ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ನಾಳೆಯಿಂದ ಒಂದು ವಾರ ನಿಷೇಧಾಜ್ಞೆ

‘ಜನತಾ ಕರ್ಫ್ಯೂ’: ಮನೆಯಿಂದ ಹೊರಬಾರದ ನಾಗರಿಕರು, ಸಂಪೂರ್ಣ ಸ್ತಬ್ಧವಾದ ಕಾರವಾರ
Last Updated 22 ಮಾರ್ಚ್ 2020, 13:19 IST
ಅಕ್ಷರ ಗಾತ್ರ

ಕಾರವಾರ:ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮಾರ್ಚ್ 24ರಿಂದ 30ರವರೆಗೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅಂತೆಯೇ ಜಿಲ್ಲೆಯಲ್ಲಿರುವ ಎಲ್ಲ ಕರ್ನಾಟಕ– ಗೋವಾಅಂತರರಾಜ್ಯ ಗಡಿಯನ್ನುಮುಚ್ಚಲೂ ಭಾನುವಾರ ಆದೇಶಿಸಿದ್ದಾರೆ.

‘ಕೊರೊನಾ ವೈರಸ್ ಸಂಬಂಧ ವ್ಯಾಪಕ ಜಾಗೃತಿ ಕೈಗೊಂಡರೂ ಸ್ಪಂದಿಸದ ಹಲವರು ಸಭೆ, ಸಮಾರಂಭ ಹಮ್ಮಿಕೊಳ್ಳುತ್ತಿದ್ದಾರೆ. ಜಿಲ್ಲೆಗೆವಿದೇಶಗಳಿಂದವಾಪಸಾದವರಸಂಖ್ಯೆಯೂ ಹೆಚ್ಚುತ್ತಿದೆ. ರಸ್ತೆಗಳಲ್ಲಿ, ಮಾರುಕಟ್ಟೆಗಳಲ್ಲಿ ಗುಂಪಾಗಿ ಜನರು ಓಡಾಡುವುದು ಮುಂದುವರಿದಿದೆ. ಆದ್ದರಿಂದ ಮಾರ್ಚ್ 24ರ ಬೆಳಿಗ್ಗೆ 6ರಿಂದ 30ರ ಮಧ್ಯರಾತ್ರಿ 12ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗುವುದು. ಈ ಸಮಯದಲ್ಲಿ ಐವರಿಗಿಂತ ಹೆಚ್ಚು ಜನ ಗುಂಪು ಸೇರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಂಪೂರ್ಣ ಸ್ತಬ್ಧವಾದ ಜಿಲ್ಲೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಜನರು ಮನೆಯಲ್ಲೇ ಉಳಿದು ಕೊರೊನಾ ವೈರಸ್ ವಿರುದ್ಧದ ದೇಶದ ಹೋರಾಟಕ್ಕೆ ಕೈಜೋಡಿಸಿದರು.

ಕಾರವಾರದಲ್ಲಿ ಬೆಳಿಗ್ಗೆಯಿಂದಲೇ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸದಾ ವಾಹನಗಳಿಂದ, ಜನರಿಂದ ಗಿಜಿಗುಡುವ ನಗರದ ಗ್ರೀನ್‌ಸ್ಟ್ರೀಟ್, ರಾಷ್ಟ್ರೀಯ ಹೆದ್ದಾರಿ, ಕೋಡಿಬಾಗ ರಸ್ತೆ, ಕಾರವಾರ– ಇಳಕಲ್ ರಾಜ್ಯ ಹೆದ್ದಾರಿ, ಪಿಕಳೆ ರಸ್ತೆ ಸೇರಿದಂತೆ ಎಲ್ಲವೂ ಬಿಕೊ ಎನ್ನುತ್ತಿದ್ದವು.‌

ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು, ಸೂಪರ್ ಮಾರ್ಕೆಟ್, ಬೀದಿ ಬದಿಯ ಗೂಡಂಗಡಿಗಳು, ಬಾರ್‌, ಬಸ್, ಆಟೊ, ಟೆಂಪೊ ಮುಂತಾದಎಲ್ಲ ವ್ಯವಹಾರಗಳೂ ಮುಚ್ಚಿದ್ದವು. ಕೇವಲ ಒಂದೆರಡುಔಷಧ ಮಳಿಗೆಗಳು ತೆರೆದಿದ್ದವು. ಆದರೆ, ಅಲ್ಲೂ ಗ್ರಾಹಕರಿಲ್ಲದೇ ಭಣಗುಡುತ್ತಿದ್ದವು.ಪತ್ರಿಕಾ ವಿತರಕರು ಎಂದಿನಂತೆಯೇ ಬೆಳಿಗ್ಗೆ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಿದ ಬಳಿಕ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೋಡಿಬಾಗ ರಸ್ತೆಯಲ್ಲಿ ವರ್ತಕರೊಬ್ಬರು ಅಂಗಡಿ ತೆರೆದಿದ್ದರು. ಪೊಲೀಸರು ಅವರ ಮನವೊಲಿಸಿ ಬಾಗಿಲು ಮುಚ್ಚಿಸಿದರು.

ಬೆಳಿಗ್ಗೆ ಏಳು ಗಂಟೆಗೆ ಜನತಾ ಕರ್ಫ್ಯೂ ಆರಂಭ ಎಂದು ಜಿಲ್ಲಾಡಳಿತ ತಿಳಿಸಿತ್ತು. ಅದಕ್ಕೂ ಮೊದಲು ಆರು ಗಂಟೆ ಸುಮಾರಿಗೆ ತೆರೆದಿದ್ದ ಹಾಲಿನ ಅಂಗಡಿಯ ಮುಂದೆ ಜನಜಂಗುಳಿ ಕಂಡುಬಂತು. ಆದರೆ, ಹಾಲು ಖಾಲಿಯಾಗುತ್ತಿದ್ದಂತೆ ಜನರೂ ಅಲ್ಲಿರದೇ ತಮ್ಮ ಮನೆಗಳಿಗೆ ವಾಪಸಾದರು.ನೂರಾರು ಮಂದಿ ಶನಿವಾರ ರಾತ್ರಿಯೇ ಮೊಟ್ಟೆ, ಹಾಲು, ತರಕಾರಿ ಹಾಗೂ ಒಂದೆರಡು ದಿನಗಳಿಗೆ ಬೇಕಾದ ದಿನಸಿ ಖರೀದಿಸಿದ್ದು ಕಂಡುಬಂತು.

ಕೊರೊನಾ ವೈರಸ್ ವಿರುದ್ಧ ದೇಶದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕಾರವಾರದ ಆಭರಣ ಮಾರಾಟಗಾರರ ಸಂಘವು, ನಗರದ ಎಲ್ಲ ಚಿನ್ನಾಭರಣ ಮಳಿಗೆಗಳನ್ನೂ ಮಾರ್ಚ್ 24ರಿಂದ ಒಂದು ವಾರದ ಮುಚ್ಚಲು ನಿರ್ಧರಿಸಿದೆ.

ಮೊಳಗಿದ ಜಯಘಂಟೆ:ಜನತಾ ಕರ್ಫ್ಯೂವನ್ನು ಬೆಂಬಲಿಸಿ ನಗರದ ನಿವಾಸಿಗಳು ದಿನವಿಡೀ ಮನೆಯೊಳಗೇ ಉಳಿದುಕೊಂಡರು. ಸಂಜೆ ಐದು ಗಂಟೆಗೆ ಸರಿಯಾಗಿ ಚಪ್ಪಾಳೆ ತಟ್ಟಿ, ಜಯಘಂಟೆ, ಶಂಖನಾದ ಮಾಡಿದರು. ಈ ಮೂಲಕ ಆರೋಗ್ಯ ತುರ್ತು ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿಕೊಂಡಿರುವ ವೈದ್ಯಕೀಯ, ಪೊಲೀಸ್ ಮುಂತಾದ ಇಲಾಖೆಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.

ಆಗಮನ, ನಿರ್ಗಮನಕ್ಕೆ ನಿರ್ಬಂಧ:ಧಾರವಾಡದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಆ ಜಿಲ್ಲೆಗೆ ಹೋಗುವವರು ಮತ್ತು ಬರುವವನ್ನುನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

ಮುಂಡಗೋಡ, ಯಲ್ಲಾಪುರ ಮತ್ತು ಹಳಿಯಾಳ ತಾಲ್ಲೂಕುಗಳಿಗೆ ಜೀವನೋಪಾಯಕ್ಕೆ ಅತ್ಯಗತ್ಯವಾದ ಆಹಾರ ಪದಾರ್ಥ ಮತ್ತು ಸಾಮಗ್ರಿ ಸಾಗಣೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಧಾರವಾಡ ಜಿಲ್ಲೆಯಲ್ಲಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳಿಂದ ವಾಸವಿದ್ದವರು ಉತ್ತರ ಕನ್ನಡಕ್ಕೆ ಬರುವುದನ್ನು ನಿರ್ಬಂಧಿಸಲಾಗಿದೆ.

ಅತಿ ತುರ್ತು ಕೆಲಸಗಳನ್ನು ಹೊರತುಪಡಿಸಿ ಉಳಿದೆಲ್ಲ ಆಗಮನ ಮತ್ತು ನಿರ್ಗಮನವನ್ನು ನಿಷೇಧಿಸಲಾಗಿದೆ. ಇದಕ್ಕಾಗಿ ಮೂರೂ ತಾಲ್ಲೂಕುಗಳ ತನಿಖಾ ಠಾಣೆಗಳಲ್ಲಿ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT