ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಹಳ್ಳಿ ವಿದ್ಯಾರ್ಥಿಗಳಿಗೆ ಉಚಿತ ಬೋಧನೆ

ಸ್ವ ಇಚ್ಛೆಯಿಂದ ತರಗತಿ ಆಯೋಜಿಸುತ್ತಿರುವ ಅಂಬಾರಕೊಡ್ಲದ ಹಿರಿಯ ಉಪನ್ಯಾಸಕ
Last Updated 30 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಅಂಕೋಲಾ: ಕೊರೊನಾ ತೀವ್ರತೆಯ ಪರಿಣಾಮದಿಂದಾಗಿ ದೇಶದಾದ್ಯಂತ ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲ. ಇದರಿಂದ ತಾಲ್ಲೂಕಿನ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆ ಆಗದಂತೆ ಅಂಬಾರಕೊಡ್ಲದ ಹಿರಿಯ ಉಪನ್ಯಾಸಕ ವಸಂತ ಗೌಡ ಶ್ರಮಿಸುತ್ತಿದ್ದಾರೆ.

ಆನ್‌ಲೈನ್ ತರಗತಿಗಳಲ್ಲಿ ನಾನಾ ಕಾರಣಗಳಿಂದ ಎದುರಾಗುತ್ತಿರುವ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳಿಗೆ ನಿತ್ಯವೂ ಪಾಠ ಮಾಡುತ್ತಿದ್ದಾರೆ.

ಅಂಬಾರಕೊಡ್ಲದ ಗದ್ದುಗೆ ಸಭಾಭವನದಲ್ಲಿ ಎರಡು ತಿಂಗಳಿನಿಂದ ನಿತ್ಯವೂ ಮೂರು ತಾಸು ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಬಹುತೇಕವಾಗಿ ಬಡ ಕುಟುಂಬದ ಹಿನ್ನೆಲೆಯುಳ್ಳ 30 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ.

ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿ.ಎಂ, ಕೆ.ಎಲ್.ಇ, ಮತ್ತು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಈಗಾಗಲೇ ದ್ವಿತೀಯ ಪಿ.ಯು. ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅಂಬಾರಕೊಡ್ಲ, ಶಿರಕುಳಿ, ಬಡಗೇರಿ ಕಂತ್ರಿ, ಬಾಳೇಗುಳಿಯ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇಂಗ್ಲಿಷ್ ಭಾಷೆಯ ಉಪನ್ಯಾಸಕರಾದ ವಸಂತ ಗೌಡ ಅವರು ಮೂರು ದಶಕಗಳ ಬೋಧನಾ ಅನುಭವ ಹೊಂದಿದ್ದಾರೆ. ಇಂಗ್ಲಿಷ್ ವ್ಯಾಕರಣ ಬೋಧನೆಗೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಹೆಸರಾಗಿದ್ದಾರೆ. ಈಗಾಗಲೇ ದ್ವಿತೀಯ ಪಿ.ಯು. ವ್ಯಾಕರಣ ಭಾಗ ಮತ್ತು ಆರು ಅಧ್ಯಾಯಗಳನ್ನು ಬೋಧಿಸಿದ್ದಾರೆ. ವಂದಿಗೆಯ ಸಭಾಭವನದಲ್ಲಿ ಕೂಡ ವಿದ್ಯಾರ್ಥಿಗಳಿಗೆ ಒಂದು ವಾರ ತರಗತಿ ಹಮ್ಮಿಕೊಂಡಿದ್ದಾರೆ. ಅವರ ಈ ಕಾರ್ಯದಿಂದ ಬಹಳ ಅನುಕೂಲವಾಗುತ್ತಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಾರೆ.

‘ಆನ್‌ಲೈನ್ ಪಾಠ ಕೇಳಿದರೂ ಕೆಲವೊಮ್ಮೆ ಅರ್ಥವಾಗುವುದಿಲ್ಲ. ಇಲ್ಲಿ ನೇರವಾಗಿ ಶಿಕ್ಷಕರಿಂದಲೇ ನಮ್ಮ ಸಂದೇಹ ಪರಿಹರಿಸಿಕೊಳ್ಳಬಹುದು. ಪಾಲಕರ ಒಪ್ಪಿಗೆಯಿಂದಲೇ ತರಗತಿಗೆ ಹಾಜರಾಗುತ್ತಿದ್ದೇವೆ’ ಎನ್ನುತ್ತಾರೆ ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ವೀಣಾ ಹುಲಸ್ವಾರ.

‘ಉಳಿದೆಡೆಯೂ ಬೋಧನೆ’:

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠ ಮಾಡುವ ಕಾರ್ಯದಲ್ಲಿ ಸ್ವಯಂ ತೊಡಗಿಸಿಕೊಂಡಿದ್ದೇನೆ. ಊರ ನಾಗರಿಕರು ಹಾಗೂ ಪಾಲಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಕಡಿಮೆ ಮಕ್ಕಳು ದೊಡ್ಡ ಸಭಾಭವನದಲ್ಲಿ ಸೇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಉಳಿದ ಗ್ರಾಮಗಳಲ್ಲೂ ಬೋಧನಾ ಕಾರ್ಯ ಕೈಗೊಳ್ಳುತ್ತೇನೆ’ ಎಂದು ವಸಂತ ಗೌಡ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT