ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾರರ ಹೆಗಲಿಗೇರಿದ ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಹೊಣೆ

ಸಂದಿಗ್ಧ ಸಂದರ್ಭದಲ್ಲಿ ಅಧಿಕಾರ; ಹಲವಾರು ಸವಾಲುಗಳು
Last Updated 11 ಏಪ್ರಿಲ್ 2020, 4:47 IST
ಅಕ್ಷರ ಗಾತ್ರ

ಶಿರಸಿ: ನಿರೀಕ್ಷೆಯಂತೆ ಉತ್ತರ ಕನ್ನಡ ಉಸ್ತುವಾರಿ ಸಚಿವ ಸ್ಥಾನವು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರ ಹೆಗಲಿಗೇರಿದೆ. ಸಂದಿಗ್ಧ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡಿರುವ ಹೆಬ್ಬಾರರ ಎದುರು ಹಲವಾರು ಸವಾಲುಗಳೂ ಇವೆ.

ನೆರೆಯ ಬೆಳಗಾವಿ ಜಿಲ್ಲೆಯ ಶಾಸಕಿ, ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ ಅವರು ಕಳೆದ ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಏಳು ತಿಂಗಳು ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಗತಿ ಪರಿಶೀಲನೆ ಸಭೆ, ಕೆಲವು ಪ್ರಮುಖ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಅವರು ಜಿಲ್ಲೆ ಸಂಚಾರ ಮಾಡಿದ್ದು ಕಡಿಮೆಯೇ. ಶಿವರಾಮ ಹೆಬ್ಬಾರ್ ಅವರಿಗೆ ಸಚಿವ ಸ್ಥಾನ ಹಂಚಿಕೆಯಾದ ಮೇಲೆ, ಜೊಲ್ಲೆ ಅವರು ಜಿಲ್ಲೆಗೆ ತೀರಾ ಅಪರೂಪವಾಗಿದ್ದರು. ಜಿಲ್ಲೆಯಲ್ಲಿ ಕೋವಿಡ್–19 ಪಾಸಿಟಿವ್ ಪ್ರಕರಣಗಳು ಬಂದ ಮೇಲೆ ಸಹ ಇತ್ತ ಸುಳಿಯದ ಅವರು, ತೀರಾ ಇತ್ತೀಚೆಗೆ ಒಮ್ಮೆ ಬಂದು, ಅಧಿಕಾರಿಗಳ ಸಭೆ ನಡೆಸಿ ಹೋಗಿದ್ದರು.

ಈಗ ಜಿಲ್ಲೆಯವರೇ ಆಗಿರುವ ಶಿವರಾಮ ಹೆಬ್ಬಾರ್ ಅವರಿಗೆ ಜಿಲ್ಲಾ ಉಸ್ತುವಾರಿ ದೊರೆತಿರುವುದರಿಂದ ಆಡಳಿತ ಯಂತ್ರ ಇನ್ನಷ್ಟು ಚುರುಕುಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ಮೊದಲ ಬಾರಿಗೆ ಉಸ್ತುವಾರಿ ಸ್ಥಾನ:2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಶಿವರಾಮ ಹೆಬ್ಬಾರ್, ಉಸ್ತುವಾರಿ ಸಚಿವರಾಗಬೇಕೆಂಬ ಕನಸು ಹೊತ್ತು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆಗಲೇ ಅವರಿಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ಸಚಿವ ಸ್ಥಾನ ಎರಡೂ ಸಿಗುವುದು ಖಚಿತವಾಗಿತ್ತು.

2013 ಹಾಗೂ 2018ರ ಚುನಾವಣೆ ಹಾಗೂ 2019ರ ಉಪಚುನಾವಣೆ ಹೀಗೆ ಮೂರು ಬಾರಿ ಆಯ್ಕೆಯಾಗಿರುವ ಹೆಬ್ಬಾರ್ ಅವರಿಗೆ ಇದೇ ಮೊದಲ ಬಾರಿ ಉಸ್ತುವಾರಿ ಸಚಿವ ಸ್ಥಾನದ ಹೊಣೆ ದೊರೆತಿದೆ.

ರಾಜ್ಯದಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಪಿ.ಎಸ್.ಜೈವಂತ ಅವರು 1998ರಲ್ಲಿ, 2006ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸಚಿವರಾಗಿದ್ದ ಶಿವಾನಂದ ನಾಯ್ಕ, ಕೆಲ ತಿಂಗಳುಗಳ ಕಾಲ ಉಸ್ತುವಾರಿ ಸಚಿವರಾಗಿದ್ದರು. 2008ರಲ್ಲಿ ಬಿಜೆಪಿ ಅಧಿಕಾರ ಹಿಡಿದಾಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಐದು ವರ್ಷ ಉಸ್ತುವಾರಿ ಸ್ಥಾನ ನಿರ್ವಹಿಸಿದ್ದರು. ಇವನ್ನು ಹೊರತುಪಡಿಸಿದರೆ, ಕಳೆದ ಮೂರು ದಶಕಗಳಲ್ಲಿ, ಬಹುಪಾಲು ಜಿಲ್ಲಾ ಉಸ್ತುವಾರಿಯಾಗಿ ಆಡಳಿತ ನಡೆಸಿದವರು ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ.

2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ, ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗಲೂ ದೇಶಪಾಂಡೆಯವರೇ ಉಸ್ತುವಾರಿ ಸಚಿವರಾಗಿದ್ದರು. ಆಗ, ಕಾಂಗ್ರೆಸ್‌ನಲ್ಲೇ ಇದ್ದು, ದೇಶಪಾಂಡೆಯವರಿಗೆ ನೇರ ಸೆಡ್ಡುಹೊಡೆದಿದ್ದ ಶಿವರಾಮ ಹೆಬ್ಬಾರ್, ‘ಹಿರಿಯರು, ಕಿರಿಯರಿಗೆ ಅಧಿಕಾರ ಬಿಟ್ಟುಕೊಡಬೇಕು’ ಎಂದು ಬಹಿರಂಗವಾಗಿಯೇ ಹೇಳಿದ್ದರು. ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದ ಹೆಬ್ಬಾರರ ಉಸ್ತುವಾರಿ ಸಚಿವ ಸ್ಥಾನದ ಹಂಬಲ ಈಗ ಸಾಕಾರಗೊಂಡಿದೆ.

ಸಾಲು ಸಾಲು ಸವಾಲುಗಳು:ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೋವಿಡ್–19 ಕಾಯಿಲೆಯಿಂದ ಜಿಲ್ಲೆಯಲ್ಲೂ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಆರ್ಥಿಕತೆ ಕುಸಿತ ಕಂಡಿದೆ. ಬೇಸಿಗೆ ಬರ ಎದುರಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿ ಸಚಿವರ ಮೇಲಿದೆ.

ಅಧಿಕಾರಿಗಳ ಸಭೆ ಇಂದು
ಶನಿವಾರ ಮಧ್ಯಾಹ್ನ 3.30ಕ್ಕೆ ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ, ಜಿಲ್ಲೆಯಲ್ಲಿ ಕೋವಿಡ್‌–19 ಪರಿಸ್ಥಿತಿಯ ಮಾಹಿತಿ ಪಡೆದು, ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು. ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಏ.14 ನಂತರ ಲಾಕ್‌ಡೌನ್ ಬಗ್ಗೆ ನಿರ್ಣಯವಾಗುತ್ತದೆ. ಸಂಕೀರ್ಣ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT