ಶನಿವಾರ, ಮೇ 28, 2022
26 °C
ಬೆಳೆ ಸಮೀಕ್ಷೆ ಗೊಂದಲ ಸರಿಪಡಿಸಲು ರೈತರ ಒತ್ತಾಯ

ಪಹಣಿ ದೋಷಕ್ಕೆ ಸಿಗದ ಮುಕ್ತಿ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಳೆದ ವರ್ಷ ಬೆಳೆ ಸಮೀಕ್ಷೆ ನಂತರ ಪಹಣಿಯಲ್ಲಿ ಉಂಟಾಗಿದ್ದ ಗೊಂದಲಗಳನ್ನು ಈವರೆಗೂ ಪೂರ್ಣ ಪ್ರಮಾಣದಲ್ಲಿ ಸರಿಪಡಿಸಲು ಆಗಿಲ್ಲ. ಪಹಣಿ ಪತ್ರದ ಬೆಳೆ ಕಾಲಂನಲ್ಲಿ ಬೆಳೆ ಮಾಹಿತಿ ತಪ್ಪಾಗಿ ಮುದ್ರಿತಗೊಂಡ ಪರಿಣಾಮ ಹಲವು ರೈತರಿಗೆ ಸಾಲ ಸೌಲಭ್ಯ ಸಿಕ್ಕಿಲ್ಲ.

ಅಡಿಕೆ ತೋಟದಲ್ಲಿ ಬಾಳೆ ಪ್ರಮುಖ ಬೆಳೆ ಎಂದು ದಾಖಲಾಗಿದ್ದು ಒಂದಡೆಯಾದರೆ, ಇನ್ನೊಂದೆಡೆ ತೋಟದ ಜಮೀನಿನಲ್ಲಿ ಭತ್ತ ಬೆಳೆ ಎಂದು ದಾಖಲಾಗಿತ್ತು. ಈ ಗೊಂದಲದ ಕಾರಣ ಸಹಕಾರ ಸಂಘಗಳ ಮೂಲಕ ಮಾಧ್ಯಮಿಕ ಸಾಲಕ್ಕೆ ಅರ್ಜಿ ಹಾಕಿದ್ದ ರೈತರಿಗೆ ನಿರಾಸೆಯಾಗಿದೆ. ಅಡಿಕೆ ಬೆಳೆ ನಮೂದಾಗದ ಕಾರಣ ಸಾಲದ ಅರ್ಜಿ ತಿರಸ್ಕೃತಗೊಂಡಿದೆ.

‘ನಾಲ್ಕು ತಿಂಗಳ ಹಿಂದೆಯೇ ಅರ್ಜಿ ನೀಡಿದ್ದರೂ ಈವರೆಗೆ ಪಹಣಿ ಪತ್ರದಲ್ಲಿ ಉಂಟಾದ ದೋಷ ಸರಿಪಡಿಸಿಲ್ಲ. ಬೆಳೆವಿಮೆ ಮಾಡಿಸಲೂ ಸಮಸ್ಯೆಯಾಗಿದೆ. ಕೃಷಿ ಚಟುವಟಿಕೆಗೆ ಬೇಕಿದ್ದ ಮಾಧ್ಯಮಿಕ ಸಾಲವೂ ಸಿಕ್ಕಿಲ್ಲ. ದೀರ್ಘಾವಧಿ ಸಾಲವನ್ನೂ ನೀಡುತ್ತಿಲ್ಲ’ ಎಂದು ಕಲಕರಡಿ ಗ್ರಾಮದ ಎಂಟಕ್ಕೂ ಹೆಚ್ಚು ರೈತರು ಸಮಸ್ಯೆ ಹೇಳಿಕೊಂಡರು.

‘ಕಳೆದ ವರ್ಷ ರೈತರೇ ಬೆಳೆ ಸಮೀಕ್ಷೆ ಮಾಡಿಕೊಂಡಿದ್ದರಿಂದ ಈ ರೀತಿಯ ಗೊಂದಲಗಳಾಗಿವೆ ಎಂದು ನಮ್ಮತ್ತಲೇ ಬೊಟ್ಟು ತೋರಿಸುತ್ತಿದ್ದಾರೆ. ಆದರೆ, ಬೆಳೆ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಸಮೀಕ್ಷಕರು ನಮ್ಮ ಸಮ್ಮುಖದಲ್ಲೇ ಆ‍್ಯಪ್‍ನಲ್ಲಿ ಬೆಳೆ ನಮೂದಿಸಿದ್ದರು. ಅದಾದ ಕೆಲ ತಿಂಗಳ ಬಳಿಕ ಪಹಣಿ ಪತ್ರ ಪಡೆದಾಗ ತಪ್ಪು ಉಂಟಾಗಿದ್ದು ಗಮನಕ್ಕೆ ಬಂದಿತ್ತು’ ಎಂದು ಸಮಸ್ಯೆ ವಿವರಿಸಿದರು.

‘ತಂತ್ರಜ್ಞಾನ ಅಳವಡಿಕೆ ಉತ್ತಮ ಬೆಳವಣಿಗೆ. ಆದರೆ, ಸಮೀಕ್ಷೆಯ ಪದ್ಧತಿಯಲ್ಲಿ ದೋಷ ಪದೇ ಪದೇ ಕಂಡುಬರುತ್ತಿದೆ. ಕಳೆದ ವರ್ಷ ನೂರಾರು ರೈತರ ಪಹಣಿ ಪತ್ರದಲ್ಲಿ ಬೆಳೆ ಮಾಹಿತಿಯನ್ನೇ ದಾಖಲಿಸಿರಲಿಲ್ಲ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ.

‘ಗ್ರಾಮ ಲೆಕ್ಕಿಗರೇ ನಡೆಸುತ್ತಿದ್ದ ಈ ಮೊದಲಿನ ಬೆಳೆ ಸಮೀಕ್ಷೆ ಪದ್ಧತಿ ಮುಂದುವರಿಸುವುದು ಸೂಕ್ತ. ಈಗ ಆರಂಭಿಸಿರುವ ಸಮೀಕ್ಷೆಯಲ್ಲಿ ಮಾರ್ಪಾಟು ಮಾಡಬೇಕು. ಕಳೆದ ವರ್ಷದಂತೆ ಗೊಂದಲ ಉಂಟಾಗುವುದನ್ನು ತಪ್ಪಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.