ಉತ್ತರ ಕನ್ನಡ: ವರಿಷ್ಠರು ಹೇಳಿದರೆ ‘ಮೈತ್ರಿ’ಗೆ ಬೆಂಬಲ– ಸೈಲ್

ಶನಿವಾರ, ಏಪ್ರಿಲ್ 20, 2019
29 °C
ಪಕ್ಷದಲ್ಲಿ ರಾಜ್ಯಮಟ್ಟದ ಸ್ಥಾನಮಾನ ನೀಡಲು ಬೆಂಬಲಿಗರ ಆಗ್ರಹ: ‘ಮೈತ್ರಿಧರ್ಮ’ಕ್ಕೆ ಆಕ್ರೋಶ

ಉತ್ತರ ಕನ್ನಡ: ವರಿಷ್ಠರು ಹೇಳಿದರೆ ‘ಮೈತ್ರಿ’ಗೆ ಬೆಂಬಲ– ಸೈಲ್

Published:
Updated:
Prajavani

ಕಾರವಾರ: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್‌ ವರಿಷ್ಠರು ನಮ್ಮ ಬಳಿ ಚರ್ಚಿಸಬೇಕು. ಅವರ ಸೂಚನೆಯಂತೆ ನಡೆದು, ಮೈತ್ರಿ ಧರ್ಮದೊಂದಿಗೆ ಹೋಗುತ್ತೇವೆ. ಆದರೆ, ಇಲ್ಲಿನ ಕರ್ಮದೊಂದಿಗೆ ಅಲ್ಲ’ ಎಂದು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ಅಸಮಾಧಾನ ಹೊರಹಾಕಿದರು. 

ಪಕ್ಷದ ಬ್ಲಾಕ್ ಸಮಿತಿ ಮಟ್ಟದ ಕಾರ್ಯಕರ್ತರು ಮತ್ತು ಪ್ರಮುಖರ ಜೊತೆ ನಗರದಲ್ಲಿ ಬುಧವಾರ ಚರ್ಚಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆನಂದ ಅಸ್ನೋಟಿಕರ್ ನನ್ನ ವಿರುದ್ಧವೇ ಸ್ಪರ್ಧಿಸಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಅವರನ್ನೇ ಬೆಂಬಲಿಸಬೇಕಾದ ಸ್ಥಿತಿಯಿದೆ. ಆನಂದ ಅಸ್ನೋಟಿಕರ್ ನಮ್ಮನ್ನು ಈವರೆಗೂ ಸಂಪರ್ಕಿಸಿಲ್ಲ’ ಎಂದರು.

‘10 ವರ್ಷಗಳ ಹಿಂದೆ ಈ ಭಾಗದಲ್ಲಿ ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿತ್ತು. ಅಂತಹ ಸಂದರ್ಭದಲ್ಲಿ ಪಕ್ಷದ ಮನೆಯನ್ನು ಗಟ್ಟಿ ಮಾಡಿದ್ದಕ್ಕೆ ನನಗೆ ಈ ಶಿಕ್ಷೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕೂಡ ಸಾಕಷ್ಟು ಶ್ರಮಿಸಿದ್ದರು. ಆದರೂ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು’ ಎಂದು ಬೇಸರಿಸಿದರು.

ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ಮಾತನಾಡಿ, ‘ಮೈತ್ರಿಧರ್ಮ ಎಂದು ಹೇಳುತ್ತ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ರಾಜ್ಯಮಟ್ಟದ ಮೈತ್ರಿಗೆ ನನ್ನ ವಿರೋಧವಿಲ್ಲ. ಆದರೆ, ಕಾರವಾರದ ಮಟ್ಟಿಗೆ ಹಾಗಿಲ್ಲ. ಇಲ್ಲಿ ಸತೀಶ್ ಸೈಲ್ ಅವರ ಸೋಲಿಗೆ ಕಾರಣರಾದವರಿಗೇ ಬೆಂಬಲ ನೀಡಬೇಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಥಾನಮಾನ ನೀಡಿ’: ಇದಕ್ಕೂ ಮೊದಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಕಾರ್ಯಕರ್ತರು ಮತ್ತು ಬೆಂಬಲಿಗರು, ಸತೀಶ್ ಸೈಲ್‌ಗೆ ಪಕ್ಷದಲ್ಲಿ ರಾಜ್ಯಮಟ್ಟದ ಸ್ಥಾನಮಾನ ನೀಡಬೇಕು. ಹಾಗಿದ್ದರೆ ಮಾತ್ರ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತಿಳಿಸಿದರು. 

ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ‘ನಾವು ಪಕ್ಷವನ್ನು ನಂಬುತ್ತೇವೆ. ಆದರೆ, ಅದುವೇ ನಮ್ಮನ್ನು ನಂಬುತ್ತಿಲ್ಲ. ಆನಂದ ಅಸ್ನೋಟಿಕರ್ ಅವರು ಸೈಲ್ ಬಳಿ ಮಾತನಾಡಲ್ಲ. ಹಾಗಾದ್ರೆ ನಾವ್ಯಾಕೆ ಅವರ ಪರ ಹೋಗೋಣ’ ಎಂದು ಪ್ರಶ್ನಿಸಿದರು.

‘ಸ್ವತಃ ಭೇಟಿಯಾಗಲಿ’: ಪ್ರಮುಖರಾದ ಎಂ.ನಿತ್ಯಾನಂದ ಹಬ್ಬು ಮಾತನಾಡಿ, ಆನಂದ ಅಸ್ನೋಟಿಕರ್ ಖುದ್ದು ಬಂದು ಸತೀಶ್ ಸೈಲ್ ಅವರ ಬೆಂಬಲ ಕೇಳಬೇಕು ಎಂದು ಆಗ್ರಹಿಸಿದರು.‌ ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣ ಮೇಥಾ, ‘10 ವರ್ಷಗಳಿಂದ ಕಾಂಗ್ರೆಸ್‌ ಅನ್ನು ಕಟ್ಟಿದ್ದೇವೆ. ಈಗ ಬೇರೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಸ್ಥಿತಿ ಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಉದಯ ಬಾಂದೇಕರ್ ಮಾತನಾಡಿ, ‘2008ರಲ್ಲಿ ಆನಂದ ಅಸ್ನೋಟಿಕರ್ ನಮ್ಮ ಮೇಲೆ 14 ಪ್ರಕರಣಗಳನ್ನು ದಾಖಲಿಸಿದ್ದರು. ಹಾಗಾಗಿ ಅವರಿಗೆ ನಮ್ಮ ಬೆಂಬಲವಿಲ್ಲ’ ಎಂದು ಹೇಳಿದರು. 

ದೇಶಪಾಂಡೆ, ಆಳ್ವ ವಿರುದ್ಧ ಆಕ್ರೋಶ: ‘ಜಿಲ್ಲೆಯಲ್ಲಿ ಗಟ್ಟಿಯಾಗಿರುವ ಕಾಂಗ್ರೆಸ್ ಬುನಾದಿಯನ್ನು ನಾಯಕರು ನಾಶ ಮಾಡ್ತಿದ್ದಾರೆ. ಆರ್.ವಿ.ದೇಶಪಾಂಡೆ ಮತ್ತು ಮಾರ್ಗರೇಟ್ ಆಳ್ವ ಅವರ ಬಣಗಳು ಪಕ್ಷವನ್ನು ಹಾಳು ಮಾಡುತ್ತಿವೆ’ ಎಂದು ಪ್ರಮುಖರಾದ ಬಾಬುಶೇಖ್ ದೂರಿದರು.

‘ಅನಂತ ಕುಮಾರ ಹೆಗಡೆ, ದೇಶಪಾಂಡೆ ಮತ್ತು ಆಳ್ವ ನಮ್ಮ ಜಿಲ್ಲೆಗೆ ಶಾಪ. ಅವರು ನಮ್ಮ ಜಿಲ್ಲೆಯನ್ನು ಉದ್ಧಾರವಾಗಲು ಬಿಡಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ಮಕ್ಕಳಿಗೆ ಅಥವಾ ಮುಖಂಡರಿಗೆ ಟಿಕೆಟ್ ಕೊಡಿ ಎಂದು ಯಾಕೆ ಕೇಳಲಿಲ್ಲ? ಮೈತ್ರಿ ಧರ್ಮಕ್ಕೆ ಬೇರೆ ಜಿಲ್ಲೆ ಇರಲಿಲ್ವಾ’ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್, ಪ್ರಮುಖರಾದ ಎಂ.ಇ.ಶೇಖ್, ಸಂಜಯ್ ಸಾಳುಂಕೆ, ರಮೇಶ್ ಗೌಡ, ಗಣಪತಿ ನಾಯ್ಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !