ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪವರ್ ಗ್ರಿಡ್’ ಕಾಣದ ಬೆಳಕು ಕೊಟ್ಟ ಜಿಲ್ಲೆ

ಸಮರ್ಪಕ ವಿದ್ಯುತ್ ಪೂರೈಕೆಗೆ ಅಡ್ಡಿಯಾಗುತ್ತಿರುವ ಸೌಕರ್ಯ ಕೊರತೆ
Last Updated 27 ಮೇ 2022, 19:30 IST
ಅಕ್ಷರ ಗಾತ್ರ

ಶಿರಸಿ: ರಾಜ್ಯದ ವಿದ್ಯುತ್ ಉತ್ಪಾದನೆಗೆ ಬಹುದೊಡ್ಡ ಕೊಡುಗೆ ನೀಡಿರುವ ಉತ್ತರ ಕನ್ನಡದಲ್ಲೇ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯದಷ್ಟು ‍‘ಪವರ್ ಗ್ರಿಡ್‍’ಗಳಿಲ್ಲ. ಇದು ಹೆಸ್ಕಾಂ ಕಾರ್ಯಚಟುವಟಿಕೆಗೆ ಅಡ್ಡಿಯಾಗಿದೆ.

12 ತಾಲ್ಲೂಕುಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಪ್ರಸ್ತುತ 220 ಕಿಲೋ ವ್ಯಾಟ್ ಸಾಮರ್ಥ್ಯದ 3,110 ಕೆವಿ ಸಾಮರ್ಥ್ಯದ 15 ಹಾಗೂ 33 ಕೆವಿ ಸಾಮರ್ಥ್ಯದ 16 ಪವರ್ ಗ್ರಿಡ್‍ಗಳಿವೆ. ಇವುಗಳಿಂದ ವಿದ್ಯುತ್ ಪೂರೈಕೆ, ನಿಯಂತ್ರಣ ಕಾರ್ಯ ನಡೆಯುತ್ತಿದೆ.

ಗುಡ್ಡಗಾಡು ಜಿಲ್ಲೆಯಾಗಿರುವ ಇಲ್ಲಿ ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಪ್ರಕರಣಗಳು ಹೆಚ್ಚು. ಅಲ್ಲದೆ ಮನೆಗಳ ನಡುವಿನ ಅಂತರವೂ ಹೆಚ್ಚಿರುವ ಕಾರಣ ವಿದ್ಯುತ್ ತಂತಿಗಳನ್ನು ದೂರದವರೆಗೆ ಎಳೆಯಲಾಗಿದೆ. ಇವೆಲ್ಲದರ ಪರಿಣಾಮ ಈಗಿರುವ ಗ್ರಿಡ್‍ಗಳಿಂದ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಕೆ ಕಷ್ಟ ಎಂಬ ಸ್ಥಿತಿ ಇದೆ.

23 ಹೊಸ ಗ್ರಿಡ್ ಪ್ರಸ್ತಾವ:

ಅಡೆತಡೆ ಇಲ್ಲದೆ ನಿರಂತರ ವಿದ್ಯುತ್ ಪೂರೈಕೆ ಸಂಬಂಧ ಹೆಸ್ಕಾಂನಿಂದ 23 ಹೊಸ ಗ್ರಿಡ್‍ಗಳ ಸ್ಥಾಪನೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕುಮಟಾದ ದೀವಗಿ ಬಳಿ ಅಂದಾಜು ₹ 800 ಕೋಟಿ ವೆಚ್ಚದಲ್ಲಿ 220 ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪಿಸುವ ಯೋಜನೆಯಿದೆ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

‘ಪ್ರತಿ ವರ್ಷ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಬಲಪಡಿಸುವುದು ನಮ್ಮ ಆದ್ಯತೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದನ್ನು ತಡೆಯಲು ಹೆಚ್ಚುವರಿ ಗ್ರಿಡ್‍ಗಳ ಅಗತ್ಯತೆಯ ಪ್ರಸ್ತಾವ ಕಳುಹಿಸಲಾಗಿದೆ’ ಎನ್ನುತ್ತಾರೆ ಹೆಸ್ಕಾಂನ ಶಿರಸಿ ಸೂಪರಿಟೆಂಡೆಂಟ್ ಎಂಜಿನಿಯರ್ ದೀಪಕ್ ಕಾಮತ್.

ಎಲ್ಲೆಲ್ಲಿ ಗ್ರಿಡ್:

ಶಿರಸಿ ತಾಲ್ಲೂಕಿನ ಜಾನ್ಮನೆ, ಸಿದ್ದಾಪುರ ತಾಲ್ಲೂಕಿನ ಕಾನಸೂರು, ಹಳಿಯಾಳ ತಾಲ್ಲೂಕಿನ ನೀಲವಾಣಿ, ಹುಣಸವಾಡಾ (ತೇರಗಾಂವ), ಕುಮಟಾ ತಾಲ್ಲೂಕಿನ ಮಾದನಗೇರಿ, ಭಟ್ಕಳ ಪಟ್ಟಣದಲ್ಲಿ 110 ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪನೆ ಪ್ರಸ್ತಾವ ಇದೆ.

ಕಾರವಾರದ ಚೆಂಡಿಯಾ, ಕಾರವಾರ ನಗರದ ಕೋಣೆ, ಹೈಚರ್ಚ್, ಸದಾಶಿವಗಡ, ಶಿರಸಿ ತಾಲ್ಲೂಕಿನ ಎಕ್ಕಂಬಿ, ಹುಲೇಕಲ್, ಉಂಚಳ್ಳಿ, ದೇವನಳ್ಳಿ, ಸಿದ್ದಾಪುರದ ಹೇರೂರು, ಕಾವಂಚೂರು, ಬಿಳಗಿ, ಹಲಗೇರಿ, ಮುಂಡಗೋಡದ ಕಾತೂರ, ಜೋಯಿಡಾದ ರಾಮನಗರ, ಹೊನ್ನಾವರದ ದಿಬ್ಬಣಗಲ್, ಕುಮಟಾದ ಮಿರ್ಜಾನ, ಭಟ್ಕಳದ ಸರ್ಪನಕಟ್ಟಾದಲ್ಲಿ 33ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪಿಸಲು ಪ್ರಸ್ತಾವ ಇದೆ.

30 ಕಿ.ಮೀ.ಗೊಂದು ಫೀಡರ್!

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಹೆಚ್ಚಾಗುತ್ತಿದೆ. ಇದರಿಂದ ಜನರು ತೊಂದರೆಗೊಳಗುತ್ತಿದ್ದಾರೆ.

‘ಪ್ರತಿ 10 ಕಿ.ಮೀ.ಗೊಂದು ಫೀಡರ್ ಇದ್ದರೆ ವಿದ್ಯುತ್ ಪೂರೈಕೆ ಸುಗಮವಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಸರಾಸರಿ ಪ್ರತಿ 30 ಕಿ.ಮೀ.ಗೊಂದರಂತೆ ಫೀಡರ್ ಗಳಿವೆ. ಇದರಿಂದ ಹೆಚ್ಚು ಸಮಸ್ಯೆ’ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

‘ಗ್ರಿಡ್ ಜತೆಗೆ 15 ಹೊಸ ಸೆಕ್ಷನ್ ಆಫೀಸ್ ತೆರೆಯುವ ಬಗ್ಗೆಯೂ ಪ್ರಸ್ತಾವ ಇಡಲಾಗಿದೆ’ ಎನ್ನುತ್ತಾರೆ ಹೆಸ್ಕಾಂ ಎಸ್ಇ ದೀಪಕ ಕಾಮತ್.

---------------

ಪದೇ ಪದೇ ವಿದ್ಯುತ್ ವ್ಯತ್ಯಯದಲ್ಲಿ ದೋಷ ಉಂಟಾಗುವುದನ್ನು ತಪ್ಪಿಸಲು ಹೆಚ್ಚುವರಿ ಗ್ರಿಡ್‍ಗಳ ಅಗತ್ಯವಿದ್ದು ಈಗಾಗಲೆ ಪ್ರಸ್ತಾವ ಸಲ್ಲಿಕೆಯಾಗಿದೆ.

ದೀಪಕ ಕಾಮತ್

ಹೆಸ್ಕಾಂ ಸೂಪರಿಟೆಂಡೆಂಟ್ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT