ಸೇವಾ ಟ್ರಸ್ಟ್‌ನಿಂದ ಕೆರೆ ಪುನಶ್ಚೇತನ; ರೈತರ ಹೊಲಗಳಿಗೆ ಹೂಳು ಸಾಗಣೆ

ಬುಧವಾರ, ಏಪ್ರಿಲ್ 24, 2019
32 °C
ಸತ್ಯ ಸಾಯಿ ಸೇವಾ ಟ್ರಸ್ಟ್‌ಗೆ ಗ್ರಾಮಸ್ಥರ ಸಹಕಾರ

ಸೇವಾ ಟ್ರಸ್ಟ್‌ನಿಂದ ಕೆರೆ ಪುನಶ್ಚೇತನ; ರೈತರ ಹೊಲಗಳಿಗೆ ಹೂಳು ಸಾಗಣೆ

Published:
Updated:
Prajavani

ಯಲ್ಲಾಪುರ: ತಾಲ್ಲೂಕಿನ ಹುಣಶೆಟ್ಟಿಕೊಪ್ಪದ ಕಳಸೂರು ಬಸ್ ತಂಗುದಾಣದ ಪಕ್ಕದಲ್ಲಿರುವ ದೊಡ್ಡ ಕೆರೆಯ ಪುನಶ್ಚೇತನಕ್ಕೆ ಸತ್ಯ ಸಾಯಿ ಸೇವಾ ಟ್ರಸ್ಟ್ ಮುಂದಾಗಿದೆ. ಸತ್ಯ ಸಾಯಿ ಭಜನಾ ಮಂಡಳಿಯ ಪದಾಧಿಕಾರಿ ಬೈರು ಜೋರೆ ಅವರ ಮುಂದಾಳತ್ವದಲ್ಲಿ ಕೆರೆಯ  ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ.

1968ರಲ್ಲಿ ಸತ್ಯಸಾಯಿಬಾಬಾ ಉತ್ತರ ಕನ್ನಡಕ್ಕೆ ಬಂದು ಹೋದ ಸವಿನೆನಪಿನ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಸತ್ಯ ಸಾಯಿ ಸೇವಾ ಟ್ರಸ್ಟ್‌ನ ಕರ್ನಾಟಕ ಘಟಕವು ಹಲವು ಸೇವಾ ಯೋಜನೆಗಳನ್ನು ಈ ವರ್ಷ ಕೈಗೊಂಡಿದೆ. ಅದರಲ್ಲಿ ಕೆರೆಗಳ ಪುನಶ್ಚೇತನವೂ ಒಂದು. ಇದಕ್ಕೆ ಗ್ರಾಮಸ್ಥರೂ ಸಹಕಾರ ನೀಡುತ್ತಿದ್ದಾರೆ.

ಏ.9ರಿಂದ ಹೂಳೆತ್ತುವ ಕಾರ್ಯ ಆರಂಭವಾಗಿದ್ದು, ಒಂದು ಜೆಸಿಬಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 15 ಟ್ರ್ಯಾಕ್ಟರ್‌ಗಳು ಮಣ್ಣನ್ನು ರೈತರ ಹೊಲಗಳಿಗೆ ಸಾಗಿಸುತ್ತಿವೆ. ಪ್ರತಿನಿತ್ಯ ಸುಮಾರು 100 ಟ್ರಿಪ್‌ಗಳಷ್ಟು ಹೂಳನ್ನು ಮೇಲೆತ್ತಲಾಗುತ್ತಿದೆ.

ಸುಮಾರು ಆರು ಎಕರೆ ವಿಸ್ತೀರ್ಣದ ಕೆರೆಯಲ್ಲಿ ಆರು ಅಡಿಯಿಂದ 10 ಅಡಿಗಳಷ್ಟು ಹೂಳನ್ನು ತೆಗೆಯಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ 10ರಿಂದ ಸಾಯಿ ಭಜನೆಯಿಂದ ಆರಂಭವಾಗುವ ಈ ಕಾರ್ಯ, ಸಂಜೆ 5ರವರೆಗೂ ಮುಂದುವರಿಯುತ್ತದೆ.

‘ಈ ಸಮಾಜಮುಖಿ ಕಾರ್ಯದಿಂದ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ತುಂಬಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಬಹುದು. ಹೂಳು ರೈತರ ಹೊಲಗಳಿಗೆ ಉತ್ತಮ ಗೊಬ್ಬರವಾಗಿ ಫಸಲು ಚೆನ್ನಾಗಿ ಬರಲು ಕಾರಣವಾಗುತ್ತದೆ. ಏಪ್ರಿಲ್ ಕೊನೆಯವರೆಗೂ ಈ ಕಾರ್ಯ ಮುಂದುವರಿಯಲಿದ್ದು, ಇನ್ನೂ ಎರಡು ಮೂರು ಕೆರೆಗಳ ಹೂಳೆತ್ತುವ ಕಾರ್ಯ ನಡೆಸುವ ಉದ್ದೇಶವಿದೆ’ ಎನ್ನುತ್ತಾರೆ ಬೈರು ಜೋರೆ.

‘ಜಿಲ್ಲೆಯಲ್ಲಿ ಒಟ್ಟು 36 ಕೆರೆಗಳ ಪುಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ. ಮೊದಲ ಹಂತವಾಗಿ 14 ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಹಳಿಯಾಳದಲ್ಲಿ ಈಗಾಗಲೇ ಆರು ಕೆರೆಗಳಿಗೆ ಪುನಶ್ಚೇತನ ನೀಡಲಾಗಿದೆ. ಇನ್ನೂ ಎರಡು ಕೆರೆಗಳ ಕಾರ್ಯ ಮುಗಿಯಬೇಕಿದೆ. ಮುಂಡಗೋಡಿನಲ್ಲಿ ಎರಡು, ಯಲ್ಲಾಪುರದಲ್ಲಿ ಎರಡು, ಶಿರಸಿಯಲ್ಲಿ ಎರಡು ಕೆರೆಗಳ ಹೂಳು ತೆಗೆಯುವ ಗುರಿ ಇಟ್ಟುಕೊಳ್ಳಲಾಗಿದೆ’ ಎನ್ನುತ್ತಾರೆ ಸತ್ಯಸಾಯಿ ಸೇವಾ ಟ್ರಸ್ಟ್‌ನ ಜಿಲ್ಲಾ ಘಟಕದ ಅಧ್ಯಕ್ಷ ರಾಮದಾಸ ಆಚಾರ್ಯ.

ಈ ರೀತಿಯ ಕಾರ್ಯಗಳಿಂದ ರೈತರ ಹೊಲಗಳು ಫಲವತ್ತತೆ ಪಡೆಯುತ್ತವೆ. ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಿದ ಸಮಾಧಾನ ಸಿಗುತ್ತದೆ ಎನ್ನುತ್ತಾರೆ ರೈತ ವಿನಾಯಕ ತಿನೇಕರ್.

ಟ್ರಸ್ಟ್, ಗ್ರಾಮಸ್ಥರ ಸಹಭಾಗಿತ್ವ

‘ಜನರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತುವ ಯೋಜನೆ ರೂಪಿಸಲಾಗಿದೆ. ಒಂದು ವಾರ ಕೆರೆಯ ಹೂಳೆತ್ತಲು ಜೆಸಿಬಿಗೆ ₹ 25 ಸಾವಿರ, ಇಂಧನಕ್ಕೆ ₹ 25 ಸಾವಿರ ಹಾಗೂ ಇತರ ಖರ್ಚೆಂದು ₹ 25 ಸಾವಿರ ಹೀಗೆ ₹ 75 ಸಾವಿರ ಖರ್ಚು ತಗಲುತ್ತಿದೆ. ಇದನ್ನು ಸತ್ಯಸಾಯಿ ಸೇವಾ ಟ್ರಸ್ಟ್ ಭರಿಸುತ್ತಿದೆ. ಟ್ರ್ಯಾಕ್ಟರ್ ಖರ್ಚನ್ನು ಗ್ರಾಮಸ್ಥರು ಭರಿಸುತ್ತಿದ್ದಾರೆ’ ಎನ್ನುತ್ತಾರೆ ಟ್ರಸ್ಟ್‌ನ ರಾಜ್ಯ ಘಟಕದ ಜಂಟಿ ಸಂಯೋಜಕ ಕಾರವಾರದ ಸುರೇಶ್ ಶೆಟ್ಟಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !