ಭಾನುವಾರ, ಜನವರಿ 24, 2021
17 °C
ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ

‘ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಆರ್ಥಿಕ ವಲಯ ನಿರ್ಮಾಣ ಮಾಡಬೇಕು ಎಂಬ ದೃಷ್ಟಿಯಲ್ಲಿ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಸಂಸದ ಅನಂತಕುಮಾರ್‌ ಹೆಗಡೆ ಹೇಳಿದರು.

ತಾಲ್ಲೂಕಿನ ಬೇಗಾರ ಸಮೀಪ ಸೋಮವಾರ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹೊನ್ನಾವರ, ಬೆಲೆಕೇರಿ, ಕಾರವಾರದಲ್ಲಿ ಬೃಹತ್‌ ಪ್ರಮಾಣದ ಪೋರ್ಟ್( ಬಂದರು) ನಿರ್ಮಾಣಗೊಳ್ಳಲಿದ್ದು, ಇದರ ಲಾಭ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳಿಗೂ ಆಗಲಿದೆ. ಜಿಲ್ಲೆಯ ಜನ ಹೊಸ ರೀತಿ ಯೋಚನೆ ಮಾಡಬೇಕು. ಹೊಸದಾದ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು. ಜಗತ್ತು ಬದಲಾಗುತ್ತಿದೆ. ನಾವು ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು ಎಂದರು.

ಕಳೆದ 10 ವರ್ಷಗಳಿಂದ ಪಿಎಂಜಿಎಸ್‌ ಯೋಜನೆಯಲ್ಲಿ ಕರ್ನಾಟಕಕ್ಕೆ ಹಣ ಸಿಕ್ಕಿರಲಿಲ್ಲ. ಈ ವರ್ಷ ಪುನಃ ಹಣ ದೊರಕುತ್ತಿದೆ. ರಾಜ್ಯ ಸರ್ಕಾರವೂ ಸಹಕಾರ ನೀಡುತ್ತಿದೆ ಎಂದರು.

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ, ಈಗ ಮೊದಲ ಹಂತದಲ್ಲಿ ₹ 23 ಕೋಟಿ ಅನುದಾನ ಮಂಜೂರಾಗಿದ್ದು, 25 ಕಿ.ಮೀ ರಸ್ತೆ ಸುಧಾರಣೆಗೊಳ್ಳಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಯೋಜನೆ ಇದಾಗಿದೆ ಎಂದರು.

ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿರುವುದು ಸತ್ಯ. ಕಳೆದ 6 ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳಿಗೆ ಕೇವಲ ₹ 1 ಕೋಟಿ ಅನುದಾನ ನೀಡಲಾಗಿತ್ತು. ಇದರಿಂದ ರಸ್ತೆ ನಿರ್ವಹಣೆ ಸಾಧ್ಯವಾಗಿರಲಿಲ್ಲ ಎಂದರು. 'ಪ್ರಧಾನಿ ಸೂಚಿಸಿರುವ 'ಒಂದು ದೇಶ, ಒಂದು ಚುನಾವಣೆ'ಯ ವಿಷಯವನ್ನು ಸದ್ಯ ಆರಂಭಗೊಳ್ಳಲಿರುವ ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇವೆ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ವಿವೇಕ ಭಟ್ಟ, ಬಿಜೆಪಿ ತಾಲ್ಲೂಕು ಮಂಡಳದ ಅಧ್ಯಕ್ಷ ನಾಗರಾಜ ನಾಯ್ಕ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸದಸ್ಯ ಕೆ.ಜಿ.ನಾಯ್ಕ ಇದ್ದರು. ಕೃಷ್ಣಮೂರ್ತಿ ಕಡಕೇರಿ ನಿರೂಪಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.