ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ: ತಹಶೀಲ್ದಾರರಿಗೆ ನೋಟಿಸ್ ಜಾರಿಗೆ ಸೂಚನೆ

ಕುಡಿಯುವ ನೀರಿಗೆ ಖಾಸಗಿ ಕೊಳವೆಬಾವಿ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳದ್ದಕ್ಕೆ ಆರ್‌.ವಿ.ಡಿ ಗರಂ ಸಿಟ್ಟು
Last Updated 29 ಮೇ 2019, 13:11 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಯೋಜನೆ ರೂಪಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕೆಂಡಾಮಂಡಲರಾದರು.ಹೆಚ್ಚು ನೀರಿರುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಒಪ್ಪಂದ ಮಾಡಿಕೊಳ್ಳದ ತಹಶೀಲ್ದಾರರಿಗೆ ಶೋಕಾಸ್ ನೋಟಿಸ್ ನೀಡಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಸೂಚನೆ ನೀಡಿದರು.

ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಸಚಿವ ದೇಶಪಾಂಡೆ ತಹಶೀಲ್ದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಹೆಚ್ಚು ನೀರುಲಭ್ಯವಿರುವಖಾಸಗಿ ಕೊಳವೆಬಾವಿಗಳನ್ನು ಗುರುತಿಸಬೇಕು. ಅವುಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದುಐದು ತಿಂಗಳ ಹಿಂದೆಯೇ ಸೂಚಿಸಲಾಗಿತ್ತು. ಆದರೆ, ಈವರೆಗೆ ಒಪ್ಪಂದ ಮಾಡಿಕೊಂಡಿಲ್ಲ. ಕೆಲಸ ಮಾಡದ ಎಲ್ಲರಿಗೂ ಶೋಕಾಸ್ ನೋಟಿಸ್ ಕೊಡಿ’ ಎಂದು ಸೂಚಿಸಿದರು.

‘ಕೊಳವೆಬಾವಿ ಕೊರೆಯಲು, ಪೈಪ್‌ಲೈನ್ ವಿಸ್ತರಿಸಲು, ಒಪ್ಪಂದದ ಮೇಲೆ ನೀರು ಖರೀದಿಸಲು ಜಿಲ್ಲಾಧಿಕಾರಿ ಬಳಿ ಅನುದಾನ ಲಭ್ಯವಿದೆ. ಟ್ಯಾಂಕರ್ ನೀರು ಸರಬರಾಜು ಅಗತ್ಯ ಇರುವಲ್ಲಿಗೆ ಆಗಲಿ. ಆದರೆ, ಕಡ್ಡಾಯವಾಗಿ ಟ್ಯಾಂಕರ್‌ಗೆ ಜಿಪಿಎಸ್ ಇರಬೇಕು. ಇದರಲ್ಲಿ ಅವ್ಯವಹಾರವಾದರೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

‘ಕುಡಿಯುವ ನೀರಿನ ಸಮಸ್ಯೆ ಪರಿಹಾರ ತಹಶೀಲ್ದಾರ್ ಜವಾಬ್ದಾರಿ. ಪ್ರತಿ ವ್ಯಕ್ತಿಗೆ ಪ್ರತಿದಿನ 40 ಲೀಟರ್ ಕುಡಿಯುವ ನೀರನ್ನು ಕಡ್ಡಾಯವಾಗಿ ಕೊಡಬೇಕು. ಜಾನುವಾರಿಗೆ ಮೇವು, ನೀರು ಅಗತ್ಯವಾಗಿ ಸಿಗಬೇಕು. ಗುಳೇ ಹೋಗದಂತೆ ಜನರಿಗೆ ಉದ್ಯೋಗ ಕೊಡಬೇಕು. ನಗರ ಪ್ರದೇಶದಲ್ಲಿ ಟ್ಯಾಂಕರ್ ಸರಬರಾಜು ಮಾಡುತ್ತಿದ್ದು, ಅನುದಾನದ ಕೊರತೆ ಇದ್ದರೆ ನಗರಾಭಿವೃದ್ಧಿ ಇಲಾಖೆಗೆ ತಕ್ಷಣ ಪತ್ರ ಬರೆಯಿರಿ’ ಎಂದು ತಿಳಿಸಿದರು.

‘ಕುಡಿಯುವ ನೀರಿನ ಸಂಬಂಧ ಪ್ರತಿ ತಹಶೀಲ್ದಾರ್ ಬಳಿ ಕಡ್ಡಾಯವಾಗಿ ₹ 15 ಲಕ್ಷ ಇರಬೇಕು. ಕೊರತೆಯಾದರೆ ಕೂಡಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು. ಜಿಲ್ಲಾಧಿಕಾರಿ ಕೂಡ ಅದೇ ದಿನ ಅನುದಾನ ಬಿಡುಗಡೆ ಮಾಡಬೇಕು’ ಎಂದು ತಾಕೀತು ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ, ‘ತಾಲ್ಲೂಕಿನ 16 ಗ್ರಾಮ ಪಂಚಾಯ್ತಿಗಳಿಗೆ ಮಾರ್ಚ್ 4ರಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ 15 ಟ್ಯಾಂಕರ್‌ಗಳಲ್ಲಿ 15,278 ಜನರಿಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಕಾರವಾರ ಉಪವಿಭಾಗಾಧಿಕಾರಿ ಅಭಿಜಿನ್ ಮಾತನಾಡಿ, ‘ಜೊಯಿಡಾದಲ್ಲಿ ಹೆಚ್ಚು ನೀರು ಇರುವ ಕೊಳವೆಬಾವಿಗಳಿಲ್ಲ. ಅಲ್ಲಿನ ಆರು ಮಜರೆಗಳಿಗೆ ಟ್ಯಾಂಕರ್ನೀರು ಕೊಡಲಾಗುತ್ತಿದೆ. ಕಾರವಾರದಲ್ಲಿಉಪ್ಪು ನೀರಿನ ಸಮಸ್ಯೆಯಿದ್ದು, ಒಂದೇ ಕೊಳವೆಬಾವಿಯನ್ನು ಗುರುತಿಸಲಾಗಿದೆ. ನಗರವನ್ನು ಹೊರತುಪಡಿಸಿ 15 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ನಗರದಲ್ಲಿ ಮಂಗಳವಾರ 11 ಟ್ಯಾಂಕರ್‌ಗಳಲ್ಲಿ55 ಸಾವಿರ ಲೀಟರ್ ನೀರು ಪೂರೈಕೆ ಮಾಡಲಾಗಿದೆ ಎಂದರು. ಕುಮಟಾಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್, ‘ಪ್ರತಿ ದಿನ 21 ಟ್ಯಾಂಕರ್‌ಗಳಲ್ಲಿ 86 ಟ್ರಿಪ್‌ಗಳನ್ನು ಮಾಡಲಾಗುತ್ತಿದೆ. ಗ್ರಾಮೀಣ ಭಾಗಕ್ಕೆ ದಿನವೂ ಐದು ಟ್ಯಾಂಕರ್‌ಗಳನ್ನು ಕಳುಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ಜಿಲ್ಲೆಗೆ 246 ಶುದ್ಧ ನೀರಿನ ಘಟಕಗಳು ಮಂಜೂರಾಗಿದ್ದು, 222 ಕಾಮಗಾರಿಗಳಾಗಿವೆ. ಉಳಿದವುಗಳನ್ನು20 ದಿನಗಳಲ್ಲಿಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆಗದಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಹೇಳಿದರು.

‘ಇನ್ನೆಷ್ಟು ಮಕ್ಕಳು ಸಾಯ್ಬೇಕ್ರೀ?’:ಕುಮಟಾ ತಾಲ್ಲೂಕಿನ ತಂಡ್ರಕುಳಿ ಭಾಗದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಗಮನಕ್ಕೆ ತಂದರು.

ಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದಸಚಿವ ದೇಶಪಾಂಡೆ, ‘ಇನ್ನೆಷ್ಟು ಮಕ್ಕಳು ಅಲ್ಲಿಸಾಯ್ಬೇಕ್ರೀ? ಮಳೆಗಾಲ ಬರ್ತಿದೆ. ಬಂಡೆಗಳ ಸ್ಫೋಟಿಸುವುದನ್ನು ಕೂಡಲೇ ನಿಲ್ಲಿಸಬೇಕು. ಮಳೆ ಜಾಸ್ತಿಯಾದರೆ ಗುತ್ತಿಗೆದಾರ ಸಂಸ್ಥೆ ಐಆರ್‌ಬಿ, ಜಿಲ್ಲಾಡಳಿತ ಜೊತೆಯಾಗಿ ಪುನರ್ವಸತಿ ಮಾಡಬೇಕು. ಅಗತ್ಯ ಆಹಾರ ಸಾಮಗ್ರಿ, ಆಂಬುಲೆನ್ಸ್ ಸಿದ್ಧಪಡಿಸಿಕೊಳ್ಳಬೇಕು’ ಎಂದುನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT