ಬುಧವಾರ, ನವೆಂಬರ್ 20, 2019
20 °C
ಶೈಕ್ಷಣಿಕ ಗುಣಮಟ್ಟ; ಶಿಕ್ಷಕ, ಪಾಲಕರ ಸಮನ್ವಯತೆ

‘ಪ್ರಕೃತಿ ಸೌಂದರ್ಯ’ದ ನಡುವೆ ಕಡವಾಡದ ಜನತಾ ವಿದ್ಯಾಲಯ ಎಂಬ ‘ಜ್ಞಾನದೇಗುಲ’

Published:
Updated:
Prajavani

ಕಾರವಾರ: ತಾಲ್ಲೂಕಿನ ಕಡವಾಡದ ಜನತಾ ವಿದ್ಯಾಲಯಕ್ಕೆ ಈಗ 59 ವರ್ಷ. ಎತ್ತರ ಪ್ರದೇಶದ ಸುಮಾರು ಏಳು ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಶಾಲೆಯ ಆವರಣ ಚಾಚಿಕೊಂಡಿದೆ. ಸುತ್ತಲಿನ ಹಸಿರು ಪ್ರಕೃತಿ ಸೌಂದರ್ಯ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

‘ಚುಟುಕು ಬ್ರಹ್ಮ’ ದಿನಕರ ದೇಸಾಯಿ ಅವರಿಂದ 1960ರಲ್ಲಿ ಸ್ಥಾಪಿತವಾದ ಈ ಶಾಲೆ, ಕೆನರಾ ವೆಲ್ಫೇರ್‌ ಟ್ರಸ್ಟ್ ಅಡಿಯಲ್ಲಿ ಸರ್ಕಾರಿ ಅನುದಾನಿತ ಪ್ರೌಢಶಾಲೆಯಾಗಿ ಮುಂದುವರಿದಿದೆ. ‘ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡಬೇಕು. ಗ್ರಾಮಾಂತರ ಭಾಗದ ಜನರು ಸುಶಿಕ್ಷಿತರಾಗಬೇಕು’ ಎಂಬ ಉದ್ದೇಶದಿಂದ ಸ್ಥಾಪನೆಗೊಂಡ ಈ ಶಾಲೆ, ಇಂದಿಗೂ ಇದೇ ಉದ್ದೇಶದಿಂದಲೇ ಕಾರ್ಯನಿರ್ವಹಿಸುತ್ತಿದೆ.

ಬಡ ಮಕ್ಕಳಿಗೆ ಉಚಿತ ಶಿಕ್ಷಣ: ‘ಶಾಲೆಯಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ. ಜತೆಗೆ, ಅವರಿಗೆ ಬಸ್‌ಪಾಸ್, ಸಮವಸ್ತ್ರವನ್ನೂ ನೀಡಲಾಗುತ್ತದೆ. ಕೇವಲ ಅನ್ನ– ಸಾಂಬಾರು ಎಂಬ ಬಿಸಿಯೂಟಕ್ಕೆ, ಶಿಕ್ಷಕರೆಲ್ಲ ಸೇರಿ ಪಲ್ಯವನ್ನೂ ಸೇರಿಸಿ ಮಕ್ಕಳಿಗೆ ಉಣಬಡಿಸುತ್ತಿದ್ದೇವೆ. ಸುತ್ತಲೂ ಸರ್ಕಾರಿ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಿದ್ದರೂ, ಪ್ರತಿ ವರ್ಷ ಹೆಚ್ಚಿನ ಮಕ್ಕಳು ನಮ್ಮ ಶಾಲೆಗೆ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಶೇರುಗಾರ್.

ಎಸ್ಸೆಸ್ಸೆಲ್ಸಿಯಲ್ಲಿ ಶೇ 100ಕ್ಕೆ 100: ‘2007, 2011 ಹಾಗೂ 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ತೇರ್ಗಡೆ ಹೊಂದಿದ್ದಾರೆ. ಕೊಂಕಣಿ, ಮರಾಠಿಯನ್ನೇ ಹೆಚ್ಚಾಗಿ ಮಾತನಾಡುವವರು ಈ ಭಾಗದಲ್ಲಿದ್ದರೂ, ಶಾಲೆಯ ಮೂವರು ವಿದ್ಯಾರ್ಥಿಗಳು ಈ ಬಾರಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ. ಅಕ್ಷಯ್ ರೇವಣಕರ್ ಎನ್ನುವ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 620 ಅಂಕ ಗಳಿಸಿ, ಕನ್ನಡ ಮಾಧ್ಯಮ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಪೈಕಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಇವೆಲ್ಲವೂ ಸಾಧ್ಯವಾಗಿದ್ದು ಶಿಕ್ಷಕರು, ಪಾಲಕರ ಸಹಕಾರದಿಂದ’ ಎನ್ನುತ್ತಾರೆ ಅವರು. 

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ‌್ನು ಕೆಲವು ತಂಡಗಳನ್ನಾಗಿ ಮಾಡುತ್ತೇವೆ. ಪ್ರತಿ ಶಿಕ್ಷಕರಿಗೂ ಒಂದೊಂದು ತಂಡದಲ್ಲಿನ ಎಲ್ಲ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗುತ್ತದೆ. ಅದರಂತೆ, ಅವರ ಪ್ರತಿಯೊಂದೂ ಚಟುವಟಿಕೆಗಳ ಮೇಲೆ ಆಯಾ ಶಿಕ್ಷಕರು ನಿಗಾ ಇಡುವುದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಇಷ್ಟು ಶೈಕ್ಷಣಿಕ ಪ್ರಗತಿ ಸಾಧ್ಯವಾಗಿದೆ’ ಎನ್ನುವುದು ಅವರ ಅಭಿಪ್ರಾಯ.

ಸಿ.ಸಿ.ಟಿ.ವಿ ಕ್ಯಾಮೆರಾ ಸುರಕ್ಷತೆ: ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆಯಲ್ಲಿ ಆರು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ, ಕಣ್ಗಾವಲು ಇಡಲಾಗಿದೆ. ಜತೆಗೆ, ಲೈಂಗಿಕ ಸುರಕ್ಷತಾ ಸಮಿತಿಯನ್ನು ರಚಿಸಿ, ಪ್ರತಿ ತಿಂಗಳೂ ಪಾಲಕರ ಸಭೆ ನಡೆಸಲಾಗುತ್ತದೆ. ಶಿಕ್ಷಕರ ಆನುಮತಿ ಇಲ್ಲದೇ ನಿರಂತರವಾಗಿ ವಾರದವರೆಗೆ ರಜೆ ಮಾಡುವ ವಿದ್ಯಾರ್ಥಿಗಳ ಮನೆಗೇ ತೆರಳಿ ಅವರ ಬಗ್ಗೆ ವಿಚಾರಿಸಲಾಗುತ್ತದೆ. 

ಪ್ರತಿಕ್ರಿಯಿಸಿ (+)