ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಆಸ್ಪತ್ರೆ ಸ್ಥಾಪನೆ ನಿಚ್ಚಳ: ನಾಗರಾಜ ನಾಯಕ

ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರದ ಸ್ಪಂದನೆ
Last Updated 21 ಸೆಪ್ಟೆಂಬರ್ 2022, 13:50 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯು ಅತ್ಯಂತ ಅಗತ್ಯವಾಗಿದೆ. ದಶಕಗಳಿಂದ ಇರುವ ಆರೋಗ್ಯ ಕ್ಷೇತ್ರದ ಬೇಡಿಕೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆಯೂ ಹಲವಾರು ಮಂದಿ, ಸೂಪರ್ ಸ್ಪೆಷಾಲಿಟಿ ಎಂಬ ಶಬ್ದವನ್ನು ಬಳಸದಿದ್ದರೂ ಹೋರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರತಿಯೊಂದು ತುರ್ತು ಚಿಕಿತ್ಸೆಗೂ ಮಣಿಪಾಲ, ಮಂಗಳೂರು, ಪಣಜಿ, ಹುಬ್ಬಳ್ಳಿಗೆ ಹೋಗಬೇಕಿದೆ. ಅನೇಕರು ದಾರಿ ಮಧ್ಯೆ ಮೃತ ಪಟ್ಟಿದ್ದಾರೆ. ಈ ಪರಿಸ್ಥಿತಿಯು ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಇತ್ತು. ಈಗ ಸರ್ಕಾರ ಸ್ಪಂದಿಸಿದೆ’ ಎಂದರು.

‘ಜಿಲ್ಲೆಯ ಜನಪ್ರತಿನಿಧಿಗಳು ಅನೇಕ ದಿನಗಳಿಂದ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಎಲ್ಲ ಶಾಸಕರು, ನಾಯಕರು ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದ್ದಾರೆ. ಎಲ್ಲರೂ ಸಚಿವ ಡಾ.ಸುಧಾಕರ್ ಜೊತೆ ಮಾತನಾಡಿದ್ದಾರೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಯು ನಿಚ್ಚಳವಾಗಿದೆ’ ಎಂದು ಹೇಳಿದರು.

‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯು ಒಂದು ದಿನದ ಕಾರ್ಯವಲ್ಲ. 400ಕ್ಕೂ ಅಧಿಕ ವೈದ್ಯರು, 2 ಸಾವಿರಕ್ಕೂ ಅಧಿಕ ಸಿಬ್ಬಂದಿ ಬೇಕು. ಇದಕ್ಕೆ ಶ್ರಮ ಸಾಕಷ್ಟು ಬೇಕು’ ಎಂದರು.

‘ಪ್ರಚೋದನೆ ಖಂಡನೀಯ’:

‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ ಪ್ರಮುಖರನ್ನು ಅಭಿನಂದಿಸುತ್ತೇವೆ. ಆದರೆ, ಮುಂಬೈನಲ್ಲಿ ಕುಳಿತು ಜಿಲ್ಲೆಯ ಅಮಾಯಕ ಯುವಕರನ್ನು ಪ್ರಚೋದಿಸುವವರನ್ನು ಖಂಡಿಸುತ್ತೇವೆ’ ಎಂದು ನಾಗರಾಜ ನಾಯಕ ಹೇಳಿದರು.

‘ವಿಧಾನಸಭೆಯ ಸಭಾಧ್ಯಕ್ಷ ಕಾಗೇರಿ ಅವರ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಖಂಡನೀಯ. ವಿಮರ್ಶೆಗಳು ಶಿಸ್ತಿನಲ್ಲಿ, ಸಂವಿಧಾನಬದ್ಧ ಮಿತಿಯಲ್ಲಿ, ರಚನಾತ್ಮಕವಾಗಿ ಇರಬೇಕು. ಸಾಮಾಜಿಕ ಜಾಲತಾಣವನ್ನು ಒಳ್ಳೆಯದಕ್ಕೆ ಬಳಸೋಣ. ಅದುಬಿಟ್ಟು ಪ್ರಚೋದನಕಾರಿಯಾಗಿ ವರ್ತಿಸುವುದು ಸರಿಯಲ್ಲ’ ಎಂದರು.

‘ಸಭಾಧ್ಯಕ್ಷರ ವಿರುದ್ಧ ನಿಂದನಾತ್ಮಕ ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ ಮುಗ್ಧ ಯುವಕರು ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ. ಆದರೆ, ಇದಕ್ಕೆ ಪ್ರಚೋದಿಸುವ ವ್ಯಕ್ತಿ ಅವರ ಸಹಾಯಕ್ಕೆ ಬರಲಾರ. ಆತನಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದು ತನಿಖೆಯಾಗಲಿ. ಆ ವ್ಯಕ್ತಿಯ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಪ್ರಮುಖ ನವೀನ ಅಯೋಧ್ಯ ಮಾತನಾಡಿದರು. ಪ್ರಮುಖರಾದ ಸುಬ್ರಾಯ ಹೆಗಡೆ, ನಯನಾ ನೀಲಾವರ, ನಿತಿನ್ ರಾಯ್ಕರ್, ಸುಭಾಶ್ ಗುನಗ, ನಾಗೇಶ ಕುರ್ಡೇಕರ್, ಮನೋಜ ಭಟ್, ರೋಶನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT