗಿದೆ.
ಭಟ್ಕಳದಲ್ಲೂ ಹೆಚ್ಚಿನ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಸೂಚಿಸಲಾಗಿತ್ತು. ಆದರೆ, ಆರೋಪಿಗಳು ಪತ್ತೆಯಾಗಲಿಲ್ಲ. ವಿವಿಧ ನಿಲ್ದಾಣಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಶೀಲನೆಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಆರ್.ಪಿ.ಎಫ್ ಇನ್ಸ್ಪೆಕ್ಟರ್ ಪಿ.ವಿನೋದಕುಮಾರ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.