ಶಾಲೆಯ ಕೊಠಡಿ ದುರಸ್ತಿಗೆ ಮಂಜೂರಾಗಿದ್ದ ಅನುದಾನಕ್ಕೆ ತಡೆ

7
ಭಾನ್ಕುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸಂಪೂರ್ಣ ಶಿಥಿಲ

ಶಾಲೆಯ ಕೊಠಡಿ ದುರಸ್ತಿಗೆ ಮಂಜೂರಾಗಿದ್ದ ಅನುದಾನಕ್ಕೆ ತಡೆ

Published:
Updated:
Deccan Herald

ಸಿದ್ದಾಪುರ: ‘ತಾಲ್ಲೂಕಿನ ಭಾನ್ಕುಳಿ (ಹುಲಿಮನೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ’ ಎಂದು ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಪ್ರಮುಖರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಮ್ಮ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಇದ್ದು, 22 ವಿದ್ಯಾರ್ಥಿಗಳಿದ್ದಾರೆ. ಕಟ್ಟಡದಲ್ಲಿರುವ ಎರಡೂ ಕೊಠಡಿಗಳು ಶಿಥಿಲವಾಗಿವೆ. ಒಂದು ಕೊಠಡಿಯ ನಾಲ್ಕೂ ಗೋಡೆಗಳು ಬಿರುಕು ಬಿಟ್ಟಿದ್ದು, ಮತ್ತೊಂದರ ಚಾವಣಿಯ ಜಂತಿಗಳು ಹಾಳಾಗಿವೆ. ಇದ್ದುದರಲ್ಲಿಯೇ ಸ್ವಲ್ಪ ಉತ್ತಮವಾಗಿರುವ ಕೊಠಡಿಯಲ್ಲಿ ಶಾಲೆ ನಡೆಸುತ್ತಿದ್ದೇವೆ. ಮಳೆಗಾಲದಲ್ಲಿ ರಂಗಮಂದಿರದಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಸಮಸ್ಯೆ ವಿವರಿಸಿದರು.

‘ಈ ಶಾಲೆಯ ಕೊಠಡಿಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ₹ 17.40 ಲಕ್ಷ ಅನುದಾನ ಮಂಜೂರಾಗಿತ್ತು. ಶಿಥಿಲ ಕಟ್ಟಡ ಕೆಡವಲು ಟೆಂಡರ್ ಕೂಡ ಆಗಿತ್ತು. ಆ ಸಂದರ್ಭದಲ್ಲಿಯೇ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂಬ ವಿಷಯ ತಿಳಿಸಲಾಯಿತು. ಈ ಅನುದಾನದ ಒಂದು ಭಾಗವನ್ನು ಹುತ್ಗಾರ ಶಾಲೆಗೆ ವರ್ಗಾವಣೆ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಈ ವಿಷಯವನ್ನು ನಮ್ಮ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಹಾಗೂ ಶಿರಸಿ–ಸಿದ್ದಾಪುರ ಕ್ಷೇತ್ರದ ಶಾಸಕರಿಗೆ ತಿಳಿಸಿದ್ದೇವೆ. ಆದರೆ, ಹಣ ಬಿಡುಗಡೆಯ ಬಗ್ಗೆ ಅವರಿಂದ ಖಚಿತ ಭರವಸೆ ಸಿಕ್ಕಿಲ್ಲ’ ಎಂದು ಹೇಳಿದರು.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆರ್.ನಾಯ್ಕ ಅವರನ್ನು ಸಂಪರ್ಕಿಸಿದಾಗ, ‘ಶಾಸಕರ ಅಭಿವೃದ್ಧಿ ನಿಧಿಯಿಂದ ಮಂಜೂರಾಗಿದ್ದ ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡಬೇಕಾಗಿತ್ತು. ಆದರೆ, ಕಾಮಗಾರಿ ಆರಂಭಗೊಳ್ಳದ ಕಾರಣ ಅನುದಾನವನ್ನು ತಡೆ ಹಿಡಿದು ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಈ ಶಾಲೆಯ ಕಟ್ಟಡ ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಬೇರೆ ಅನುದಾನ ಇದುವರೆಗೆ ಮಂಜೂರಾಗಿಲ್ಲ’ ಎಂದು ಪ್ರತಿಕ್ರಿಯೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !