ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ – ರಾಧೆಯ ಪ್ರೀತಿಯ ಪಯಣ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಪ್ರೀತಿ ಅಭಿನಯದ ‘ರಾಜ ಲವ್ಸ್‌ ರಾಧೆ’ ಚಿತ್ರದ ಕೆಲಸಗಳೆಲ್ಲ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಚಿತ್ರವನ್ನು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇದೆ. ಚಿತ್ರ ಮೇ 18ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ಎಂ. ರಾಜಶೇಖರ್ ಚಿಕ್ಕದಾಗಿ ಒಂದು ಪತ್ರಿಕಾಗೋಷ್ಠಿ ಕರೆದಿದ್ದರು. ‘ಚಿತ್ರ ಈಗಾಗಲೇ ಸಿದ್ಧವಾಗಿದೆ. ಆದರೆ ಕೆಲವು ತಾಂತ್ರಿಕ ಕೆಲಸಗಳ ಕಾರಣದಿಂದ ಬಿಡುಗಡೆ ತುಸು ತಡವಾಯಿತು’ ಎನ್ನುತ್ತಾ ಮಾತು ಆರಂಭಿಸಿದರು.

‘ಈ ಸಿನಿಮಾ ಮಾಡುವ ಮೊದಲು ನನ್ನಲ್ಲಿ ಸಿನಿಮಾ ಕ್ಷೇತ್ರದಲ್ಲಿ ಉಳಿದುಕೊಳ್ಳುವ ಬಗ್ಗೆ ಗೊಂದಲ ಇತ್ತು. ಈ ಕ್ಷೇತ್ರದಲ್ಲೇ ಮುಂದುವರಿಯಬೇಕೋ, ಇದನ್ನು ತೊರೆಯಬೇಕೋ ಎಂಬ ಗೊಂದಲ ನನ್ನಲ್ಲಿ ಇತ್ತು. ಆ ಸಂದರ್ಭದಲ್ಲಿ ನನಗೆ ಈ ನಿರ್ಮಾಪಕರು ಪರಿಚಿತರಾದರು. ಅವರಿಗೆ ನಾನು ಸಿದ್ಧಪಡಿಸಿಕೊಂಡಿದ್ದ ಕಥೆ ಹೇಳಿದೆ. ಅವರು ಒಪ್ಪಿಕೊಂಡು, ಸಿನಿಮಾಕ್ಕೆ ಹಣ ಹೂಡಿದರು’ ಎಂದು ಚಿತ್ರದ ಹಿಂದಿನ ಕಥೆ ಹೇಳಿದರು.

ಈ ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಂತೆ. ಖಳನಟ ಡ್ಯಾನಿ ಕುಟ್ಟಪ್ಪ ಕೂಡ ಇದರಲ್ಲಿ ಒಂದಿಷ್ಟು ಹಾಸ್ಯ ಮಾಡುತ್ತಾರಂತೆ. ಇಂದಿನ ವೀಕ್ಷಕರು ಹಾಸ್ಯವನ್ನು ಹೆಚ್ಚು ಬಯಸುತ್ತಾರೆ ಎಂದು ನಿರ್ಮಾಪಕರು, ದೊಡ್ಡ ಕಲಾವಿದರನ್ನೇ ಹಾಕಿಕೊಂಡು ಸಿನಿಮಾ ಮಾಡಲು ನಿರ್ದೇಶಕರಿಗೆ ಹೇಳಿದ್ದರಂತೆ.

‘ನಾಯಕಿ ರಾಧಿಕಾ ಒಂದು ಯುಗಳ ಗೀತೆಗೆ ಚೆನ್ನಾಗಿ ಡಾನ್ಸ್ ಮಾಡಿದ್ದಾರೆ. ವಿಜಯ್ ಕೂಡ ಒಳ್ಳೆಯ ಡಾನ್ಸರ್. ಅವರ ಡಾನ್ಸ್‌ ಕಲೆ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ, ಮೆಲೊಡಿ ಹಾಡುಗಳನ್ನು ಬಳಸಿಲ್ಲ’ ಎಂದರು ರಾಜಶೇಖರ್. ಗ್ಯಾರೇಜಿನಲ್ಲಿ ಕೆಲಸ ಮಾಡುವವನ ಪಾತ್ರ ಪವನ್ ಅವರದ್ದು. ‘ನಮ್ಮ ಸಿನಿಮಾ ಬಿಡುಗಡೆ ಆಗುವ ಹೊತ್ತಿಗೆ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿರುತ್ತದೆ. ಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬಹುದು. ಮನಸ್ಸಿಗೆ ರಿಲೀಫ್ ಸಿಗುತ್ತದೆ’ ಎಂದರು ಪವನ್.

ಚಿದಾನಂದ್ ಎಚ್.ಕೆ. ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಈ ಚಿತ್ರಕ್ಕಿದೆ. ರಾಧಿಕಾ ಅವರಿಗೆ ಇದು ಎರಡನೆಯ ಸಿನಿಮಾ. ‘ನಾನು ಪಂಟ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಈ ಸಿನಿಮಾ ಕುರಿತ ಮಾತುಕತೆ ನಡೆದಿತ್ತು’ ಎಂದರು ರಾಧಿಕಾ.

ವಿಜಯ್ ಅವರದ್ದು ಈ ಚಿತ್ರದಲ್ಲಿ ಗ್ಯಾರೇಜಿನಲ್ಲಿ ಕೆಲಸ ಮಾಡುವ ಮೆಕ್ಯಾನಿಕ್‌ನ ಪಾತ್ರ. ‘ಇದು ಕಮರ್ಷಿಯಲ್ ಮಸಾಲಾ ಪಾತ್ರ. ಈ ಪಾತ್ರ ಜಾಸ್ತಿ ಹಾಸ್ಯ ಮಾಡುತ್ತದೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು ವಿಜಯ್.

ಕೊನೆಯಲ್ಲಿ ಮಾತನಾಡಿದ ನಿರ್ಮಾಪಕ ಎಚ್.ಎಲ್.ಎನ್. ರಾಜ್, ‘ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಬಯಕೆಯಿಂದ ಈ ಸಿನಿಮಾ ನಿರ್ಮಾಣ ಮಾಡಿ, ನನ್ನ ಪಾಲಿನ ಕೆಲಸ ಮುಗಿಸಿದ್ದೇನೆ. ಜನ ಈ ಚಿತ್ರವನ್ನು ಗೆಲ್ಲಿಸಿಕೊಡಬೇಕು. ಮನಸ್ಸು ರಿಫ್ರೆಶ್ ಮಾಡಿಕೊಳ್ಳಲು ಇದು ಒಳ್ಳೆಯ ಸಿನಿಮಾ. ಕೊಡುವ ಹಣಕ್ಕೆ ಮೋಸ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT