ಬುಧವಾರ, ಜೂನ್ 16, 2021
27 °C

ಕಾರವಾರ | ನದಿ ಹಿನ್ನೀರಿನಲ್ಲಿ ಎರಡು ದಿನ: ವೃದ್ಧನ ಜೀವ ಉಳಿಸಿದ ಕಾಂಡ್ಲಾ ಗಿಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾವು ಸಾಕಿದ ಕೋಣಗಳನ್ನು ಹುಡುಕುತ್ತ ಹೋಗಿ ಕಾಳಿ ನದಿಯ ಹಿನ್ನೀರಿಗೆ ಬಿದ್ದ ಹಿರಿಯ ವ್ಯಕ್ತಿಯೊಬ್ಬರು, ಕೈಗೆ ಸಿಕ್ಕಿದ ಕಾಂಡ್ಲಾ ಗಿಡವನ್ನು ಎರಡು ದಿನ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ.

ತಾಲ್ಲೂಕಿನ ಹಣಕೋಣ ಗ್ರಾಮದ ಅಂಬಿಗವಾಡದ ನಿವಾಸಿ ವೆಂಕಟರಾಯ ಕೊಠಾರಕರ್ (74) ಪವಾಡ ಸದೃಶರಾಗಿ ಬದುಕಿ ಬಂದವರು. ಮೇ 16ರಂದು ತೌತೆ ಚಂಡಮಾರುತದಿಂದಾಗಿ ಭಾರಿ ಗಾಳಿಯೊಂದಿಗೆ ಮಳೆ ಬೀಳುತ್ತಿತ್ತು. ಇದರಿಂದ ಕಾಳಿ ನದಿಯ ಮಟ್ಟ ಎಂದಿಗಿಂತ ಹೆಚ್ಚಾಗಿತ್ತು. ನದಿಯ ದಡದ ಸಮೀಪದಲ್ಲಿರುವ ಖಾಲಿ ಜಮೀನಿನಲ್ಲಿ ನೀರು ತುಂಬಿಕೊಂಡಿತ್ತು.

ಮೇಯಲು ಬಿಟ್ಟಿದ್ದ ಕೋಣಗಳು ಎಲ್ಲಿ ಹೋದವೆಂದು ಹುಡುಕುತ್ತ ಹೊರಟಿದ್ದ ವೆಂಕಟರಾಯ, ಹಿನ್ನೀರಿನತ್ತ ಸಾಗಿದ್ದರು. ನೀರಿನ ಪ್ರಮಾಣವನ್ನು ಅರಿಯದೇ ಕಾಲಿಟ್ಟಾಗ ಕೊಚ್ಚಿಕೊಂಡು ಹೋಗುವ ಅಪಾಯಕ್ಕೆ ಸಿಲುಕಿದರು. ತಕ್ಷಣ ಸಾವರಿಸಿಕೊಂಡ ಅವರು, ಸಮೀಪದಲ್ಲೇ ಇದ್ದ ಕಾಂಡ್ಲಾ ಗಿಡವನ್ನು ಗಟ್ಟಿಯಾಗಿ ಹಿಡಿದುಕೊಂಡರು. ವೇಗವಾಗಿ ಬೀಸುತ್ತಿದ್ದ ಚಂಡಮಾರುತ ಮತ್ತು ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲೇ ಅವರು ಹಗಲು ರಾತ್ರಿಗಳನ್ನು ಕಳೆದರು.

ಸಂಜೆಯಾದರೂ ತಂದೆ ಮನೆಗೆ ಬಾರದೇ ಆತಂಕಗೊಂಡಿದ್ದ ಮಗ ಹುಡುಕಾಟ ಶುರು ಮಾಡಿದ್ದರು. ಮೊದಲ ದಿನ ತಂದೆ ಸಿಗಲಿಲ್ಲ. ಎರಡನೇ ದಿನ ಊರಿನ ಜನರೊಂದಿಗೆ ಸೇರಿ ನದಿ ತೀರದಲ್ಲಿ ಹುಡುಕಾಡಿದರು. ಮೇ 18ರಂದು ಸಂಜೆ ಅವರಿಗೆ ತಂದೆ ನೀರಿನ ಮಧ್ಯೆ ಇರುವುದು ಕಂಡುಬಂತು. ಬಳಿಕ ಅವರನ್ನು ರಕ್ಷಿಸಿ, ಮನೆಗೆ ಕರೆದುಕೊಂಡು ಬಂದರು. ಕೊನೆಗೂ ಹಿರಿಯ ಜೀವ ಸುರಕ್ಷಿತವಾಗಿ ಮರಳಿದ್ದು ಕುಟುಂಬ ಮತ್ತು ಊರಿನ ಮಂದಿ ನಿಟ್ಟುಸಿರು ಬಿಡುವಂತಾಯಿತು. ನೀರಿನಲ್ಲಿದ್ದ ಕಾರಣ ವೆಂಕಟರಾಯ ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು