ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲದಲ್ಲಿ ಸೇವಾ ಕಾರ್ಯಕ್ಕೆ ಅನುಮತಿ

ನಿಯಂತ್ರಣಕ್ಕೆ ಬಂದ ಕೋವಿಡ್: ಮುಂಜಾಗ್ರತಾ ಕ್ರಮಗಳೊಂದಿಗೆ ಭಕ್ತರಿಗೆ ಅವಕಾಶ
Last Updated 16 ಸೆಪ್ಟೆಂಬರ್ 2021, 16:55 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಇರುವ ಕಾರಣ, ದೇಗುಲವೂ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುರುವಾರ ಅನುಮತಿ ನೀಡಿದ್ದಾರೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ದೇಗುಲಗಳಿಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿತ್ತು. ಬಳಿಕ, ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈಗ ಹಲವು ದಿನಗಳಿಂದ ಸೋಂಕು ದೃಢಪಡುವ ಪ್ರಮಾಣವು ಶೇ 1ಕ್ಕಿಂತಲೂ ಕಡಿಮೆ ಇದೆ. ಇದನ್ನು ಪರಿಗಣಿಸಿ, ಎಂದಿನಂತೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡಿ ಅವರು ಆದೇಶಿಸಿದ್ದಾರೆ. ಒಂದುವೇಳೆ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಪುನಃ ಏರಿಕೆ ಕಂಡುಬಂದರೆ ಈ ಅನುಮತಿಯನ್ನು ರದ್ದು ಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನವೂ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಿಗೆ ಬರುವ ಭಕ್ತರು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಖಗವಸು ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯ ಪ್ರಕಾರ ಕ್ರಮಗಳನ್ನು ಜರುಗಿಸಲಾಗುವುದು. ಈ ಆದೇಶದ ಪಾಲನೆಯ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಭಕ್ತರಿಗೆ ಸಂತಸ:

ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡಿದ್ದು ಭಕ್ತರ ಸಂತಸಕ್ಕೆ ಕಾರಣವಾಗಿದೆ. ಜಿಲ್ಲೆಯ ಪ್ರಸಿದ್ಧ ದೇಗುಲಗಳಾದ ಮುರುಡೇಶ್ವರ, ಗೋಕರ್ಣ, ಶಿರಸಿಯ ಮಾರಿಕಾಂಬಾ ಗುಡಿ ಸೇರಿದಂತೆ ವಿವಿಧೆಡೆಗೆ ನಿತ್ಯವೂ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ, ಹೇಳಿಕೊಂಡ ಹರಕೆ, ಸೇವಾ ಕಾರ್ಯಗಳನ್ನು ಸಲ್ಲಿಸಲು ಅವಕಾಶ ಸಿಗದೇ ನಿರಾಸೆಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ದೂರದ ಊರುಗಳಿಂದ ಬರುವವರು ತಮ್ಮ ಪ್ರಯಾಣವನ್ನು ಮುಂದೂಡಿದ್ದರು. ಸ್ಥಳೀಯ ಧಾರ್ಮಿಕ ಪ್ರವಾಸೋದ್ಯಮದ ಮೇಲೂ ಇದು ಪರಿಣಾಮ ಬೀರಿತ್ತು. ಈಗ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT