ಲೋಕಸಭಾ ಚುನಾವಣೆ: ಸಿಬ್ಬಂದಿಗೆ ಎರಡನೇ ಹಂತದ ತರಬೇತಿ 16ರಂದು

ಶುಕ್ರವಾರ, ಏಪ್ರಿಲ್ 26, 2019
21 °C
ಜಿಲ್ಲಾಡಳಿತದ ಸಿದ್ಧತೆ ಪೂರ್ಣ: ಡಾ.ಕೆ.ಹರೀಶಕುಮಾರ್

ಲೋಕಸಭಾ ಚುನಾವಣೆ: ಸಿಬ್ಬಂದಿಗೆ ಎರಡನೇ ಹಂತದ ತರಬೇತಿ 16ರಂದು

Published:
Updated:
Prajavani

ಕಾರವಾರ: ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ ಪೂರ್ಣಗೊಂಡಿದೆ. ಮತಗಟ್ಟೆ ಸಿಬ್ಬಂದಿಗೆ ಏ.16ರಂದು ಎರಡನೇ ಹಂತದ ತರಬೇತಿಯನ್ನೂ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಸಲ ನಿಗದಿತ ಮಾನದಂಡದಲ್ಲಿರುವ ಮತದಾನ ಕೊಠಡಿಯನ್ನೇ ನೀಡಲಾಗುತ್ತದೆ. ಹಿರಿಯರು, ದೃಷ್ಟಿದೋಷ ಉಳ್ಳವರ ಹಾಗೂ ಅಂಗವಿಕಲ ಮತದಾರರ ಅನುಕೂಲಕ್ಕಾಗಿ ಭೂತಕನ್ನಡಿ, ವೀಲ್ ಚೇರ್, ವಿಶೇಷ ಸ್ವಯಂ ಸೇವಕರು, ಸಾರಿಗೆ ಸೌಲಭ್ಯ, ವಿಶ್ರಾಂತಿ ಕೊಠಡಿ, ಪ್ರತ್ಯೇಕ ವಾಹನ ಪಾರ್ಕಿಂಗ್ ಸೌಕರ್ಯ, ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸಾಲಿನಂತಹ ಸೌಲಭ್ಯ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಿದಾಗ (ರ‍್ಯಾಂಡಮೈಸೇಷನ್) ಅವರು ಯಾವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಾವ ವಿಧಾಸನಭೆ ಕ್ಷೇತ್ರದಲ್ಲೂ ಕೆಲಸ ಮಾಡಬೇಕಾಗಬಹುದು. ಅಲ್ಲಿ ಅವರಿಗೆ ನೀಡುವ ತರಬೇತಿಗೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಮೈಕ್ರೊ ಆಬ್ಸರ್ವರ್ ಹೇಳಿದಂತೆ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು. 

‘ಸ್ವೀಪ್’ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್ ಮಾತನಾಡಿ, ‘ಕ್ಷೇತ್ರ ವ್ಯಾಪ್ತಿಯ ಎಲ್ಲ 30 ಚೆಕ್‌ಪೋಸ್ಟ್‌ಗಳಿಗೆ ಏ.15ರಿಂದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ನೇಮಕ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನವನ್ನೂ ಪರಿಶೀಲಸಲು ಇಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 36 ಕ್ಷಿಪ್ರ ಕಾರ್ಯಪಡೆಗಳ ಜತೆಗೆ ‍ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪಡೆಯನ್ನೂ ನೀಡಲಾಗುತ್ತದೆ. ಈ ತಂಡ ಎಲ್ಲಿ ಕಾರ್ಯಾಚರಣೆ ಮಾಡುತ್ತದೆ ಎಂಬ ಪೂರ್ವ ಮಾಹಿತಿ ಉನ್ನತ ಅಧಿಕಾರಿಗಳಿಗೆ ಮಾತ್ರ ಇರುತ್ತದೆ’ ಎಂದು ಹೇಳಿದರು. 

ಜಿಲ್ಲೆಯ ಬುಡಕಟ್ಟು ಜನರ ಮನೆಯ ಮಾದರಿಯಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 11 ‘ಸಖಿ’ ಮತಗಟ್ಟೆಗಳಿದ್ದು, ಮಹಿಳಾ ಸಿಬ್ಬಂದಿಯೇ ಅಲ್ಲಿರುತ್ತಾರೆ. ಉಳಿದಂತೆ ಮತದಾನದ ಜಾಗೃತಿ ರಥದ ಸಂಚಾರ, ಬೀದಿ ನಾಟಕಗಳು, ಮೋಟಾರ್ ಪ್ಯಾರಾ ಗ್ಲೈಡಿಂಗ್, ಸ್ಕೂಬಾ ಡೈವಿಂಗ್‌ನಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.

‘ನೆರವು’ ಪ್ರಾಯೋಗಿಕ ಪರೀಕ್ಷೆ 15ಕ್ಕೆ: ಅಂಗವಿಕಲ ಮತದಾರರನ್ನು ಗುರುತಿಸಿ ಮತದಾನದಲ್ಲಿ ಅವರೂ ಭಾಗಿಯಾಗುವಂತೆ ಮಾಡುವ ‘ನೆರವು’ ತಂತ್ರಾಂಶದ ಪ್ರಾಯೋಗಿಕ ಪರೀಕ್ಷೆ ಏ.15ರಂದು ನಡೆಯಲಿದೆ. ಅದರಲ್ಲಿ ಎಷ್ಟು ಜನ ಅಂಗವಿಕಲ ಮತದಾರರನ್ನು ಅವರ ಮನೆಯಿಂದ ಚುನಾವಣಾ ಸಿಬ್ಬಂದಿ ವಾಹನದಲ್ಲಿ ಕರೆದುಕೊಂಡು ಬಂದು ಮತದಾನ ಮಾಡಿಸಿ ವಾಪಸ್ ಬಿಟ್ಟು ಬಂದಿದ್ದಾರೆ ಎಂದು ಮಾಹಿತಿ ಲಭಿಸುತ್ತದೆ ಎಂದು ಮೊಹಮ್ಮದ್ ರೋಶನ್ ತಿಳಿಸಿದರು.

ಪ್ರತಿ ಮತಗಟ್ಟೆಯಲ್ಲಿ ಬ್ರೈಲ್‌ ಲಿಪಿಯಲ್ಲಿ ಬರೆದ ಮತದಾರರ ಪಟ್ಟಿಯನ್ನು ಅಂಟಿಸಲಾಗುತ್ತದೆ ಎಂದೂ ತಿಳಿಸಿದರು.

‘ಹಣ ತುಂಬದಿರಬಾರದು’: ಚುನಾವಣೆಯ ನೆಪದಲ್ಲಿ ಎಟಿಎಂಗಳಿಗೆ ಹಣ ತುಂಬಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿರುವ ದೂರುಗಳಿವೆ ಎಂದು ಪತ್ರಕರ್ತರು ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಡಾ.ಕೆ.ಹರೀಶಕುಮಾರ್, ‘ಬ್ಯಾಂಕ್‌ಗಳು ಎಟಿಎಂಗಳಿಗೆ ಹಣ ತುಂಬದಿರಬಾರದು. ನಗದು ಸಾಗಿಸುವ ಏಜೆನ್ಸಿಯ ವಾಹನಗಳು ನಿಗದಿತ ರೀತಿಯಲ್ಲೇ ಇರಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಪ್ರೊಬೆಷನರಿ ಐಎಎಸ್ ಅಧಿಕಾರಿ ದಿಲೀಶ್ ಸಸಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !