‘ಪ್ರಮುಖ ಪಕ್ಷಗಳಿಗಿಲ್ಲದ ಬೆಂಬಲ ಆರ್‌ಎಸ್‌ಪಿಗೆ ಪೂರಕ’

ಮಂಗಳವಾರ, ಏಪ್ರಿಲ್ 23, 2019
33 °C

‘ಪ್ರಮುಖ ಪಕ್ಷಗಳಿಗಿಲ್ಲದ ಬೆಂಬಲ ಆರ್‌ಎಸ್‌ಪಿಗೆ ಪೂರಕ’

Published:
Updated:

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಇಲ್ಲದ ಜನ ಬೆಂಬಲ ಹಾಗೂ ಹಾಲಿ ಸಂಸದರು ಕ್ಷೇತ್ರ ನಿರ್ಲಕ್ಷ್ಯ ಮಾಡುತ್ತಿರುವ ಸಂಗತಿಗಳು, ರಾಷ್ಟ್ರೀಯ ಸಮಾಜ ಪಕ್ಷದ (ಆರ್.ಎಸ್.ಪಿ) ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ ಎಂದು ಆರ್.ಎಸ್.ಪಿ. ಅಭ್ಯರ್ಥಿ ನಾಗರಾಜ ನಾಯ್ಕ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಸಂಸದ, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಐದು ಬಾರಿ ಆಯ್ಕೆಯಾಗಿದ್ದರೂ, ಹೆಚ್ಚಿನ ಅಭಿವೃದ್ಧಿ ಮಾಡಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮತದಾರ ಬದಲಾವಣೆ ಬಯಸುತ್ತಿದ್ದಾನೆ. ಕ್ಷೇತ್ರದಲ್ಲಿ ಈಡಿಗ ಮತದಾರರು ನನ್ನನ್ನು ಬೆಂಬಲಿಸುತ್ತಾರೆ. ಈ ಅಂಶ ನನ್ನ ಗೆಲುವಿಗೆ ಸಹಕಾರಿಯಾಗಲಿದೆ’ ಎಂದರು.

ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕ್ಷೇತ್ರದ ಜನ ಬೆಂಬಲ ಪಡೆಯಲು ವಿಫಲರಾಗಿದ್ದಾರೆ. ವಿಧಾನಸಭೆ ಚುನಾವಣೆ ಬಳಿಕ ನಾಪತ್ತೆಯಾಗಿದ್ದ ಅವರು ಲೋಕಸಭಾ ಚುನಾವಣೆಗೆ ನಾಲ್ಕು ತಿಂಗಳಿರುವಾಗ ಕ್ಷೇತ್ರಕ್ಕೆ ಬಂದಿದ್ದಾರೆ. ಸೋತ ಮೇಲೆ ಗೋವಾಕ್ಕೆ ತೆರಳುವ ಅವರು, ಚುನಾವಣೆ ಘೋಷಣೆಯ ನಂತರವಷ್ಟೇ ಜನರಿಗೆ ಮುಖ ತೋರುತ್ತಾರೆ. ಇದು ಕ್ಷೇತ್ರದ ಮೇಲಿನ ಅವರ ನಿರ್ಲಕ್ಷ್ಯ ತೋರಿಸುತ್ತದೆ. ಅಲ್ಲದೇ, ಹಿರಿಯ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧವೂ ಹೇಳಿಕೆ ನೀಡಿ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ವೈರತ್ವ ಸೃಷ್ಟಿಸಿಕೊಂಡಿದ್ದಾರೆ. ಇದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ನಿವೇದಿತಾ ಕುಕ್ರೇಜಾ ಮಾತನಾಡಿ, ‘ರಾಜ್ಯದ ಕಲಬುರ್ಗಿ ಹಾಗೂ ಉತ್ತರ ಕನ್ನಡದ ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಪಕ್ಷದ ರಾಷ್ಟ್ರೀಯ ಪ್ರಮುಖರಾದ ಮಹಾರಾಷ್ಟ್ರ ಸರ್ಕಾರದ ಪಶುಸಂಗೋಪನಾ ಸಚಿವ ಮಾಧವ ಝಾನಕರ್ ಏ.19ಕ್ಕೆ ಶಿರಸಿಯಲ್ಲಿ ರೋಡ್ ಶೋ ನಡೆಸಿ, ಅಭ್ಯರ್ಥಿ ಪರ ಮತ ಯಾಚನೆ ಮಾಡುವರು’ ಎಂದರು. ಪಕ್ಷದ ರಾಜ್ಯ ಘಟಕದ ಸಂಚಾಲಕ ಧರ್ಮಣ್ಣ ತುಂಟಾಪುರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !