ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರ್ಜಿನಮೂಲೆ ಪ್ರಾಥಮಿಕ ಶಾಲೆ: ಬೀಳುವ ಸ್ಥಿತಿಯಲ್ಲಿ ಕೊಠಡಿ

ಎರ್ಜಿನಮೂಲೆ ಪ್ರಾಥಮಿಕ ಶಾಲೆ: ಗೆದ್ದಲು ಹಿಡಿದ ನಲಿ– ಕಲಿ ಪರಿಕರಗಳು
Last Updated 4 ಮಾರ್ಚ್ 2021, 15:41 IST
ಅಕ್ಷರ ಗಾತ್ರ

ಹೊನ್ನಾವರ: ಐದು ತರಗತಿಗಳ 25 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಒಂದೇ ಕೊಠಡಿಯಲ್ಲಿ ಅಧ್ಯಯನ, ಅಧ್ಯಾಪನ ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ. ಪಕ್ಕದ ಕೊಠಡಿ ಬೀಳುವ ಹಂತದಲ್ಲಿದೆ. ಹಾಗಾಗಿ ಭಯದಲ್ಲೇ ದಿನವಿಡೀ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಇದು ತಾಲ್ಲೂಕಿನ ಹೆರಂಗಡಿ ಗ್ರಾಮದ ಎರ್ಜಿನಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ. ಶಾಲೆಗೆ ಎರಡು ಕೊಠಡಿಗಳಿದ್ದು, ಹಂಚಿನ ಚಾವಣಿಯಿರುವ ಮೂಲ ಶಾಲಾ ಕಟ್ಟಡ ತೀರಾ ಶಿಥಿಲವಾಗಿದೆ. ಅಲ್ಲಿನ ಗೋಡೆ, ಬಾಗಿಲುಗಳೆಲ್ಲ ಬಿರುಕು ಬಿಟ್ಟಿವೆ.

ಒಂದು ಕಾಲದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಊರಿನ ನಾಗರಿಕರನ್ನು ಇಲ್ಲಿನ ಹೊಸ ಮಾದರಿಯ ನಲಿ-ಕಲಿ ಪರಿಕರಗಳು ಆಕರ್ಷಿಸಿದ್ದವು. ಈಗ ಅವು ಹಾಗೂ ಶಾಲೆಯ ಅಮೂಲ್ಯ ದಾಖಲೆಗಳ ಕಾಗದ ಪತ್ರಗಳೆಲ್ಲ ಗೆದ್ದಲು ಹಿಡಿದು ಉಪಯೋಗಕ್ಕೆ ಬಾರದ ಸ್ಥಿತಿಯನ್ನು ತಲುಪಿವೆ.

‘ಶಿಕ್ಷಕರು ಉತ್ತಮವಾಗಿ ಪಾಠ ಮಾಡುತ್ತಾರೆ. ಲಾಕ್‌ಡೌನ್ ನಂತರದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಏರುತ್ತಿದೆ. ಕೊಠಡಿಯಿಲ್ಲದೆ ಪರಿತಪಿಸಬೇಕಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸ್ಥಿತಿಯನ್ನು ನೋಡಿದರೆ ಅಯ್ಯೋ ಎನಿ ಸುತ್ತದೆ' ಎಂದು ಶಾಲೆಯ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಗೌಡ ಹೇಳಿದರು.

‘ಶಾಸಕ ಸುನೀಲ ನಾಯ್ಕ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ ಕೊಠಡಿ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಲಾಗಿದೆ. ಅವರು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ’ ಎಂದೂ ಅವರು ತಿಳಿಸಿದರು.

ತಾಲ್ಲೂಕಿನ ಹೆಚ್ಚಿನ ಶಾಲೆಗಳಿಗೆ ಸ್ವಂತ ಜಾಗವಿಲ್ಲ. ಶೇ 80ರಷ್ಟು ಶಾಲೆಗಳು ಅರಣ್ಯ ಅತಿಕ್ರಮಣದ ಜಾಗದಲ್ಲಿವೆ. ಸರ್ವಶಿಕ್ಷಣ ಅಭಿಯಾನದ ಮೂಲಕ ಶಾಲಾ ಕಟ್ಟಡಕ್ಕೆ ನೀಡುತ್ತಿದ್ದ ಅನುದಾನ 5– 6 ವರ್ಷಗಳಿಂದ ಸಿಗುತ್ತಿಲ್ಲ. ಶಾಲಾ ಕಟ್ಟಡಗಳಿಗೆ ಅನುದಾನ ಪಡೆಯಲು ಜನಪ್ರತಿನಿಧಿಗಳ ಮರ್ಜಿಗೆ ಕಾಯಬೇಕಾದ ಅನಿವಾರ್ಯ ಪ್ರಸಂಗವಿದೆ. ಹಾಗಾಗಿ ಎರ್ಜಿನಮೂಲೆಯ ಶಾಲೆಯ ಗತಿಯೇ ಉಳಿದ ಅನೇಕ ಶಾಲೆಗಳಿಗೂ ಬಂದಿದೆ ಎಂದು ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘300 ಕೊಠಡಿ ಅಗತ್ಯ’:

‘ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟೂ 270 ಶಾಲೆಗಳಿವೆ. ಎರ್ಜಿನಮೂಲೆ ಶಾಲೆಗೆ ಅಗತ್ಯವಿರುವಂತೆ ತಾಲ್ಲೂಕಿನಲ್ಲಿರುವ ಮಂಕಿ, ಮಲ್ಲುಕುರ್ವ ಶಾಲೆಗಳು ಸೇರಿದಂತೆ ಇನ್ನೂ ಕೆಲವು ಶಾಲೆಗಳಿಗೆ ಒಟ್ಟು 300 ಕೊಠಡಿಗಳ ಅಗತ್ಯವಿದೆ. ಕಟ್ಟಡಕ್ಕೆ ಸರ್ಕಾರದ ಅನುದಾನ ನಿರೀಕ್ಷಿಸಲಾಗಿದೆ. ಈ ವರ್ಷ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಂದಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT