ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಿತು ರಜೆ, ಇನ್ನು ಶಾಲೆಗೆ ಹೆಜ್ಜೆ; ಮಕ್ಕಳಿಗೆ ಮೊದಲ ದಿನ ಸಿಹಿಯೂಟದ ಸ್ವಾಗತ

ಶಾಲಾ ಪ್ರಾರಂಭೋತ್ಸವದ ಸಡಗರ
Last Updated 28 ಮೇ 2019, 12:16 IST
ಅಕ್ಷರ ಗಾತ್ರ

ಕಾರವಾರ:ಬೇಸಿಗೆ ರಜಾ ದಿನಗಳನ್ನು ಸಂಭ್ರಮದಿಂದ ಕಳೆದಮಕ್ಕಳು, ಬುಧವಾರದಿಂದ ಮತ್ತೆ ಶಾಲೆಗಳತ್ತ ಮತ್ತಷ್ಟು ಖುಷಿಯಿಂದ ಹೆಜ್ಜೆ ಹಾಕಲಿದ್ದಾರೆ. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರೂ ಸಜ್ಜಾಗಿದ್ದು, ಮೊದಲ ದಿನ ಮಕ್ಕಳಿಗೆ ಸಿಹಿಯೂಟ ನೀಡಲಿದ್ದಾರೆ. ಅಲ್ಲದೇ ಸರ್ಕಾರವು ನೀಡಿರುವ ಪ್ರೋತ್ಸಾಹಕ ಸಾಮಗ್ರಿಯನ್ನೂ ಹಂಚಲಿದ್ದಾರೆ.

ಶಾಲಾ ಪ್ರಾರಂಭೋತ್ಸವಕ್ಕೂ ಮೊದಲೇ ಶಾಲಾ ಆವರಣ, ತರಗತಿಗಳು, ಕೊಠಡಿಗಳು, ಅಡುಗೆಕೋಣೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಸ್ವಚ್ಛಗೊಳಿಸಿ ಇಟ್ಟುಕೊಳ್ಳಬೇಕು. ಶಾಲಾ ಸುರಕ್ಷತೆಯ ಬಗ್ಗೆಯೂ ಖಾತ್ರಿ ಮಾಡಿಕೊಳ್ಳಬೇಕು.ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳಲು ಜಾಥಾ ಹಮ್ಮಿಕೊಳ್ಳಬೇಕು. ಶಿಕ್ಷಕರು ಮಕ್ಕಳಮನೆಗಳಿಗೆ ಭೇಟಿ ನೀಡಬೇಕು. ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

ಶಾಲೆಯ ಆರಂಭದ ದಿನ ಹಬ್ಬದ ವಾತಾವರಣ ಸೃಷ್ಟಿ ಮಾಡಬೇಕು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು. ಮಧ್ಯಾಹ್ನ ಮಕ್ಕಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲೆಯ ವಾರ್ಷಿಕ ಯೋಜನೆ ಮತ್ತು ಶೈಕ್ಷಣಿಕಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕು. ತರಗತಿ ಹಾಗೂ ಶಿಕ್ಷಕರ ವೇಳಾಪಟ್ಟಿಗಳನ್ನು ತಯಾರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಮಿಂಚಿನ ಸಂಚಾರ:ಎಲ್ಲ ಶಾಲೆಗಳು ತೆರೆದಿವೆಯೇ ಮತ್ತು ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆಯೇ ಎಂದು ಪರಿಶೀಲಿಸಲು ಮೇಲ್ವಿಚಾರಕರು ‘ಮಿಂಚಿನ ಸಂಚಾರ’ ನಡೆಸಲಿದ್ದಾರೆ. ಕ್ಷಿಪ್ರವಾಗಿ ನಡೆಯುವ ಈ ಭೇಟಿಯು ಮೇ 29ರಿಂದ ಜೂನ್ 8ರವರೆಗೆ ನಿಗದಿಯಾಗಿದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದರಂತೆ ಅವರು ತಲಾ ಐದು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ.

ಪಠ್ಯ‍ಪುಸ್ತಕ, ಸಮವಸ್ತ್ರ:ಕಾರವಾರ ಶೈಕ್ಷಣಿಕ ಜಿಲ್ಲೆಗೆ 6,82,277 ಪಠ್ಯ‍ಪುಸ್ತಕಗಳನ್ನು ಪೂರೈಸಲು ಬೇಡಿಕೆ ಸಲ್ಲಿಸಲಾಗಿತ್ತು. ಅವುಗಳ ಪೈಕಿಈವರೆಗೆ ಶೇ 5,62,162 ಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿವೆ. 44,910 ಶಾಲಾ ಸಮವಸ್ತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅವು ಶೀಘ್ರವೇ ಪೂರೈಕೆಯಾಗಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಶಿಕ್ಷಣ ಹಕ್ಕು ಕಾಯ್ದೆಯಡಿ ಜಿಲ್ಲೆಯಲ್ಲಿ 13 ಸೀಟುಗಳು ಲಭ್ಯವಿದ್ದವು. ಆದರೆ, ಒಂದು ಸೀಟಿಗೂ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿಲ್ಲ ಎಂದುಅಧಿಕಾರಿಗಳುಹೇಳಿದ್ದಾರೆ.

‍ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು

ತಾಲ್ಲೂಕು; ಮುಖ್ಯ ಶಿಕ್ಷಕರು; ಸಹಾಯಕ ಶಿಕ್ಷಕರು; ದೈಹಿಕ ಶಿಕ್ಷಣ ಶಿಕ್ಷಕರು; ಒಟ್ಟು

ಕಾರವಾರ; 02; 22; –; 24

ಅಂಕೋಲಾ;18;33;01;52

ಕುಮಟಾ;19;50;02;71

ಹೊನ್ನಾವರ;20;77;–;97

ಭಟ್ಕಳ;12;47;–;59

ಒಟ್ಟು; 71; 229; 03; 303

ಕಾಡಲಿದೆ ಶಿಕ್ಷಕರ ಕೊರತೆ:ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಮುಂದುವರಿದಿದೆ. ಈಸಾಲಿನಲ್ಲೂ ಸಮಸ್ಯೆ ಉಳಿದುಕೊಂಡಿದೆ. ಇದರಿಂದ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತದೆ ಎಂಬುದು ಪೋಷಕರ ನಿರಂತರ ಆತಂಕವೂ ಆಗಿದೆ. ಅಲ್ಲದೇ ಇರುವ ಶಿಕ್ಷಕರೇ ಹೆಚ್ಚು ಒತ್ತಡ ತೆಗೆದುಕೊಂಡು ಬೋಧನೆ ಮಾಡಬೇಕಾದ ಸ್ಥಿತಿಯಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ‘134 ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ಮಾಡಲಾಗಿದೆ. ಶೀಘ್ರವೇ ನೇಮಕಾತಿ ನಡೆಯಲಿದೆ’ ಎಂದು ತಿಳಿಸಿದರು.

ಶಾಲೆಗೆ ಮಣ್ಣಿನ ಗೋಡೆ:ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಮಣ್ಣಿನ ಗೋಡೆಗಳಿವೆ. ಅವುಗಳ ಮರುನಿರ್ಮಾಣ ಅಥವಾ ದುರಸ್ತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸೂಕ್ತ ಪ್ರತಿಕ್ರಿಯೆ ಇಲಾಖೆಯಿಂದ ಬಂದಿಲ್ಲ ಎಂಬುದು ಶಾಲಾಭಿವೃದ್ಧಿ ಸಮಿತಿ ಮುಖಂಡರ ಬೇಸರವಾಗಿದೆ.

ಎಲ್ಲಿ, ಎಷ್ಟು ಗೋಡೆಗಳು?

ತಾಲ್ಲೂಕು; ಶಾಲೆಗಳ ಸಂಖ್ಯೆ; ಕೊಠಡಿಗಳು

ಕಾರವಾರ;29;63

ಅಂಕೋಲಾ;21;38

ಕುಮಟಾ;54;32

ಹೊನ್ನಾವರ;31;40

ಭಟ್ಕಳ; 51;126

ಒಟ್ಟು; 186; 299

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT