ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಸ್ರಲಿಂಗ:ಕಣ್ಮರೆಯಾಗುತ್ತಿದೆ ಶಿವಲಿಂಗ

ನದಿಯ ರಭಸ, ಪ್ರವಾಸಿಗರ ಮೋಜಿನಿಂದಾಗಿ ಧಕ್ಕೆ
Last Updated 6 ಜೂನ್ 2022, 16:17 IST
ಅಕ್ಷರ ಗಾತ್ರ

ಶಿರಸಿ: ಶಾಲ್ಮಲಾ ನದಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಶಿವಲಿಂಗಗಳೇ ಗೋಚರಿಸುತ್ತಿದ್ದ ‘ಸಹಸ್ರಲಿಂಗ’ದಲ್ಲಿ ಈಗ ಬೆರಳೆಣಿಕೆಯಷ್ಟು ಶಿವಲಿಂಗಗಳು ಉಳಿದುಕೊಂಡಿವೆ. ಇದರಿಂದ ಈ ತಾಣದ ಪ್ರಾಮುಖ್ಯತೆ ಕಳೆದುಕೊಳ್ಳುವ ಆತಂಕ ಉಂಟಾಗಿದೆ.

ನೂರಾರು ವರ್ಷಗಳ ಹಿಂದೆ ನದಿಯ ಬಂಡೆಕಲ್ಲುಗಳ ಮೇಲೆ ಉದ್ಭವವಾದ ಶಿವಲಿಂಗಗಳು ಕಾಲಕ್ರಮೇಣ ಧಾರ್ಮಿಕ ತಾಣದ ಜತೆಗೆ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಈಚಿನ ವರ್ಷಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

ನದಿಯ ಸುಮಾರು ಎರಡು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದ ಕಲ್ಲುಗಳ ಮೇಲೆ ನೂರಾರು ಸಂಖ್ಯೆಯ ಶಿವಲಿಂಗಗಳು ಇದ್ದವು. ಒಂದಕ್ಕಿಂತ ಒಂದು ವಿಭಿನ್ನವಾಗಿದ್ದ ಕಾರಣ ಆಕರ್ಷಣೆ ಹೆಚ್ಚಿತ್ತು.

ಮಳೆಗಾಲದಲ್ಲಿ ರಭಸವಾಗಿ ಹರಿಯುವ ಶಾಲ್ಮಲಾ ನದಿ ಹಲವು ಬಂಡೆಕಲ್ಲುಗಳನ್ನು ಕೊಚ್ಚಿಕೊಂಡು ಸಾಗಿದೆ. ಇದರ ಮೇಲಿದ್ದ ಲಿಂಗಗಳು ಕಣ್ಮರೆಯಾಗಿವೆ. ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರಲ್ಲೂ ಹಲವರು ದಾಂಧಲೆ ಎಬ್ಬಿಸಿ, ಮೋಜಿಗಾಗಿ ಕಲ್ಲುಗಳನ್ನು ಒಡೆದು ಹಾಕಿರುವ ದೂರುಗಳಿವೆ. ಹೀಗಾಗಿ ಈ ತಾಣದ ಪ್ರಸಿದ್ಧಿಗೆ ಕಾರಣವಾಗಿದ್ದ ಶಿವಲಿಂಗಗಳು ಕಣ್ಮರೆಯಾಗುತ್ತಿವೆ.

‘ವಾರಾಂತ್ಯದಲ್ಲಷ್ಟೆ ಪ್ರವಾಸಿಗರು ಭೇಟಿ ನೀಡುವ ಪರಿಪಾಠವಿತ್ತು. ಕೆಲವು ವರ್ಷದಿಂದ ಬಹುತೇಕ ಎಲ್ಲ ದಿನದಲ್ಲೂ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿ ನಿರ್ವಹಣೆ, ಪ್ರವಾಸಿಗರ ಮೇಲೆ ನಿಗಾ ಇಡಲು ಸಿಬ್ಬಂದಿ ಇಲ್ಲದೆ ಸಮಸ್ಯೆ ಆಗಿದೆ’ ಎನ್ನುತ್ತಾರೆ ಸ್ಥಳೀಯರು.

‘2105–16ರ ವೇಳೆಗೆ ಸಮೀಕ್ಷೆ ನಡೆಸಿದ್ದಾಗ ಕೇವಲ 80 ರಿಂದ 90 ಶಿವಲಿಂಗಗಳು ಉಳಿದುಕೊಂಡಿರುವುದು ದೃಢಪಟ್ಟಿದೆ. ಈಗ ಅವುಗಳಲ್ಲೂ ಕೆಲವು ಕಣ್ಮೆರೆಯಾಗಿರುವ ಸಾಧ್ಯತೆ ಇದೆ. ಇರುವ ಶಿವಲಿಂಗ ಉಳಿಸಿಕೊಳ್ಳಲು ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದ್ದೇವೆ’ ಎನ್ನುತ್ತಾರೆ ಭೈರುಂಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ನಾಯ್ಕ.

‘ಸಹಸ್ರಲಿಂಗದ ಪ್ರಾಮುಖ್ಯತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದು. ಸಮೀಪದಲ್ಲೇ ಉದ್ಯಾನವನ ನಿರ್ಮಿಸಲಾಗುವುದು’ ಎಂದರು.

ಸೌಕರ್ಯ ಅಭಿವೃದ್ಧಿಗಷ್ಟೆ ಆದ್ಯತೆ:

ಸಹಸ್ರಲಿಂಗದ ಅಭಿವೃದ್ಧಿಗೆ ಈ ಹಿಂದೆ ಆರ್.ವಿ.ದೇಶಪಾಂಡೆ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ವೇಳೆ ಅನುದಾನ ಬಿಡುಗಡೆ ಮಾಡಿದ್ದರು. ಈ ಅನುದಾನದಲ್ಲಿ ಪಾರ್ಕಿಂಗ್ ತಾಣ, ಮೆಟ್ಟಿಲುಗಳ ನಿರ್ಮಾಣ ಕೆಲಸಗಳು ನಡೆದಿದ್ದವು.

‘ಶಿವಲಿಂಗಗಳಿದ್ದ ಬಂಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದವು. ಅವುಗಳನ್ನು ಸುಭದ್ರವಾಗಿರಲು ಅಗತ್ಯ ಕ್ರಮಕ್ಕೆ ಮನವಿ ಮಾಡಲಾಗಿತ್ತು. ಪ್ರವಾಸಿಗರನ್ನು ಸೆಳೆಯುವ ಶಿವಲಿಂಗಗಳ ಸಂರಕ್ಷಣೆಗೆ ಆದ್ಯತೆ ಈವರೆಗೂ ನೀಡಿಲ್ಲ’ ಎಂದು ಸ್ಥಳೀಯ ಮುಖಂಡರೊಬ್ಬರು ಬೇಸರಿಸಿದರು.

---------------

ಸಹಸ್ರಲಿಂಗದಲ್ಲಿ ಪ್ರವಾಸಿಗರು ಶಿವಲಿಂಗಗಳನ್ನು ವಿರೂಪಗೊಳಿಸದಂತೆ ನಿಗಾ ಇಡಲು ಪ್ರವಾಸಿ ಮಿತ್ರರೊಬ್ಬರನ್ನು ನಿಯೋಜನೆ ಮಾಡಲಾಗಿದೆ.

ರಾಘವೇಂದ್ರ ನಾಯ್ಕ

ಭೈರುಂಬೆ ಗ್ರಾಮ ಪಂಚಾಯ್ತಿ ಅಧ್ಯಕ್ಷ

-----------------

ಎಂಟು ವರ್ಷಗಳ ಹಿಂದೆ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಭೇಟಿ ನೀಡಿದ್ದೆ. ಆಗ ಲೆಕ್ಕವಿಲ್ಲಷ್ಟು ಶಿವಲಿಂಗಗಳು ಇಲ್ಲಿದ್ದವು. ಈಗ ಬೆರಳೆಣಿಕೆಯಷ್ಟು ಮಾತ್ರ ಇರುವುದು ನೋಡಿ ಬೇಸರವಾಯಿತು.

ಮೌನೇಶ್ ಬಾಗಲಕೋಟೆ

ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT