ಮುಂಡಗೋಡ: ಓಟದಲ್ಲಿ ಭರವಸೆ ಮೂಡಿಸಿದ ರವಿಕಿರಣ ಸಿದ್ಧಿ, ಶ್ವೇತಾ ಸಿದ್ಧಿ

ಬುಧವಾರ, ಮಾರ್ಚ್ 20, 2019
31 °C
ವಿದೇಶದಲ್ಲಿ ಪ್ರತಿಭೆ ಅನಾವರಣ

ಮುಂಡಗೋಡ: ಓಟದಲ್ಲಿ ಭರವಸೆ ಮೂಡಿಸಿದ ರವಿಕಿರಣ ಸಿದ್ಧಿ, ಶ್ವೇತಾ ಸಿದ್ಧಿ

Published:
Updated:
Prajavani

ಮುಂಡಗೋಡ: ದಟ್ಟ ಕಾನನದ ಮಧ್ಯೆ ಜೀವನ ನಡೆಸುತ್ತಿದ್ದ ವಿದ್ಯಾರ್ಥಿಗಳಿಬ್ಬರು ಈಗ ಅಂತರರಾಷ್ಟ್ರೀಯ ವಾಹಿನಿಯಲ್ಲಿ ಸುದ್ದಿಯಾಗಿದ್ದಾರೆ. ಸತತ ಎರಡು ವರ್ಷ ರಾಜ್ಯಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಭರವಸೆ ಮೂಡಿಸಿದ್ದಾರೆ.

ತಾಲ್ಲೂಕಿನ ಕರಗಿನಕೊಪ್ಪದ ಲೊಯೋಲ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಶ್ವೇತಾ ಸಿದ್ಧಿ ಹಾಗೂ ರವಿಕಿರಣ ಸಿದ್ಧಿ, 100 ಹಾಗೂ 200 ಮೀಟರ್‌ ಓಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇವರು ಮೂಲತಃ ಯಲ್ಲಾಪುರ ತಾಲ್ಲೂಕಿನ ಬಿಳಿಕಿ ಗ್ರಾಮದವರು. ಮೊದಲಿಗೆ ವಿದ್ಯಾರ್ಥಿಗಳ ಕ್ರೀಡಾ ಆಸಕ್ತಿಯನ್ನು ಗುರುತಿಸಿ ಲೊಯೋಲ ಶಿಕ್ಷಣ ಸಂಸ್ಥೆ ಸೂಕ್ತ ತರಬೇತಿ ನೀಡಿದೆ. ಪ್ರೌಢಶಾಲಾ ಹಂತದ ಅಥ್ಲೆಟಿಕ್ಸ್‌ನಲ್ಲಿ ರಾಜ್ಯಮಟ್ಟದವರೆಗೆ ಸ್ಪರ್ಧಿಸಿ ಸ್ಥಾನಗಳನ್ನು ಗೆದ್ದಿದ್ದಾರೆ.

‘ಇಬ್ಬರೂ ಕ್ರೀಡಾಪಟುಗಳು ಸತತ ಎರಡು ವರ್ಷಗಳಿಂದ ರಾಜ್ಯಮಟ್ಟದ 100 ಮೀ ಹಾಗೂ 200 ಮೀ ಓಟದಲ್ಲಿ ಪಾಲ್ಗೊಂಡಿದ್ದಾರೆ. ಶಿಕ್ಷಣದಿಂದಲೇ ವಂಚಿತರಾಗುವಂತಹ ಪರಿಸ್ಥಿತಿಯಲ್ಲಿದ್ದ ಕ್ರೀಡಾಪಟುಗಳು ಭರವಸೆಯ ಬೆಳಕು ಮೂಡಿಸಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಇವರ ಸಾಧನೆ ಕುರಿತು ಬಿಬಿಸಿ ಸುದ್ದಿ ವಾಹಿನಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಪ್ರಸಾರವಾಗಿದೆ. ಮತ್ತೊಂದು ಅಂತರರಾಷ್ಟ್ರೀಯ ಕ್ರೀಡಾ ವಾಹಿನಿಯು ಇವರ ಬಗ್ಗೆ ವಿಶೇಷ ವರದಿ ಮಾಡಲು ಮುಂದಾಗಿದೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ವಿ.ವಿ.ಮಲ್ಲನಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬ್ರಿಡ್ಜಸ್‌ ಆಫ್‌ ಸ್ಪೋರ್ಟ್ಸ್‌ ಎಂಬ ಎನ್‌ಜಿಒ ಇಬ್ಬರೂ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ, ಪೌಷ್ಟಿಕ ಆಹಾರ ಒದಗಿಸುತ್ತ ಅವರಿಗೆ ಉಚಿತ ತರಬೇತಿ ನೀಡುತ್ತಿದೆ’ ಎಂದು ಹೇಳಿದರು.

‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿ’
‘ಉತ್ತಮ ಸಾಧನೆ ಮಾಡಿ ಭಾರತ ತಂಡದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಗುರಿಯಿದೆ. ಲೊಯೋಲ ಶಿಕ್ಷಣ ಸಂಸ್ಥೆ, ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್‌ ಸಹಾಯ ಹಾಗೂ ಮಾರ್ಗದರ್ಶನ ಸಾಧನೆಗೆ ಕಾರಣ’ ಎಂದು ಶ್ವೇತಾ ಸಿದ್ಧಿ ಹೇಳಿದರು. ‘ಪದವಿ ಶಿಕ್ಷಣ ಪಡೆಯುತ್ತ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಬೇಕೆಂಬ ಆಸೆಯಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೆಸರು ಗಳಿಸಬೇಕೆಂದು ಕಠಿಣ ಅಭ್ಯಾಸ ಮಾಡುತ್ತಿರುವೆ’ ಎಂದು ರವಿಕಿರಣ ಸಿದ್ಧಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !