ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ

ಶಿವರಾಮ ಹೆಬ್ಬಾರ್ ಹೇಳಿಕೆ
Last Updated 20 ಸೆಪ್ಟೆಂಬರ್ 2019, 5:56 IST
ಅಕ್ಷರ ಗಾತ್ರ

ಶಿರಸಿ: 'ನಾವು ಅನರ್ಹರೂ ಅಲ್ಲ ಅನಾಥರೂ ಅಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಎಲ್ಲವೂ ತೀರ್ಮಾನವಾಗಲಿದೆ. ಅನರ್ಹ ಶಾಸಕರು ಹತಾಶರಾಗಿದ್ದಾರೆ ಎನ್ನುವುದು ಮಾಧ್ಯಮಗಳ ಊಹಾಪೋಹವಾಗಿದೆ’ ಎಂದು ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡೂವರೆ ತಿಂಗಳ ರಾಜಕಾರಣವು ರಾಜ್ಯ, ದೇಶದಲ್ಲಿ ಸಂಚಲನ ಮೂಡಿಸಿದೆ. ಸ್ವಯಂ ಘೋಷಿತ ಬುದ್ಧಿವಂತ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಂಡಿದ್ದಾರೆ. ರಾಜಕೀಯ ದ್ವೇಷದ ಕ್ರಮ ಇದಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ನಾಯಕರ ಒತ್ತಾಯಕ್ಕೆ ಒಳಗಾಗಿ, ಅವರನ್ನು ಒಲೈಕೆ ಮಾಡಲು ಹೀಗೆ ಮಾಡಲಾಗಿದೆ. ನ್ಯಾಯಾಲಯದ ವಿಚಾರಣೆ ಮುಗಿದ ನಂತರ ಕಾಂಗ್ರೆಸ್ ನಾಯಕರ ಒತ್ತಡದ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಅನರ್ಹರಾಗಿದ್ದರೂ, ನಾವು ಎಲ್ಲಿಯೂ ಬಿಜೆಪಿ ಹೋಗುತ್ತೇವೆ ಎಂದು ಹೇಳಿಲ್ಲ. ಮೈತ್ರಿಯಿಂದ ಮೋಸಕ್ಕೆ ಒಳಗಾಗಿರುವ ಕಾರಣ ರಾಜೀನಾಮೆ ನೀಡಿದ್ದೇವೆ. ನ್ಯಾಯಾಲಯದ ಅಂತಿಮ ನಿರ್ಣಯ ಬಂದ ಮೇಲೆ‌ ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಶೀಘ್ರ ತೀರ್ಪು ಬರುವ ನಂಬಿಕೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ರಾಜೀನಾಮೆ ನೀಡಿದ್ದರೂ ಯಾರನ್ನೂ ನನ್ನೊಂದಿಗೆ ಬನ್ನಿ ಎಂದು ಕರೆದಿಲ್ಲ. ನನ್ನ ನಾಯಕತ್ವದ ಮೇಲೆ ವಿಶ್ವಾಸ , ನಂಬಿಕೆ ಇದ್ದವರು ಜೊತೆಯಲ್ಲಿ ಬಂದಿದ್ದಾರೆ. ಯಲ್ಲಾಪುರ ವಿಧಾನಸಭಾದ 42 ಪಂಚಾಯ್ತಿಗಳಲ್ಲಿ ಶೇ 90ಕ್ಕೂ ಹೆಚ್ಚು ಘಟಕಗಳ ಸದಸ್ಯರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕ್ಷೇತ್ರದಲ್ಲಿ ಹಿಂದಿನ ಎಲ್ಲ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿದೆ. ಅಲ್ಲದೇ ಹೊಸ ಹೊಸ ಯೋಜನೆಗಳೂ ಸಹ ಅನುಷ್ಠಾನ ಆಗುತ್ತಿವೆ. ಕನ್ನಡದ ಪ್ರಥಮ ರಾಜಧಾನಿ ಬನವಾಸಿಯನ್ನು ಉತ್ತರ ಕ‌ನ್ನಡದಿಂದ ಬೇರ್ಪಡಿಸಿ ಶಿವಮೊಗ್ಗದ ಆನವಟ್ಟಿಗೆ ಸೇರಿಸುತ್ತಾರೆ ಎಂಬುದು ಶುದ್ಧ ಸುಳ್ಳು. ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವ ಇಲ್ಲ. ಬನವಾಸಿಯನ್ನು ಜಿಲ್ಲೆಯಿಂದ ಹೊರಹೋಗಲು ಬಿಡುವುದಿಲ್ಲ ಬದಲಾಗಿ ಇದನ್ನು ತಾಲ್ಲೂಕು ಮಾಡುವ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT