ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮರಳು ಉದ್ದಿಮೆಗೂ ಸಂಕಷ್ಟ ತಂದ ನೆರೆ

ಜಿಲ್ಲೆಯ ನದಿಗಳಿಂದ ಉಸುಕು ತೆಗೆಯಲು ಅನುಮತಿ ನೀಡುವಂತೆ ಗುತ್ತಿಗೆದಾರರ ಒತ್ತಾಯ
Last Updated 14 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ಪ್ರವಾಹದಿಂದ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಉದ್ಯಮಕ್ಕೂ ಸಮಸ್ಯೆ ಎದುರಾಗಿದೆ. ಅಕ್ಟೋಬರ್ ಕೊನೆಯವರೆಗೂ ನದಿಗಳು ಉಕ್ಕಿ ಹರಿದ ಕಾರಣ ಮರಳಿನ ದಿಣ್ಣೆಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.ಹೀಗಾಗಿ ಜಿಲ್ಲೆಯ ಮೂರು ನದಿಗಳಿಂದ ಅಧಿಕೃತವಾಗಿಮರಳು ಗಣಿಗಾರಿಕೆಗೆಪರವಾನಗಿ ನೀಡಲು ಇನ್ನೂಎರಡುತಿಂಗಳು ಬೇಕಾಗುವ ಸಾಧ್ಯತೆಯಿದೆ.

ಕರಾವಳಿಯ ನದಿಗಳಿಂದ ಅಧಿಕೃತವಾಗಿ ಮರಳು ತೆಗೆಯಲು ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝೆಡ್) ಅಧಿಕಾರಿಗಳು ನೀಡಿದ್ದಪರವಾನಗಿಯುಅಕ್ಟೋಬರ್‌ನಲ್ಲೇ ಮುಗಿದಿದೆ.ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿತ್ತು.

ಪರವಾನಗಿ ಮುಗಿದು ಒಂದು ತಿಂಗಳಾದರೂ ಪುನಃ ನೀಡಲು ಹೊಸದಾಗಿ ಅರ್ಜಿ ಕರೆದಿಲ್ಲ. ಇದರಿಂದ ಮರಳು ಉದ್ಯಮ ಹಾಗೂ ನಿರ್ಮಾಣ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮರಳು ಗಣಿಗಾರಿಕೆಗೆಕೂಡಲೇ ಅನುಮತಿ ನೀಡಬೇಕು ಎಂದು ಜಿಲ್ಲಾ ಸಾಂಪ್ರದಾಯಿಕ ನದಿ ಮರಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಗುರುವಾರ ಮನವಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರ ಶೇಟ್, ‘ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಈಗಾಗಲೇ ಅನುಮತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಇಲ್ಲೂ ಅವಕಾಶ ಕೊಡಬೇಕು. ಇಲ್ಲದಿದ್ದರೆ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತವೆ’ ಎಂದು ಬೇಸರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಅಕ್ಟೋಬರ್ ನಂತರ ನದಿಗಳಲ್ಲಿ ನೀರಿನ ಪ್ರಮಾಣ ಸಹಜ ಸ್ಥಿತಿಗೆ ಮರಳಿದ್ದು, ಉಸುಕಿನ ಪಟ್ಟಿಗಳನ್ನು ಗುರುತಿಸಬೇಕಿದೆ.ಪರವಾನಗಿಯಅವಧಿ ಮುಗಿಯುವ ಮೊದಲೇ ಮರಳು ದಿಣ್ಣೆಗಳನ್ನು ಗುರುತಿಸಲು ಪ್ರವಾಹದಿಂದ ಸಾಧ್ಯವಾಗಲಿಲ್ಲ. ಸಿ.ಆರ್‌.ಝೆಡ್‌.ನಿಂದ ದಿಣ್ಣೆಗಳನ್ನು ಗುರುತಿಸಿ ಪರವಾನಗಿ ನೀಡುವುದು ಮುಂತಾದ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಎರಡು ತಿಂಗಳು ಬೇಕಾಗಬಹುದು’ ಎಂದು ಸ್ಪಷ್ಟಪಡಿಸಿದರು.

2018ರಲ್ಲಿ ಗಂಗಾವಳಿ ನದಿಯಲ್ಲಿ ಒಂದು, ಶರಾವತಿ ನದಿಯಲ್ಲಿ ಎರಡು ಹಾಗೂ ಅಘನಾಶಿನಿ ನದಿಯಲ್ಲಿ ಐದು ಮರಳು ಪಟ್ಟಿಗಳನ್ನು ಗುರುತಿಸಲಾಗಿತ್ತು. 85ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿತ್ತು. ಕಾರವಾರದ ಕಾಳಿ ನದಿಯು ಸಿ.ಆರ್.ಝೆಡ್‌.ನ ಸೂಕ್ಷ್ಮ ವಲಯದಲ್ಲಿ ಬರುವ ಕಾರಣ ಮರಳು ತೆಗೆಯಲು ಅನುಮತಿ ನೀಡಿರಲಿಲ್ಲ.

ಏರುಗತಿಯಲ್ಲಿ ಮರಳಿನ ದರ:ಈ ಬಾರಿ ಪ್ರವಾಹದಿಂದ ಜಿಲ್ಲೆಯಲ್ಲಿ ಆಸ್ತಿ ಪಾಸ್ತಿ, ಸೇತುವೆಗಳು, ಕಟ್ಟಡಗಳಿಗೆ ಸಾಕಷ್ಟು ಹಾನಿಯಾಗಿದೆ. ಅವುಗಳ ದುರಸ್ತಿಗೆ ಮರಳಿನ ಪೂರೈಕೆ ಅತ್ಯಗತ್ಯವಾಗಿದೆ. ಆದರೆ, ಅಧಿಕೃತವಾಗಿ ಮರಳು ಸಾಗಿಸುವವರಿಂದಲೇ ಎಲ್ಲ ಕಡೆ ಸಿಗುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿ ಲೋಡ್‌ ಮರಳಿನ ದರ ಏರುಗತಿಯಲ್ಲಿದೆ.

ಪ್ರಸ್ತುತ ಕಾರವಾರದಲ್ಲಿ ಒಂದು ಲೋಡ್ ಮರಳಿಗೆ ಸುಮಾರು ₹ 22 ಸಾವಿರದ ಆಸುಪಾಸಿನಲ್ಲಿದೆ. ಭಟ್ಕಳದಲ್ಲಿ ₹ 16 ಸಾವಿರದಿಂದ ₹ 20 ಸಾವಿರ, ಮುಂಡಗೋಡದಲ್ಲಿ ₹ 31 ಸಾವಿರದಿಂದ ₹ 33 ಸಾವಿರ, ಹೊನ್ನಾವರದಲ್ಲಿ ₹ 15 ಸಾವಿರದ ಆಸುಪಾಸಿಲ್ಲಿ ದರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT