ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿದ ಜಯಕಾರ: ಅರಳಿದ ರಾಷ್ಟ್ರಧ್ವಜ

‘ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ’ ಅಭಿಯಾನಕ್ಕೆ ಚಾಲನೆ: ಸಾವಿರಾರು ವಿದ್ಯಾರ್ಥಿಗಳಿಂದ ಮೆರವಣಿಗೆ
Last Updated 13 ಆಗಸ್ಟ್ 2022, 16:11 IST
ಅಕ್ಷರ ಗಾತ್ರ

ಕಾರವಾರ: ‘ಭಾರತ್ ಮಾತಾ ಕೀ ಜೈ’ ಎಂಬ ಜಯಕಾರವು ಸಾವಿರಾರು ಕೊರಳುಗಳಿಂದ ಏಕಕಾಲಕ್ಕೆ ಹೊರಹೊಮ್ಮಿತ್ತು. ‘ವಂದೇ ಮಾತರಂ’ ಘೋಷಣೆಯು ಮುಗಿಲುಮುಟ್ಟಿತ್ತು. ತ್ರಿವರ್ಣ ಧ್ವಜ ಹಿಡಿದ ಯುವ ಮನಸ್ಸುಗಳು ಹೆಜ್ಜೆ ಹಾಕುತ್ತ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಕ್ಕೆ ಮುನ್ನಡಿ ಬರೆದವು.

ನಗರದಲ್ಲಿ ಶನಿವಾರ ‘ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ’ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ನಗರದ ಗಾಂಧಿ ಉದ್ಯಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮೆರವಣಿಗೆ ಆರಂಭವಾಯಿತು.

‘ದೇಶ ಮತ್ತಷ್ಟು ಸುಭದ್ರ’:ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಮಹಾತ್ಮ ಗಾಂಧಿ ಕಾಲಿಟ್ಟ ಈ ನೆಲದಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡುವುದೇ ರೋಮಾಂಚಕ ಸಂಗತಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಅಂದಿನವರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವ ಕ್ಷಣವಿದು. ವಿಶ್ವದ ವಿವಿಧೆಡೆ ಪ್ರಜಾಪ್ರಭುತ್ವ ನಶಿಸುತ್ತಿರುವ ಈ ಸಂದರ್ಭದಲ್ಲಿ, ದೇಶವು ಸುಭದ್ರವಾದ ಸಂವಿಧಾನದ ಅಡಿಯಲ್ಲೇ ಸಾಗುತ್ತಿದೆ. ನನಗಿಂತ ದೇಶವೇ ಮೊದಲು ಎಂಬ ಪ್ರಜೆಗಳಿರುವ ಕಾರಣ ಭಾರತವು ಮತ್ತಷ್ಟು ಭದ್ರವಾಗಿದೆ’ ಎಂದು ಹೇಳಿದರು.

ಎಂ.ಜಿ.ರಸ್ತೆ, ಅಂಬೇಡ್ಕರ್ ವೃತ್ತ, ಗ್ರೀನ್‌ಸ್ಟ್ರೀಟ್, ಸುಭಾಸ್ ವೃತ್ತದ ಮೂಲಕ ಮೆರವಣಿಗೆಯು, ಲಂಡನ್ ಬ್ರಿಜ್ ಬಳಿ ನೂತನ ಫ್ಲೈ ಓವರ್ ಮೇಲೆ ಸಾಗಿತು. ದಟ್ಟವಾಗಿ ಕವಿದ ಕಾರ್ಮೋಡ ಮತ್ತು ಸಾಧಾರಣ ಮಳೆ ಬೀಳುತ್ತಿದ್ದಂತೆ ರಾಷ್ಟ್ರಧ್ವಜ ಹಿಡಿದಿದ್ದ ವಿದ್ಯಾರ್ಥಿಗಳ ಹುಮ್ಮಸ್ಸು ಮತ್ತಷ್ಟು ಹೆಚ್ಚಾಯಿತು. ಗಟ್ಟಿ ಧ್ವನಿಯಿಂದ ಘೋಷಣೆಗಳನ್ನು ಕೂಗುತ್ತ ಸಾಗಿ ಬಂದರು. ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು.

ರಾಷ್ಟ್ರಧ್ವಜ ಹಿಡಿದು ಸಾಗಿದ ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಸೆಲ್ಫಿ, ಫೋಟೊ ತೆಗೆದುಕೊಂಡು ಅಪರೂಪದ ಕ್ಷಣವನ್ನು ಸ್ಮರಣೀಯವಾಗಿಸಿಕೊಂಡರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ತಹಶೀಲ್ದಾರ್ ನಿಶ್ಚಲ್ ನರೋನಾ ಹಾಗೂ ವಿವಿಧ ಅಧಿಕಾರಿಗಳು, ನಗರಸಭೆ ಸದಸ್ಯರು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿ ಹುರಿದುಂಬಿಸಿದರು.

ಕಾರವಾರದಲ್ಲಿ ನಾಗರಿಕರು ಶನಿವಾರ ಬೆಳಿಗ್ಗೆಯೇ ಬಹುತೇಕ ಎಲ್ಲ ಮನೆಗಳಲ್ಲೂ ರಾಷ್ಟ್ರಧ್ವಜವನ್ನು ಆರೋಹಣ ಮಾಡಿದ್ದರು. ಅಂಗಡಿ ಮುಂಗಟ್ಟುಗಳು, ಕಚೇರಿಗಳ ಕಟ್ಟಡಗಳ ಮೇಲೂ ಧ್ವಜಗಳು ರಾರಾಜಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT