ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ತಪ್ಪಿಸಿಕೊಂಡಿದ್ದ ಬಾಲಕಿ ಸುರಕ್ಷಿತವಾಗಿ ಮನೆಗೆ

Last Updated 6 ಜೂನ್ 2019, 10:52 IST
ಅಕ್ಷರ ಗಾತ್ರ

ಮುಂಡಗೋಡ: ಶಾಲೆಗೆ ಹೋಗಿದ್ದ ಬಾಲಕಿಯು ಶಾಲಾವಧಿಯಲ್ಲಿಯೇ ಶಿಕ್ಷಕರ ಕಣ್ಣುತಪ್ಪಿಸಿ ಬಸ್‌ ನಿಲ್ದಾಣದವರೆಗೆ ನಡೆದುಕೊಂಡು ಹೋಗಿ ನಂತರ ಪೊಲೀಸರ ಸಹಾಯದಿಂದ ಪಾಲಕರ ಕೈಸೇರಿದ್ದಾಳೆ.

ಇಲ್ಲಿನ ಬ್ಲೂಮಿಂಗ್ ಬಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿ ರಂಜಿತಾ ಮಂಗಳವಾರ ಶಾಲೆಗೆ ಹೋಗಿದ್ದಾಳೆ. ಕೆಲ ಹೊತ್ತಿನ ನಂತರ ಬ್ಯಾಗ್‌ ಸಮೇತ ಹೊರನಡೆದು, ಅರ್ಧ ಕಿ.ಮೀ ದೂರ ಇರುವ ಬಸ್‌ ನಿಲ್ದಾಣದಲ್ಲಿ ಬಂದು ನಿಂತಿದ್ದಾಳೆ. ಬಾಲಕಿಯನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಮಗುವಿನ ನೋಟ್‌ಬುಕ್‌ನಲ್ಲಿ ರಂಜಿತಾ ಎಂದು ಹಿಂದಿಯಲ್ಲಿ ಬರೆದಿದ್ದು ಬಿಟ್ಟರೆ ಮತ್ಯಾವ ವಿಳಾಸವೂ ಇಲ್ಲ. ಮಗುವೂ ಮಾತನಾಡುತ್ತಿರಲಿಲ್ಲ. ಪ್ರೊಬೆಶನರಿ ಪಿಎಸ್‌ಐ ಬಸವರಾಜ ಮಗುವಿಗೆ ಚಾಕೊಲೇಟ್ ನೀಡಿ, ಒಂದು ತಾಸು ಮಾತನಾಡಿಸುವ, ತಂದೆ ತಾಯಿ ಹೆಸರು ಕೇಳುವ ಪ್ರಯತ್ನ ಮಾಡಿದ್ದಾರೆ. ಕೆಲವು ಸಿಬ್ಬಂದಿಯೂ ಮಗುವನ್ನು ಆಟವಾಡಿಸಿದ್ದಾರೆ’ ಎನ್ನಲಾಗಿದೆ.

ಕೊನೆಗೆ ಮಗು ನೇಪಾಳಿ ಇಲ್ಲವೇ ಟಿಬೆಟನ್ ಇರಬೇಕು ಎಂದುಕೊಂಡು ಟಿಬೆಟನ್ ಕ್ಯಾಂಪ್‌ನಲ್ಲಿ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನ ಮಾಡಿದ್ದಾರೆ. ಹವಾಲ್ದಾರ್‌ ರಾಘವೇಂದ್ರ ಮೂಳೆ ಅವರು ನೇಪಾಳಿಗರ ಕಾಲೊನಿಗೆ ಹೋಗಿ ಮಗುವಿನ ತಾಯಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

‘ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಿಮ್ಮನ್ನೇ ನಂಬಿ ಹಲವು ಪಾಲಕರು ಮಕ್ಕಳನ್ನು ಕಳಿಸಿರುತ್ತಾರೆ. ಹೀಗಾದರೆ ಹೇಗೆ’ ಎಂದು ಶಿಕ್ಷಕರನ್ನು ಸಿಪಿಐ ಶಿವಾನಂದ ಚಲವಾದಿ ತರಾಟೆಗೆ ತೆಗೆದುಕೊಂಡರು. ‘ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT