ಸೋಮವಾರ, ನವೆಂಬರ್ 18, 2019
29 °C
ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆರೋಪ

ಬಿದಿರು ನಿರ್ಲಕ್ಷ್ಯ: ₹ 300 ಕೋಟಿ ಹಾನಿ

Published:
Updated:
Prajavani

ಶಿರಸಿ: ಆರ್ಥಿಕ ಮೂಲವಾಗಿರುವ ಬಿದಿರಿನ ನಿರ್ವಹಣೆ ಹಾಗೂ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ ಲೋಪದಿಂದಾಗಿ ಸರ್ಕಾರಕ್ಕೆ ಸುಮಾರು ₹ 300 ಕೋಟಿ ನಷ್ಟವಾಗಿದೆ. ಈ ನಷ್ಟವನ್ನು ಅರಣ್ಯಾಧಿಕಾರಿಗಳೇ ಭರಿಸಬೇಕು ಎಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಇದ್ದು, 2017–18ರಲ್ಲಿ ಬಿದಿರಿಗೆ ಕಟ್ಟೆ ಬಂದ ಕಾರಣ, ಬಹುತೇಕ ಬಿದಿರು ಹಿಂಡು ಒಣಗಿದೆ. ಒಣಗಿದ ಬಿದಿರು ಕಟಾವು ಮಾಡದೇ ಇದ್ದುದರಿಂದ ಬೇಸಿಗೆಯಲ್ಲಿ ಬಿದಿರಿಗೆ ಬೆಂಕಿ ತಗುಲಿ ಅರಣ್ಯಕ್ಕೆ ಆವರಿಸಿದೆ. ಉತ್ತಮ ಜಾತಿಯ ಗಿಡ–ಮರಗಳು ಬೆಂಕಿಯಿಂದ ಸುಟ್ಟಿವೆ. ಹೊಳಯಂಚಿನಲ್ಲಿದ್ದ ಒಣಗಿದ ಬಿದಿರು ಮುರಿದು ಬಿದ್ದ ಪರಿಣಾಮ ಮಳೆಗಾಲದಲ್ಲಿ ನೀರಿನಲ್ಲಿ ತೇಲಿ ಬಂದ ಬಿದಿರು ಗಳಗಳು ಕಾಲುಸಂಕ, ಸಣ್ಣ–ದೊಡ್ಡ ಸೇತುವೆಗಳಿಗೆ ಒತ್ತು ನಿಂತಿವೆ. ಸೇತುವೆ ಅಡಿಯಲ್ಲಿ ನೀರು ಹರಿಯಲು ಅಡ್ಡಿಯಾಗಿ, ಕೆಲವು ಕಡೆಗಳಲ್ಲಿ ಸೇತುವೆ ಮೇಲಿನಿಂದ ನೀರು ಹರಿದು ಹೋಗಿದೆ. ಸಕಾಲದಲ್ಲಿ ಕಟಾವು ಮಾಡದ ಕಾರಣ ಈ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಡವರಿಗೆ ಮನೆ, ಬೇಲಿ ಕಟ್ಟಲು, ಕೃಷಿ ಚಟುವಟಿಕೆಗೆ,  ಹ್ಯಾಂಡಿಕ್ರಾಫ್ಟ್, ಮನೆ ಸಲಕರಣೆ, ಕಾಗದ ತಯಾರಿಕೆಗೆ ವಾರ್ಷಿಕವಾಗಿ 600–700 ಲೋಡ್ ಬಿದಿರು ಸಾಗಣೆಯಾಗುತ್ತಿತ್ತು. ಪ್ರತಿ ಲೋಡ್‌ಗೆ ₹ 60ಸಾವಿರ ದರದಲ್ಲಿ ಮಾರಾಟವಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಬಿದಿರು ಸಾಗಾಟ ಸ್ತಬ್ಧಗೊಂಡಿದೆ. ಹೊಸ ಬಿದಿರು ಬೆಳೆಯಲು 7–8 ವರ್ಷಗಳು ಬೇಕಾಗಬಹುದು. ಬಿದಿರು ಆರ್ಥಿಕ ಉತ್ಪನ್ನ ಮಾತ್ರವಾಗಿರದೇ, ಕಾಡಿನಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ರಾಷ್ಟ್ರೀಯ ಬಿದಿರು (ಬಾಂಬು) ಮಿಷನ್-2006 ಯೋಜನೆಯಡಿ ಬಿದಿರು ರಕ್ಷಣೆ, ನಿರ್ವಹಣೆ ಮತ್ತು ಪೋಷಣೆಯಲ್ಲಿ ತೋರಿಸಬೇಕಾದ ಆಸಕ್ತಿಗಿಂತ, ಅರಣ್ಯ ಅತಿಕ್ರಮಣಕಾರರ ಸಾಗುವಳಿಗೆ ಆತಂಕ ಮಾಡುವುದರಲ್ಲಿ ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಆಸಕ್ತಿ ಇರುವುದು ವಿಷಾದಕರ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)