ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಿಂದ ಬಂದರೂ ಕೋವಿಡ್ ‘ನೆಗೆಟಿವ್’ ಪ್ರಮಾಣಪತ್ರ, ಎರಡು ಡೋಸ್ ಲಸಿಕೆ ಕಡ್ಡಾಯ

ಕೋವಿಡ್ ಮೂರನೇ ಅಲೆ ನಿಯಂತ್ರಣ ಸಂಬಂಧ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮ: ಜಿಲ್ಲಾಧಿಕಾರಿ
Last Updated 5 ಜನವರಿ 2022, 15:45 IST
ಅಕ್ಷರ ಗಾತ್ರ

ಕಾರವಾರ: ‘ಗೋವಾದಿಂದ ಜಿಲ್ಲೆಯ ಮೂಲಕ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಜೊತೆಗೆ 72 ಗಂಟೆಗಳ ಒಳಗೆ ಪಡೆದಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯ ಪ್ರಮಾಣ ಪತ್ರವನ್ನು ಹೊಂದಿರಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ದೃಢ ಪ್ರಮಾಣವು ಹೆಚ್ಚಿರುವ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದಿಂದ ಬರುವವರಿಗೆ ಇಷ್ಟು ದಿನ ಈ ರೀತಿಯ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಕೆಲವು ದಿನಗಳಿಂದ ಗೋವಾದಲ್ಲಿ ಕೂಡ ಪಾಸಿಟಿವಿಟಿ ದರವು ಎರಡಂಕಿಯನ್ನು ದಾಟಿದೆ. ಹಾಗಾಗಿ ಅನಿವಾರ್ಯವಾಗಿ ನಿರ್ಬಂಧ ವಿಧಿಸಲಾಗಿದೆ’ ಎಂದರು.

ಚೆಕ್‌ಪೋಸ್ಟ್‌ಗಳಿಗೆ ಚಾಲನೆ: ‘ಅಂತರರಾಜ್ಯ, ಅಂತರ್ ಜಿಲ್ಲೆ ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ. ಮಾಜಾಳಿ, ಅನಮೋಡ, ಭರ್ಚಿ, ಶಿರೂರಿನಲ್ಲಿ ನೋಡಲ್ ಅಧಿಕಾರಿಗಳ ತಂಡಗಳು ಇರಲಿವೆ. ಈ ಮಾರ್ಗದಲ್ಲಿ ಬರುವವರು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರದಿದ್ದರೆ ವಾಪಸ್ ಕಳುಹಿಸಲಾಗುವುದು. ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ’ ಎಂದು ತಿಳಿಸಿದರು.

‘ಜಿಲ್ಲೆಯ ಗಡಿಗಳಲ್ಲಿ ಅಂತರ ಜಿಲ್ಲಾ ಮಟ್ಟದ ಚೆಕ್‌‍ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇವು ಮಾವಿನಕೊಪ್ಪ, ಯಲ್ಲಾಪುರ, ಚೂರಿಕಟ್ಟೆ, ಬಾಚಣಿಕಿ ಹಾಗೂ ಚಿಪಗಿಯಲ್ಲಿವೆ. ರಾಜ್ಯದ ಇತರ ಕಡೆಗಳಿಂದ ಬರುವವರ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಿ ನಿಯಂತ್ರಣ ಕೊಠಡಿಗಳಿಗೆ ರವಾನಿಸಲಾಗುತ್ತದೆ. ಈ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಅನುಕೂಲವಾಗುವಂತೆ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲೂ ಚೆಕ್‌ಪೋಸ್ಟ್‌ಗಳಿವೆ’ ಎಂದರು.

‘ಜಿಲ್ಲಾ ಮಟ್ಟದ ಕೋವಿಡ್ ನಿಯಂತ್ರಣ ಕೊಠಡಿಯು ಕಾರ್ಯ ನಿರ್ವಹಿಸುತ್ತಿದೆ. ಅಂತೆಯೇ ತಾಲ್ಲೂಕು ಮಟ್ಟದ ನಿಯಂತ್ರಣ ಕೊಠಡಿಗಳನ್ನೂ ಬುಧವಾರದಿಂದಲೇ ತೆರೆಯಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ಟಾಸ್ಕ್‌ ಫೋರ್ಸ್ ತಂಡಗಳಿಗೂ ಚಾಲನೆ ನೀಡಲಾಗಿದೆ. ಬೇರೆ ದೇಶ, ರಾಜ್ಯಗಳಿಂದ ಬಂದವರ ಮಾಹಿತಿ, ಅವರ ಸಂಪರ್ಕಕ್ಕೆ ಬಂದವರ ವಿವರಗಳನ್ನು ಸಂಗ್ರಹಿಸಿ ಕಾರ್ಯೋನ್ಮುಖವಾಗಿವೆ’ ಎಂದು ಮಾಹಿತಿ ನೀಡಿದರು.

ಉದ್ಯೋಗಿಗಳಿಗೆ ಪಾಸ್ ವ್ಯವಸ್ಥೆ:

‘ಕಾರವಾರ ಮತ್ತು ಅಂಕೋಲಾ ತಾಲ್ಲೂಕಿನಿಂದ ನಿತ್ಯವೂ ಗೋವಾಕ್ಕೆ ಉದ್ಯೋಗಕ್ಕಾಗಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ನಿತ್ಯವೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸುವ ಬದಲು ಅವರು ವಾರಕ್ಕೊಮ್ಮೆ ಮಾಡಿಸಿದರೆ ಸಾಕು. ಇದಕ್ಕೆ ಜ.6ರಿಂದಲೇ ತಹಶೀಲ್ದಾರ್ ಕಚೇರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟ‍ಪಡಿಸಿದ್ದಾರೆ.

ಎರಡು ಡೋಸ್ ಲಸಿಕೆ ಕಡ್ಡಾಯ:

‘ಪ್ರವಾಸಿ ತಾಣಗಳಿಗೆ ಬರುವವರು, ದೇವಸ್ಥಾನಗಳಿಗೆ ಬರುವ ಭಕ್ತರು ಕೋವಿಡ್ ಲಸಿಕೆಯ ಎರಡು ಡೋಸ್ ಕಡ್ಡಾಯವಾಗಿ ಪಡೆದಿರಬೇಕು. ಒಂದು ಸಲಕ್ಕೆ ಗರಿಷ್ಠ 50 ಮಂದಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಯಾವುದೇ ಸೇವೆಗಳನ್ನು ಸಲ್ಲಿಸಲು ಅವಕಾಶವಿಲ್ಲ. ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವವರಿಗೆ 10 ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆ ಹಮ್ಮಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ಜಾತ್ರೆಗಳನ್ನು ಸಾಧ್ಯವಾದಷ್ಟು ಮುಂದೂಡುವುದು ಸೂಕ್ತ. ವಾರ್ಷಿಕ ಉತ್ಸವಗಳ ಧಾರ್ಮಿಕ ಕಾರ್ಯಗಳನ್ನು ಮಾಡಲೇಬೇಕಾದ ಸಂದರ್ಭದಲ್ಲಿ ಅನುಮತಿ ಪಡೆಯಬೇಕು. ಈ ಬಗ್ಗೆ ಎರಡು ದಿನಗಳಲ್ಲಿ ಆಯಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು’ ಎಂದು ಹೇಳಿದ್ದಾರೆ.

‘ರಾಜ್ಯದಾದ್ಯಂತ ಇರುವಂತೆ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಿಲ್ಲೆಯಲ್ಲೂ ಇರಲಿದೆ. ಹೊರಾಂಗಣ ಸಮಾರಂಭಗಳಿಗೆ 200 ಜನ, ಒಳಾಂಗಣದಲ್ಲಿ 100 ಜನ ಮಾತ್ರ ಸೇರಬಹುದು’ ಎಂದು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಸೂಚನೆಗಳು:

* ಮುಂದಿನ ಸೂಚನೆಯವರೆಗೆ ಧರಣಿ, ಪ್ರತಿಭಟನೆ, ರ‍್ಯಾಲಿಗೆ ಅವಕಾಶವಿಲ್ಲ‍‌

* ಮುಖಗವಸು ಧರಿಸದಿದ್ದರೆ, ಗುಂಪು ಸೇರಿದರೆ ದಂಡ ವಿಧಿಸಲಾಗುವುದು

* ಪ್ರಯೋಗಾಲಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಗಂಟಲುದ್ರವದ ಪರೀಕ್ಷೆ

* ಕೋವಿಡ್ ನೆಗೆಟಿವ್ ವರದಿ ಬರುವ ತನಕ ಸ್ವಯಂ ಕ್ವಾರಂಟೈನ್ ಆಗಬೇಕು

* ಹಳ್ಳಿಗಳಿಗೆ ಬಂದವರ ಮೇಲೆ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್‌ನಿಂದ ನಿಗಾ

-------

ಮುಂದಿನ ಮೂರು ವಾರ ಅನಗತ್ಯ ಪ್ರಯಾಣ ಸೂಕ್ತವಲ್ಲ. ಜನ ಗುಂಪು ಸೇರಬಾರದು. ಎನ್ 95 ಮುಖಗವಸು ಧರಿಸಿ. ಹೊರಗಿನಿಂದ ಬಂದವರು ಸ್ವಯಂ ಕ್ವಾರಂಟೈನ್ ಆಗಬೇಕು.

- ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT