ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಸಜ್ಜು

ಪ್ರಸ್ತಾವ ಹಂತಕ್ಕೆ ಸೀಮಿತವಾಗಿರುವ ಸುಸಜ್ಜಿತ ಕೊಠಡಿ ನಿರ್ಮಾಣ
Last Updated 15 ಮೇ 2022, 15:49 IST
ಅಕ್ಷರ ಗಾತ್ರ

ಕಾರವಾರ: ಶೈಕ್ಷಣಿಕ ವರ್ಷ ಮತ್ತೆ ಶುರುವಾಗಿದೆ. ಮಕ್ಕಳು ಹೊಸ ಹುರುಪಿನೊಂದಿಗೆ, ಸಕಾರಾತ್ಮಕ ಚಿಂತನೆಗಳೊಂದಿಗೆ ವಿದ್ಯಾ ದೇಗುಲಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೋವಿಡ್ ನಂತರದ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೂ ಬೇಡಿಕೆ ಉತ್ತಮವಾಗಿದೆ. ಆದರೆ, ಕೆಲವು ಮೂಲ ಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಅವುಗಳಲ್ಲಿ ಪ್ರಮುಖವಾದುದು, ಮಣ್ಣಿನ ಗೋಡೆಯ ಶಾಲೆಗಳ ನಿರ್ವಹಣೆ.

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 935 ಶಾಲೆಗಳಿವೆ. ಅವುಗಳ ಪೈಕಿ 282 ಶಾಲೆಗಳಲ್ಲಿ ಇಂದಿಗೂ ಮಣ್ಣಿನ ಗೋಡೆಗಳಿವೆ. 370 ಕೊಠಡಿಗಳಲ್ಲಿ ದೊಡ್ಡ ಮಟ್ಟಿನ ದುರಸ್ತಿಯೇ ಆಗಬೇಕಿದೆ. ಇದಕ್ಕೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ₹ 5.34 ಕೋಟಿ ಅನುದಾನಕ್ಕೆ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ. 470 ಕೊಠಡಿಗಳು ಸಣ್ಣ ಪ್ರಮಾಣದ ದುರಸ್ತಿಗೆ ಕಾಯುತ್ತಿವೆ. ಇದಕ್ಕೆ ₹ 1.09 ಕೋಟಿ ಅಗತ್ಯ ಎಂದು ಅಂದಾಜಿಸಲಾಗಿದೆ. ಶೈಕ್ಷಣಿಕ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಒಟ್ಟು 79 ಹೊಸ ಕೊಠಡಿಗಳಿಗೆ ಬೇಡಿಕೆಯಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿರಸಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಬಹುತೇಕ ಶಾಲೆಗಳು ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿವೆ. ವಾರಗಳಿಗೂ ಹಿಂದಿನಿಂದ ಕೆಲವು ಶಾಲೆಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಆದರೆ, ಕಟ್ಟಡಗಳ ನಿರ್ವಹಣೆ, ಚಾವಣಿ ದುರಸ್ತಿ ಸೇರಿದಂತೆ ನಿರ್ವಹಣಾ ಕೆಲಸಗಳು ಅನುದಾನದ ಕೊರತೆಯಿಂದ ಮಂದಗತಿಯಲ್ಲಿ ನಡೆಯುತ್ತಿವೆ.

ಜಿಲ್ಲೆಯ 1,183 ಶಾಲೆಗಳ ಪೈಕಿ 525 ಮಣ್ಣಿನ ಗೋಡೆಗಳ ಶಾಲೆಗಳಿವೆ. 247 ಹೊಸ ಕೊಠಡಿಗಳಿಗೆ ಬೇಡಿಕೆ ಇದೆ. ಶಾಲೆಗಳ ದುರಸ್ಥಿ, ಹೊಸ ಕಟ್ಟಡ ಸೇರಿದಂತೆ ಸುಮಾರು ₹24 ಕೋಟಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಕೆಯಾಗಿದೆ.

ಶಿಕ್ಷಕರ ಕೊರತೆಯೇ ದೊಡ್ಡ ಸಮಸ್ಯೆಯಾಗಿದ್ದು 102 ಶಾಲೆಗಳಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. 1,271 ಶಿಕ್ಷಕ ಹುದ್ದೆ ಭರ್ತಿಯಾಗಬೇಕಿದೆ. ಕೆಲವು ಶಾಲೆಗಳಲ್ಲಿ ನೂರಾರು ಮಕ್ಕಳಿದ್ದರೂ ಇಬ್ಬರು, ಮೂವರು ಮಾತ್ರ ಕೆಲಸ ನಿರ್ವಹಿಸುವ ಸ್ಥಿತಿ ಇದೆ.

‘ಜಿಲ್ಲೆಗೆ 606 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಅವರನ್ನು ಒಬ್ಬರೂ ಶಿಕ್ಷಕರಿಲ್ಲದ ಶಾಲೆಗೆ ನಿಯೋಜಿಸಲಾಗುವುದು. ವಿಷಯವಾರು ಶಿಕ್ಷಕರ ಹೊಂದಾಣಿಕೆಗೆ ಕ್ರಮವಹಿಸಲಾಗುವುದು’ ಎಂದು ಡಿಡಿಪಿಐ ಪಿ.ಬಸವರಾಜ್ ತಿಳಿಸಿದ್ದಾರೆ.

ಹೊನ್ನಾವರ

ಗುಂಡಬಾಳ, ಎಜನಮೂಲೆ ಮೊದಲಾದ ಶಾಲೆಗಳಲ್ಲಿ ದುಃಸ್ಥಿತಿಯಲ್ಲಿದ್ದ ಕೊಠಡಿಗಳನ್ನು ದುರಸ್ಥಿ ಮಾಡಲಾಗಿದೆ. ಶಾಲೆಯ ಕೊಠಡಿ ಹಾಗೂ ಆವರಣವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಸ್ವಲ್ಪ ಹಿನ್ನಡೆಯಾಗಿದೆ.

‘ಕಡತೋಕ, ಚಂದಾವರ ಮೊದಲಾದೆಡೆ ಕೆಲ ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಮಳೆ ಬೀಳುತ್ತಿರುವುದರಿಂದ ಈ ಸಮಸ್ಯೆಯೂ ಬಗೆಹರಿಯಬಹುದು’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ನಾಯ್ಕ ತಿಳಿಸಿದರು.

ಕುಮಟಾ

ಮಳೆಗಾಲದಲ್ಲಿ ತಾಲ್ಲೂಕಿನ ದೂರದ ಊರುಗಳಾದ ಬಂಗಣೆ, ಕಲವೆ ಹಾಗೂ ಯಾಣದಿಂದ ಬಸ್ಸಿನಲ್ಲಿ ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಉಂಟಾಗುವ ತೊಂದರೆ ಗಮನಿಸಿ ಕುಮಟಾದಲ್ಲಿ ಅವರಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್. ಭಟ್ಟ ಮಾಹಿತಿ ನೀಡಿದರು.

ಶಾಲೆಗೆ ರಜೆ ಬೀಳುವ ಮೊದಲೇ ಶಿಕ್ಷಕರು ಶಾಲೆಗಳ ಸುರಕ್ಷತೆಯ ಬಗ್ಗೆ ಮೊದಲ ಸುತ್ತಿನ ಪರಿಶೀಲನೆ ನಡೆಸಿದ್ದಾರೆ. ಶಾಲೆ ಆರಂಭಕ್ಕೆ ಮುಂಚಿತವಾಗಿ ಶಿಕ್ಷಕರಿಗೆ ಶಾಲಾ ಸುರಕ್ಷತೆಯ ಬಗ್ಗೆ ತರಬೇತಿ ನೀಡಲಾಗಿದೆ. ಗಾಳಿ-ಮಳೆಗೆ ಮರಗಳು ಶಾಲಾ ಚಾವಣಿಯ ಮೇಲೆ ಬೀಳುವಂಥ, ದುರ್ಬಲವಾಗಿರುವ ಚಾವಣಿ ಇರುವಂಥ ಪ್ರಕರಣಗಳು ಇಲ್ಲ ಎಂದರು.

ಅಂಕೋಲಾ

ಶಾಲಾ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ಕಾರಣ ಹಿಂದಿನ ಎರಡು ವರ್ಷ ಶೈಕ್ಷಣಿಕ ಅವಧಿ ಕಡಿತಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ, ಬೌದ್ಧಿಕ ಸಾಮರ್ಥ್ಯ ಕುಸಿತವಾಗಿದೆ. ಈ ಹಿನ್ನಲೆ ಶಿಕ್ಷಕರಿಗೆ ಎರಡು ದಿನಗಳ ಕಲಿಕಾ ಚೇತರಿಕೆ ತರಬೇತಿ ನೀಡಲಾಗಿದೆ. ನಿಗದಿತ ಅವಧಿಗಿಂತ ಮುನ್ನ ಶಾಲೆ ಆರಂಭಕ್ಕೆ ಪಾಲಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮೇ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಒಂದು ವೇಳೆ ಶಾಲೆ ಆರಂಭಗೊಂಡರೆ ವಿದ್ಯಾರ್ಥಿ ಬಿಸಿಯೂಟ ಸೌಲಭ್ಯ ಕಲ್ಪಿಸಲು ಅಡಚಣೆ ಉಂಟಾಗಲಿದೆ. ಉಷ್ಣಾಂಶ ಹೆಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಬಹುದು ಎಂದು ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಿದ್ದಾಪುರ

ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಅಗತ್ಯ ಪೂರ್ವ ತಯಾರಿ ನಡೆದಿದೆ. ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶಾಲಾರಂಭಕ್ಕೆ ಸಮಸ್ಯೆ ಉಂಟಾಗದಂತೆ ನಿಗಾ ಇಡಲಾಗಿದೆ. 80 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಸೋಮವಾರದಿಂದ ಕೆಲಸಕ್ಕೆ ಹಾಜರಾಗುತ್ತಾರೆ’ ಎಂದು ಬಿ.ಇ.ಒ ಸದಾನಂದ ಸ್ವಾಮಿ ಹೇಳಿದರು.

‘ಶಾಲೆಯ ಕೊಠಡಿಗಳ ಸುರಕ್ಷತೆಯ ಬಗ್ಗೆ ಪರಿಶೀಲಿಸಿದ್ದೇವೆ. ಶಿಕ್ಷಕರು ಮತ್ತು ಪಾಲಕರೆಲ್ಲ ಒಂದಾಗಿ ಶಾಲೆ ಆರಂಭಕ್ಕೆ ತಯಾರಿ ನಡೆಸಿದ್ದೇವೆ’ ಎಂದು ಡೊಂಬೆಕೈ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪತಿ ಈರಾ ನಾಯ್ಕ ಹೇಳಿದರು.

ಭಟ್ಕಳ

‘ತಾಲ್ಲೂಕಿನಲ್ಲಿ 175 ಶಾಲೆಗಳಿದ್ದು, 618 ಶಿಕ್ಷಕರು ಕಾರ್ಯನಿರ್ವಹಿಸಬೇಕಾದ ಜಾಗದಲ್ಲಿ 495 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 123 ಶಿಕ್ಷಕರ ಕೊರತೆ ಇದೆ. 8 ಶಾಲೆಗಳ 17 ಕೊಠಡಿಗಳು ಶಿಥಿಲಾವಸ್ಥೆ ತಲುಪಿದೆ. ಇದನ್ನು ನೆಲಸಮ ಮಾಡಲು ಆದೇಶಿಸಲಾಗಿದೆ. 118 ಕೊಠಡಿಗಳು ದುರಸ್ಥಿ ಆಗಬೇಕಾಗಿದೆ.76 ಕೊಠಡಿಗಳು ದೊಡ್ಡ ಪ್ರಮಾಣದ ದುರಸ್ಥಿ ಆಗಬೇಕಾಗಿದ್ದು, ಅಂದಾಜು ₹2.73 ಕೋಟಿ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ತಿಳಿಸಿದ್ದಾರೆ.

ದಾಂಡೇಲಿ

ತಾಲ್ಲೂಕಿನ ಸರ್ಕಾರಿ ಶಾಲೆಗಳು ಪುನರಾರಂಭಕ್ಕೆ ಸಜ್ಜುಗೊಂಡಿದ್ದು ಸ್ವಚ್ಛತೆ ಕಾರ್ಯ ಭರದಿಂದ ನಡೆದಿದೆ. ಸಣ್ಣ ಪುಟ್ಟ ದುರಸ್ತಿ ಕಾರ್ಯಗಳೂ ಚುರುಕುಗೊಂಡಿವೆ.

‘ಶಿಕ್ಷಣ ಇಲಾಖೆ ನಿರ್ದೇಶನದಂತೆ ಅಗತ್ಯ ಸಿದ್ಧತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಪಾಲಕರ ಸಭೆ ನಡೆಸಲಾಗಿದೆ. 16 ರಂದು ತಳಿರು ತೋರಣಗಳಿಂದ ಶಾಲಾ ಪ್ರಾರಂಭೋತ್ಸವದ ಜತೆ ಮಕ್ಕಳನ್ನು ಸ್ವಾಗತಿಸಲಾಗುತ್ತದೆ’ ಎನ್ನುತ್ತಾರೆ ಕೊಡಪಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶಂಷಾನ್ ತಹಶೀಲ್ದಾರ.

ಶಾಲೆಗೆ ಸ್ವಂತ ಕಟ್ಟಡ

‘ಎರಡು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದ ಪ್ರಾಥಮಿಕ ಶಾಲೆಗೆ, ಸ್ವಂತ ಕಟ್ಟಡ ತಯಾರಾಗಿದೆ. ಈ ವರ್ಷದಿಂದ ಊರಿನ ಮಕ್ಕಳು ಹೊಸ ಕಟ್ಟಡದಲ್ಲಿ ಕಲಿಯಲಿದ್ದಾರೆʼ ಎಂದು ಮುಂಡಗೋಡದ ಇಂದಿರಾನಗರ ಗ್ರಾಮಸ್ಥ ಸಂತೋಷ ರಾಯ್ಕರ ಹೇಳಿದರು.

‘ಇಂದಿರಾನಗರ ಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಎರಡು ಕೊಠಡಿಗಳನ್ನು ಈಗಾಗಲೇ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಶೇ 30ರಷ್ಟು ಪುಸ್ತಕಗಳ ಪೂರೈಕೆಯಾಗಿದ್ದು, ಆರಂಭದ ತಿಂಗಳಲ್ಲಿಯೇ ಎಲ್ಲ ಪುಸ್ತಕಗಳು ಬರುವ ನಿರೀಕ್ಷೆಯಿದೆ’ ಎಂದು ಮುಂಡಗೋಡ ಬಿ.ಇ.ಒ ವೆಂಕಟೇಶ ಪಟಗಾರ ಹೇಳಿದರು.

––––––––––––––

‌ಕಾರವಾರ ಶೈಕ್ಷಣಿಕ ಜಿಲ್ಲೆ

ತಾಲ್ಲೂಕು: ಒಟ್ಟು ಶಾಲೆಗಳು: ಮಣ್ಣಿನ ಗೋಡೆಗಳಿರುವ ಶಾಲೆಗಳು: ಕೊಠಡಿ ಬೇಡಿಕೆ

ಕಾರವಾರ: 140: 32: 14

ಅಂಕೋಲಾ: 152: 41: 17

ಕುಮಟಾ: 206: 21: 16

ಹೊನ್ನಾವರ: 262: 137: 17

ಭಟ್ಕಳ: 175: 51: 15

ಒಟ್ಟು: 935: 282: 79

–––––

ಶಿರಸಿ ಶೈಕ್ಷಣಿಕ ಜಿಲ್ಲೆ

ತಾಲ್ಲೂಕು: ಒಟ್ಟು ಶಾಲೆಗಳು: ಮಣ್ಣಿನ ಗೋಡೆಯ ಶಾಲೆಗಳು: ಕೊಠಡಿ ಬೇಡಿಕೆ

ಶಿರಸಿ: 296: 98: 37

ಸಿದ್ದಾಪುರ: 225: 20: 21

ಯಲ್ಲಾಪುರ: 177: 152: 31

ಮುಂಡಗೋಡ: 145: 134: 74

ಹಳಿಯಾಳ: 176: 64: 63

ಜೋಯಿಡಾ: 164: 57: 21

ಒಟ್ಟೂ: 1,183: 525: 247

* ಆಧಾರ: ಶಿಕ್ಷಣ ಇಲಾಖೆ

–––––––––

* ಶಾಲೆಗಳ ಪುನರಾರಂಭಕ್ಕೆ ಸಕಲ ಸಿದ್ಧತೆಯಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಸೌಕರ್ಯ ಒದಗಿಸಲು ಸೂಚಿಸಲಾಗಿದೆ.
– ಹರೀಶ್ ಗಾಂವಕರ್, ಕಾರವಾರ ಡಿ.ಡಿ.ಪಿ.ಐ

* ನರೇಗಾ ಅನುದಾನ, ರಾಜ್ಯ ವಲಯದ ಅನುದಾನ ಬಳಸಿ ಶಾಲಾ ಕಟ್ಟಡಗಳ ನಿರ್ವಹಣೆ ನಡೆದಿದೆ. ಸುಸ್ಥಿತಿಯ ಕಟ್ಟಡದಲ್ಲಿ ಮಾತ್ರ ತರಗತಿಗಳು ನಡೆಯಲಿವೆ.
– ಪಿ.ಬಸವರಾಜ್, ಶಿರಸಿ ಡಿ.ಡಿ.ಪಿ.ಐ

* ವಿದ್ಯಾರ್ಥಿಗಳಲ್ಲಿ ವಯೋ ಸಹಜ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಿದೆ. ಆ ಅಂತರವನ್ನು ತುಂಬಿಕೊಳ್ಳಲು ಅವಧಿಗಿಂತ ಮುನ್ನ ಶಾಲೆ ಆರಂಭ ಸ್ವಾಗತಾರ್ಹ. ಸೆಖೆ ವಿಪರೀತವಿರುವದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯೂ ಉಂಟಾಗಬಹುದು ಎಂಬ ಆತಂಕವಿದೆ.

– ಕೇಶವ ನಾಯ್ಕ ಅಂಕೋಲಾ, ಪಾಲಕ

* ಶಾಲೆಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಕ್ರಮವಹಿಸಲು ಗ್ರಾಮ ಪಂಚಾಯಿತಿ ಪಿಡಿಓಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ಹೆಚ್ಚುವರಿ ಶಿಕ್ಷಕರ ಪುನರ್ ನಿಯೋಜನೆಯ ನಂತರ 68 ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಕರ ಕೊರತೆ ನೀಗಿಸಲಾಗುವುದು.

– ಎಸ್.ಎಂ.ಹೆಗಡೆ, ಹೊನ್ನಾವರ ಬಿ.ಇ.ಒ

* ಕೋವಿಡ್ ಕಾರಣಕ್ಕೆ ಎರಡು ವರ್ಷಗಳಿಂದ ವಿದ್ಯಾಭ್ಯಾಸ ಕುಂಠಿತವಾಗಿದೆ. ಈ ಬಾರಿ ಮುಂಚಿತವಾಗಿ ಶಾಲೆ ಆರಂಭಗೊಂಡಿದ್ದು ಸಮಾಧಾನ ತಂದಿದೆ.

– ಶ್ರೀನಿವಾಸ ನಾಯರ್ ದಾಂಡೇಲಿ, ಪಾಲಕ

------

ಪ್ರಜಾವಾಣಿ ತಂಡ:ಸದಾಶಿವ ಎಂ.ಎಸ್., ಗಣಪತಿ ಹೆಗಡೆ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮಾರುತಿ ಹರಿಕಂತ್ರ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ಶಾಂತೇಶ ಬೆನಕನಕೊಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT