ಪರ್ಯಾಯ ಬೆಳೆಯಾಗಿ ರಬ್ಬರ್ ಕೃಷಿ, ಅಡಿಕೆಯ ಜೊತೆಗೆ ಮರಗಳ ಆರೈಕೆ

ಮಂಗಳವಾರ, ಜೂನ್ 25, 2019
24 °C
ಜಿಲ್ಲೆಯಲ್ಲಿ ಬೆರಳೆಣಿಕೆಯ ಬೆಳೆಗಾರರು

ಪರ್ಯಾಯ ಬೆಳೆಯಾಗಿ ರಬ್ಬರ್ ಕೃಷಿ, ಅಡಿಕೆಯ ಜೊತೆಗೆ ಮರಗಳ ಆರೈಕೆ

Published:
Updated:
Prajavani

ಹೊನ್ನಾವರ: ತಾಲ್ಲೂಕಿನ ಸರಳಗಿ ಗ್ರಾಮದ ದೇವರಗದ್ದೆ ಮಜರೆಯಲ್ಲಿ ಹೆದ್ದಾರಿ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ರಬ್ಬರ್ ತೋಟವೊಂದಿದೆ. ರಾಮಚಂದ್ರ ಹೆಗಡೆ ಗುಡ್ಗೆ ಈ ತೋಟದ ಮಾಲೀಕರು. ಮುಗ್ವಾ ಗ್ರಾಮದಿಂದ ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಹೊಸತನದ ಅನ್ವೇಷಣೆಯಲ್ಲಿ ರಬ್ಬರ್ ಬೆಳೆಯನ್ನು ಆಯ್ದುಕೊಂಡರು. 

ಇವರು ಅಡಿಕೆಯನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಾರೆ. ತಾಲ್ಲೂಕಿನ ಬೆರಳೆಣಿಕೆಯ ರಬ್ಬರ್ ಬೆಳೆಗಾರರಲ್ಲಿ ಒಬ್ಬರಾಗಿದ್ದಾರೆ.
ಕುಂದಾಪುರದಿಂದ ರಬ್ಬರ್ ಸ್ಟಂಪ್‌ಗಳನ್ನು ತಂದು ನಾಟಿ ಮಾಡಿದರು. ನಂತರ ಗುಡ್ಗೆ ರಬ್ಬರ್ ತೋಟವನ್ನು ಇಂದಿನ ಸ್ಥಿತಿಗೆ ತರಲು ಸಾಕಷ್ಟು ಹಣ, ಶ್ರಮ ವ್ಯಯಿಸಿದ್ದಾರೆ. ಇವರ ಪರಿಶ್ರಮದ ಪರಿಣಾಮವಾಗಿ ಎರಡು ಎಕರೆ ಜಾಗದಲ್ಲಿ ಸುಮಾರು 300 ರಬ್ಬರ್ ಗಿಡಗಳು ನಳನಳಿಸುತ್ತಿವೆ.

ಐದು ವರ್ಷಗಳವರೆಗೆ ಗಿಡವನ್ನು ಪೋಷಿಸಿದ ನಂತರ ಅವು ಟ್ಯಾಪಿಂಗ್‌ಗೆ (ಫಸಲು ಪಡೆಯುವುದು) ಸಿದ್ಧವಾಗುತ್ತದೆ. ಎರಡು ದಿನಗಳಿಗೊಮ್ಮೆ ಗಿಡದಿಂದ ರಬ್ಬರ್ ದ್ರವವನ್ನು ಸಂಗ್ರಹಿಸಬಹುದು. ನೀರನ್ನು ಅಷ್ಟಾಗಿ ಆಶ್ರಯಿಸದ ಈ ಮರಗಳು ಸುಮಾರು 25 ವರ್ಷ ಬದುಕುತ್ತದೆ. ಮರ ಒಣಗಿದ ನಂತರವೂ ಅದಕ್ಕೆ ಬೇಡಿಕೆ ಇದ್ದು, ಪ್ಲೈವುಡ್ ತಯಾರಿಕೆಗೆ ಬಳಕೆಯಾಗುತ್ತದೆ.

‘ರಬ್ಬರ್, ಮೆಣಸಿನ ಕಾಳು ಕೃಷಿಯನ್ನು ಅಡಿಕೆಗೆ ಪೂರಕವಾಗಿ ಕೈಗೊಂಡಿದ್ದೇನೆ. ಮಾರುಕಟ್ಟೆ ಏರಿಳಿತದ ಪರಿಣಾಮ ಅನುಭವಿಸುತ್ತಿದ್ದೇನೆ’ ಎನ್ನುತ್ತಾರೆ ರಾಮಚಂದ್ರ ಗುಡ್ಗೆ.

‘ಎರಡು ವರ್ಷಗಳ ಹಿಂದೆ ರಬ್ಬರ್ ಬೆಳೆಯಿಂದ ಒಂದು ಎಕರೆಗೆ ₹ 2 ಲಕ್ಷ ಆದಾಯ ಬರುತ್ತಿತ್ತು. ಆದರೆ, ಈ ವರ್ಷ ರಬ್ಬರ್ ಬೆಲೆ ಕೆ.ಜಿಗೆ ₹ 100ರ ಆಸುಪಾಸಿನಲ್ಲಿದೆ. ಎರಡು ವರ್ಷಗಳ ಹಿಂದಿದ್ದ ಬೆಲೆಯ ಅರ್ಧಕ್ಕೆ ಕುಸಿದಿದೆ. ಆದ್ದರಿಂದ ಸದ್ಯ ಟ್ಯಾಪಿಂಗ್ ಮಾಡುವುದನ್ನು ನಿಲ್ಲಿಸಿದ್ದೇನೆ. ಟ್ಯಾಪಿಂಗ್‌ಗೆ ಕೂಲಿಕಾರರನ್ನು ಅವಲಂಬಿಸಿದರೆ ಬೆಳೆಗೆ ಈಗಿರುವ ಬೆಲೆಯಿಂದ ನಿರ್ವಹಣೆ ಸಾಧ್ಯವಾಗುವುದಿಲ್ಲ. ದರ ಬಂದಾಗ ಮತ್ತೆ ಟ್ಯಾಪಿಂಗ್ ಮಾಡುತ್ತೇನೆ’ ಎಂದು ಅವರು ಹೇಳುತ್ತಾರೆ.

ಸಾಗರದಲ್ಲಿ ಮಾರುಕಟ್ಟೆ

‘ತಾಲ್ಲೂಕಿನಲ್ಲಿ ಬೆಳೆದ ರಬ್ಬರ್ ಅನ್ನು ಸಾಗರದಲ್ಲಿರುವ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಹೆಚ್ಚು ಜನರು ರಬ್ಬರ್ ಬೆಳೆದರೆ ಸ್ಥಳೀಯವಾಗಿಯೂ ಮಾರುಕಟ್ಟೆ ಕಲ್ಪಿಸಬಹುದಾಗಿದೆ. ದೊಡ್ಡದಾಗಿ ಬೆಳೆಯುವ ರಬ್ಬರ್ ಗಿಡಗಳ ತರಗೆಲೆಗಳನ್ನು ಅಡಿಕೆ, ತೆಂಗಿನ ಮರಗಳಿಗೆ ಗೊಬ್ಬರವಾಗಿಯೂ ಉಪಯೋಗಿಸಬಹುದು. ಮರ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ತಂಪು ನೀಡುತ್ತದೆ. ಮಾರುಕಟ್ಟೆ ಸ್ಥಿರವಾದರೆ ರಬ್ಬರ್ ಬೆಳೆ ಲಾಭದಾಯಕವಾಗಿದೆ. ಯುವಕರು ಈ ಬೆಳೆಯ ಕಡೆ ಲಕ್ಷ್ಯ ವಹಿಸಬಹುದು’ ಎಂದು ರಾಮಚಂದ್ರ ಗುಡ್ಗೆ ಸಲಹೆ ನೀಡುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !