ಬುಧವಾರ, ಆಗಸ್ಟ್ 21, 2019
27 °C
‘ದಶಕಗಳಿಂದ ಅಧಿಕಾರ ಭೋಗಿಸಿದವರು ಆತ್ಮಾವಲೋಕನ ಮಾಡಿಕೊಳ್ಳಲಿ’

ಕೋಟಿ ರೂಪಾಯಿಗೆ ಮಾರಿಕೊಳ್ಳುವ ಅವಶ್ಯಕತೆ ನನಗಿಲ್ಲ: ಹೆಬ್ಬಾರ್

Published:
Updated:
Prajavani

ಮುಂಡಗೋಡ: ‘ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡುವೆ. ಕೋಟಿ ರೂಪಾಯಿಗೆ ಮಾರಿಕೊಳ್ಳುವ ಅವಶ್ಯಕತೆ ನನಗಿಲ್ಲ. ಕೋಟಿ ಕೋಟಿ ಹಣವನ್ನು ಒಂದೂವರೆ ದಶಕದ ಹಿಂದೆಯೇ ನೋಡಿದ್ದೇನೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹಾಗೂ ಕ್ಷೇತ್ರದ ಅಭಿವೃದ್ದಿ ಪ್ರಶ್ನೆ ಬಂದಾಗ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು’ ಎಂದು ಅನರ್ಹಗೊಂಡ ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ಇಲ್ಲಿಯ ಪ್ರವಾಸಿ ಮಂದಿರ ಆವರಣದಲ್ಲಿ ಬುಧವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ಒಬ್ಬ ಪಂಚಾಯ್ತಿ ಸದಸ್ಯ ರಾಜೀನಾಮೆ ಕೊಡಲು ಹಿಂದೆ ಮುಂದೆ ನೋಡುತ್ತಾನೆ. ಆದರೆ, 20 ಶಾಸಕರು ಒಟ್ಟಾಗಿ ರಾಜೀನಾಮೆ ಏಕೆ ನೀಡಿದೆವು ಎಂಬುದನ್ನು ಮುಖಂಡರು ತಿಳಿಯಬೇಕು. ಸುಪ್ರೀಂಕೋರ್ಟ್‌ ಮೇಲೆ ನಮಗೆ ನಂಬಿಕೆಯಿದೆ. ಖಂಡಿತವಾಗಿ ನ್ಯಾಯ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜಕೀಯ ದುರುದ್ದೇಶ, ಒತ್ತಡಕ್ಕೆ ಮಣಿದು ಸ್ಪೀಕರ್‌ ಅನರ್ಹತೆಯ ತೀರ್ಮಾನ ಕೈಗೊಂಡಿದ್ದಾರೆ. ಮುಂದಿನ 10–12 ದಿನಗಳಲ್ಲಿ ಕಾರ್ಯಕರ್ತರು ನಿರೀಕ್ಷೆ ಮಾಡದಂತಹ ಅದ್ಧೂರಿ ದಿನ ಬರಲಿದೆ’ ಎಂದು ಒಗಟಾಗಿ ಮಾತನಾಡಿದರು.

‘ಯಾರದ್ದಾದರೂ ಮನಸ್ಸಿಗೆ ಘಾಸಿಯಾಗಿದ್ದರೆ ಕ್ಷಮೆ ಕೋರುವೆ. ನನ್ನನ್ನು ಅನರ್ಹ ಮಾಡಿದ್ದರಿಂದ ಕೆಲವರಿಗೆ ಸಂತೋಷವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಯಾರನ್ನೂ ಕೆಟ್ಟವರನ್ನಾಗಿ ನೋಡುವುದಿಲ್ಲ. ಯುದ್ಧ ನಡೆಯುತ್ತದೆ.. ಅದಕ್ಕೆ ಸಿದ್ಧನಾಗಿದ್ದೇನೆ. ಮೂರು ಚುನಾವಣೆ ಎದುರಿಸಿದ್ದೇನೆ. ನಾಲ್ಕನೇ ಚುನಾವಣೆಗೆ ನಿಮ್ಮ ಆಶೀರ್ವಾದ ಬೇಡುತ್ತೇನೆ’ ಎಂದರು.

‘ಮೂರು ನಾಲ್ಕು ದಶಕ ಅಧಿಕಾರ ಭೋಗಿಸಿದವರೇ, ಅಧಿಕಾರದ ಆಸೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ. ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದೇ ಜನ ಅಧಿಕಾರ ಬಿಟ್ಟು ಹಿಂದೆ ಸರಿದಿದ್ದರೆ ಮೈತ್ರಿ ಸರ್ಕಾರಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಮುಂದೆ ಕುಳಿತವರು ಮುಂದೆಯೇ ಇರಲಿ, ಹಿಂದಿನವರು ಸತ್ತು ಹೋಗಲಿ ಎನ್ನುವ ಭಾವನೆಯಿಂದ ಇಂತಹ ಸ್ಥಿತಿ ಬಂದಿದೆ. ಇದಕ್ಕೆ ನಾವ್ಯಾರೂ ಕಾರಣರಲ್ಲ’ ಎಂದು ಪರೋಕ್ಷವಾಗಿ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಅವರ ವಿರುದ್ಧ ಹರಿಹಾಯ್ದರು.

Post Comments (+)