ಶಾಲ್ಮಲೆ ತಟದಲ್ಲಿ ಪುಣ್ಯ ನದಿ ಸ್ನಾನ

7
ಸಂಕ್ರಾಂತಿಯ ಪರ್ವಕಾಲ, ಹೊರ ಜಿಲ್ಲೆಗಳಿಂದ ಬಂದಿದ್ದ ಪ್ರವಾಸಿಗರ ದಂಡು

ಶಾಲ್ಮಲೆ ತಟದಲ್ಲಿ ಪುಣ್ಯ ನದಿ ಸ್ನಾನ

Published:
Updated:
Prajavani

ಶಿರಸಿ: ಎಳ್ಳು–ಬೆಲ್ಲದ ಸಿಹಿಯೊಂದಿಗೆ ಎದುರುಗೊಳ್ಳುವ ಸಂಕ್ರಾಂತಿಯ ಸಂಭ್ರಮ ಈ ಬಾರಿ ಎರಡು ದಿನಗಳಿಗೆ ವಿಸ್ತರಣೆಯಾಗಿದೆ. ಕೆಲವರು ಹಬ್ಬದ ಸಡಗರದಲ್ಲಿದ್ದರೆ, ಹಲವರು ಬರುವ ಹಬ್ಬಕ್ಕೆ ಅಣಿಯಾಗಿದ್ದಾರೆ.

ತಾಲ್ಲೂಕಿನ ಪ್ರವಾಸಿತಾಣವಾಗಿರುವ ಸಹಸ್ರಲಿಂಗದಲ್ಲಿ ಸೋಮವಾರ ನೂರಾರು ಪ್ರವಾಸಿಗರು ಸಂಕ್ರಮಣ ಹಬ್ಬವನ್ನು ಆಚರಿಸಿದರು. ದೂರ ಊರುಗಳಿಂದ, ಹೊರ ಜಿಲ್ಲೆಗಳಿಂದ ಕುಟುಂಬ ಸಮೇತರಾಗಿ ಬಂದಿದ್ದ ಭಕ್ತರು ಪ್ರಕೃತಿರಮ್ಯ ತಾಣಕ್ಕೆ ಮನಸೋತರು. ಕಂಗೊಳಿಸುವ ಹಸಿರಿನ ನಡುವೆ ಶಾಂತವಾಗಿ ಹರಿಯುವ ಶಾಲ್ಮಲೆ ತನ್ನೊಡಲೊಳಗೆ ಶಿವವನ್ನು ಹೊತ್ತುಕೊಂಡಿದ್ದಾರೆ. ಹರಿಯುವ ನದಿಯ ನಡುವಿನ ಶಿವಲಿಂಗಗಳಿಗೆ ಭಕ್ತರು ಪೂಜೆ ಸಲ್ಲಿಸಿದರು.

ನದಿ ತಟದಲ್ಲಿರುವ ಚಿಕ್ಕ ಚಿಕ್ಕ ಕಲ್ಲುಗಳನ್ನು ಜೋಡಿಸಿ, ಅದಕ್ಕೂ ಪೂಜೆ ಸಲ್ಲಿಸಿದರು. ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಪಕ್ಕದ ಮಹಾರಾಷ್ಟ್ರ ರಾಜ್ಯದಿಂದ ಪ್ರವಾಸಗರು ಬಂದಿದ್ದರು. ‘ಪ್ರತಿವರ್ಷ ಸಂಕ್ರಾಂತಿಗೆ ನಾವು ಸಹಸ್ರಲಿಂಗಕ್ಕೆ ಬರುತ್ತೇವೆ. ಸಂಕ್ರಾಂತಿಯಂದು ಕರಿ ಸ್ನಾನ ಮಾಡುವುದು ವಿಶೇಷ. ಕುಟುಂಬಕ್ಕೆ ಕಷ್ಟ ಬಂದಾಗ, ಮಕ್ಕಳಿಗೆ ಅನಾರೋಗ್ಯವಾದಾಗ ಹೊತ್ತುಕೊಂಡಿರುವ ಹರಕೆ ತೀರಿಸಲು, ಇಲ್ಲಿಗೆ ಬರುತ್ತೇವೆ’ ಎಂದು ಬೆಳಗಾವಿಯಿಂದ ಬಂದಿದ್ದ ಸಹನಾ ಹೇಳಿದರು.

‘ಸಹಸ್ರಲಿಂಗಕ್ಕೆ ಬಂದರೆ ಪುಣ್ಯದ ಜೊತೆಗೆ ಖುಷಿಯೂ ಸಿಗುತ್ತದೆ. ನದಿಯಲ್ಲಿ ನಡೆದುಕೊಂಡು ಹೋಗಿ, ಕಲ್ಲಿನ ಶಿವಲಿಂಗಕ್ಕೆ ನೀರೆರೆಯುವುದೇ ಮಕ್ಕಳಿಗೆ ಮೋಜು. ಅಪಾಯವಿಲ್ಲದ ಈ ಸ್ಥಳದಲ್ಲಿ ಮಕ್ಕಳು ನೀರಿನಲ್ಲಿ ಆಟವಾಡಿ ಸಂತೋಷಪಡುತ್ತಾರೆ’ ಎಂದು ಹುಬ್ಬಳ್ಳಿಯ ಚಂದ್ರಕಾಂತ ಹೇಳಿದರು.

‘ಎರಡು ದಿನ ಸಂಕ್ರಾಂತಿ ಹಬ್ಬ ಬಂದಿರುವುದರಿಂದ ಮಂಗಳವಾರ ಸಹ ಸಾವಿರಾರು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಈ ಭಾಗದ ಜನರಿಗೆ ಮಂಗಳವಾರವೇ ಹಬ್ಬವಾಗಿರುವುದರಿಂದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು’ ಎನ್ನುತ್ತಾರೆ ಸ್ಥಳೀಯ ಮಂಜುನಾಥ ನಾಯ್ಕ.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !