ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಮರೆಯ ಕಾಯಿಯಂತಿದ್ದ ರಂಗಭೂಮಿ ಕಲಾವಿದ ಸೀತಾರಾಮ ಹೆಗಡೆ

ಅಪ್ರತಿಮ ಪ್ರತಿಭೆ ಇದ್ದೂ ಪ್ರಚಾರ ಪಡೆದುಕೊಳ್ಳಲಿಲ್ಲ
Last Updated 9 ನವೆಂಬರ್ 2019, 11:16 IST
ಅಕ್ಷರ ಗಾತ್ರ

ಕಾರವಾರ: ಕಲಾ ಪ್ರತಿಭೆ, ವಾಸ್ತವಕ್ಕೆ ಇಂಬು ನೀಡುವ ಬರವಣಿಗೆ, ಸಂಘಟನಾ ಚಾತುರ್ಯವಿದ್ದ ಸೀತಾರಾಮ ಹೆಗಡೆ, ರಂಗಭೂಮಿಗೆ ತಮ್ಮ ಬದುಕನ್ನು ಮುಡಿಪಾಗಿಟ್ಟವರು.ನಾಟಕ ಮಂಡಳಿಯನ್ನು ಸ್ಥಾಪಿಸಿ, ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಅವರು ತಮ್ಮ ಜೀವನದ 85 ವಸಂತಗಳನ್ನು ಅರ್ಥಪೂರ್ಣವಾಗಿ ಕಳೆದು ಅಳಿದರೂ ಇಲ್ಲೇ ಉಳಿದವರ ಸಾಲಿಗೆ ಸೇರುತ್ತಾರೆ.

ಶಿರಸಿ ಮೂಲದವರಾದರೂ ಯಲ್ಲಾಪುರವನ್ನೇತಮ್ಮ ಕರ್ಮಭೂಮಿ ಮಾಡಿಕೊಂಡಿದ್ದರು.ಯಲ್ಲಾಪುರ ಪಟ್ಟಣದ ನಾಯಕನಕೆರೆ ದತ್ತ ಮಂದಿರದ ಅರ್ಚಕರಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಅವರುಚಿಕ್ಕಂದಿನಿಂದಲೇನಾಟಕ ಹಾಗೂ ಯಕ್ಷಗಾನದ ಆಕರ್ಷಣೆಗೆ ಒಳಗಾದವರು.

ಪೌರಾಣಿಕ ನಾಟಕಗಳ ದಂತ ಕಥೆಯಂತಿರುವ ಶಿರಸಿಯ ಗೋಳಿ ನಾಟಕ ಕಂಪನಿಯ ಅಂದಿನ ಗುರುಗಳಾದ ಮಾಧವರಾಯ ಅವರ ಪ್ರೇರಣೆ ಹಾಗೂ ಮಾರ್ಗದರ್ಶನವು ಸೀತಾರಾಮ ಹೆಗಡೆಯ ರಂಗಭೂಮಿಯಲ್ಲೇನೆಲೆ ಊರುವಂತೆ ಮಾಡಿತು.

ಬಳಿಕ ಮಾಧವರಾಯರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಸೀತಾರಾಮ ಹೆಗಡೆ‘ಶ್ರೀ ಗಜಾನನ ನಾಟಕ ಮಂಡಳಿ’ಯನ್ನು ಸ್ಥಾಪಿಸಿದರು. ಆ ನಾಟಕ ಮಂಡಳಿಯ ಮೂಲಕ ಅನೇಕ ವರ್ಷ ಕಲಾ ಸೇವೆ ಗೈದರು. ನಾಟಕ ಪ್ರದರ್ಶನದಲ್ಲಿ ಶತ ಪ್ರಯೋಗ ಕಂಡ ‘ಟಿಪ್ಪು ಸುಲ್ತಾನ’ ನಾಟಕದಲ್ಲಿಯ ಸೀತಾರಾಮ ಹೆಗಡೆ ಅವರ ಮೀರ್ ಸಾದಿಕ್‌ನ ಪಾತ್ರ ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತು. ಅಲ್ಲದೇಚಲನಚಿತ್ರ ರಂಗ ಇವರನ್ನು ಆಹ್ವಾನಿಸುವಂತೆ ಮಾಡಿತು.

ಸೀತಾರಾಮ ಹೆಗಡೆಯವರು ತಮ್ಮನ್ನು ನಾಟಕದ ಕೃತಿ ರಚನೆಯಲ್ಲೂ ತೊಡಗಿಸಿಕೊಂಡರು. ‘ಅಮರ ಸಾಧನೆ’, ‘ಪತಿವ್ರತಾ ಮಹಿಮೆ’ ಹಾಗೂ ಹವ್ಯಕ ಆಡು ಭಾಷೆಯಲ್ಲಿ ರಚಿಸಲಾದ ‘ಮರ್ಯಾದೆಯ ಮುಸುಕು’ ನಾಟಕಗಳು ರಂಗಪ್ರಿಯರ ಗಮನ ಸೆಳೆದ ಕೃತಿಗಳು.

ಹತ್ತಾರು ಗೌರವಗಳು:‌ಶ್ರೀ ಗುರು ಉತ್ತರ ಕನ್ನಡ ಜಿಲ್ಲಾ ರಂಗ ಭೂಮಿ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜೇಸೀಸ್ ಘಟಕ ಮುಂತಾದವು ಇವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ. ಅವಧೂತ ಪರಂಪರೆಗೆ ತಮ್ಮನ್ನು ಅರ್ಪಿಸಿಕೊಂಡ ಶಿವಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಪುತ್ರರಾಗಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.

ಇಷ್ಟೆಲ್ಲಾ ಪ್ರತಿಭೆ ಇದ್ದರೂ ಸೀತಾರಾಮ ಹೆಗಡೆಯವರು ಎಲೆಮರೆಯ ಕಾಯಿಯಂತೆ ಬದುಕ್ಕಿದ್ದು ಅವರ ಬದುಕಿನ ವಿಶೇಷವೆಂದೇ ಹೇಳಬೇಕು.

– ಬೀರಣ್ಣ ನಾಯಕ ಮೊಗಟಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT