ಸೋಮವಾರ, ಆಗಸ್ಟ್ 2, 2021
28 °C
ಬಾಗಿಲು ಹಾಕಿರುವ ಚಿನ್ನರ ಆಭರಣ, ಕ್ಷೌರಿಕರ ಅಂಗಡಿಗಳು

ಶಿರಸಿಯಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಶಿರಸಿ: ಕೊರೊನಾ ಸೋಂಕು ತಾಲ್ಲೂಕಿನ ಕಾಲಿಟ್ಟಿಲ್ಲವೆಂದು ಇಷ್ಟು ದಿನ ನಿರುಮ್ಮಳರಾಗಿದ್ದ ಜನರಿಗೆ, ಕಳೆದ ಮೂರ್ನಾಲ್ಕು ದಿನಗಳಲ್ಲಿ ಬಂದಿರುವ ಪಾಸಿಟಿವ್ ಪ್ರಕರಣಗಳು ನಿದ್ದೆಗೆಡಿಸಿವೆ. ಅಂಗಡಿಕಾರರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್ ಮಾಡಲು ಚಿಂತನೆ ನಡೆಸಿದ್ದಾರೆ.

ನಗರದ ನಿವಾಸಿಗಳು, ಹೊರ ಜಿಲ್ಲೆಗಳಿಂದ ಬಂದಿರುವ ಕೆಲವರಲ್ಲಿ ಕೋವಿಡ್ 19 ದೃಢಪಟ್ಟಿರುವ ಕಾರಣ, ಕೆಲವು ಬಡಾವಣೆಗಳ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಕೊರೊನಾ ಸೋಂಕು ತಾಲ್ಲೂಕಿಗೆ ಕಾಲಿಟ್ಟಿರುವುದನ್ನು ತಿಳಿದ ಹಳ್ಳಿಗರು ಪೇಟೆಗೆ ಬರಲು ಭಯಪಡುತ್ತಿದ್ದರೆ, ನಗರವಾಸಿಗಳು ಮನೆಯಿಂದ ಹೊರಬೀಳಲು ಅನುಮಾನಪಡುತ್ತಿದ್ದಾರೆ.

ಈಗಾಗಲೇ ಫೂಟ್‌ವೇರ್ ಅಂಗಡಿಗಳ ಸಂಘ, ಕ್ಷೌರಿಕರ ಸಂಘಗಳು ಸ್ವಯಂ ಪ್ರೇರಣೆಯಿಂದ ನಗರದಲ್ಲಿ ಅಂಗಡಿಗಳನ್ನು ನಿರ್ದಿಷ್ಟ ಅವಧಿಗೆ ಬಂದ್ ಮಾಡಿವೆ. ಹೆಲವು ಹೋಟೆಲ್‌ಗಳು ಕೂಡ ಬಂದಾಗಿವೆ. ನಗರದ ಎಲ್ಲ ಬಂಗಾರದ ಆಭರಣದ ಅಂಗಡಿಗಳು ಸೋಮವಾರದಿಂದಲೇ ಬಂದಾಗಿವೆ. ಜುಲೈ 12ರವರೆಗೆ ಈ ಅಂಗಡಿಗಳನ್ನು ಬಂದ್ ಮಾಡುವುದಾಗಿ ದೈವಜ್ಞ ಬ್ರಾಹ್ಮಣ ಸರಾಫರ ಹಾಗೂ ಆಭರಣ ತಯಾರಕರ ಸಂಘದ ಅಧ್ಯಕ್ಷ ಚಂದ್ರಹಾಸ ಶೇಟ್ ತಿಳಿಸಿದ್ದಾರೆ.

ಕೆಲವು ಅಂಗಡಿಕಾರರು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯುವ ಮೂಲಕ ಕೊರೊನಾ ಸೋಂಕು ನಿಯಂತ್ರಿಸಲು ಯೋಚಿಸಿದ್ದಾರೆ. ‘ಕಿರಾಣಿ ಅಂಗಡಿಗಳು ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಬರುತ್ತವೆ. ಜನರಿಗೆ ದೈನಂದಿನ ಬಳಕೆಗೆ ಬೇಕಾಗುವ ವಸ್ತುಗಳು ಕೊರತೆಯಾಗಬಾರದು. ಈ ಕಾರಣಕ್ಕೆ ಸದ್ಯಕ್ಕೆ ಅಂಗಡಿಗಳನ್ನು ಬಂದ್ ಮಾಡುವ ಯೋಚನೆಯಿಲ್ಲ. ಸರ್ಕಾರದಿಂದ ನಿರ್ದೇಶನ ಬಂದರೆ, ಅಂಗಡಿಗಳನ್ನು ಮುಚ್ಚುತ್ತೇವೆ’ ಎಂದು ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಜಿ.ಜಿ.ಹೆಗಡೆ ಪ್ರತಿಕ್ರಿಯಿಸಿದರು.

ಹಳ್ಳಿಯಲ್ಲಿ ದಿಗ್ಬಂಧನ: ಉದ್ಯೋಗಕ್ಕಾಗಿ ಪ್ರತಿದಿನ ಹಳ್ಳಿಯಿಂದ ಪೇಟೆಗೆ ಬರುವವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೊರೊನಾ ಸೋಂಕಿನ ಭಯದಿಂದಾಗಿ ಮನೆಯ ಹಿರಿಯರು ಮಕ್ಕಳನ್ನು ಪೇಟೆಗೆ ಕಳುಹಿಸಲು ಒಪ್ಪುತ್ತಿಲ್ಲ. ‘ಭಾನುವಾರದ ರಜೆಯ ಕಾರಣ ಊರಿಗೆ ಬಂದಿದ್ದೆ. ಮರಳಿ ಕೆಲಸಕ್ಕೆ ಹೋಗಲು ಊರವರು ದಿಗ್ಬಂಧನ ಹಾಕಿದ್ದಾರೆ. ಪೇಟೆಗೆ ಹೋದರೆ ಮತ್ತೆ ಮರಳಿ ಊರಿಗೆ ಬರುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಹೀಗಾಗಿ, ಮನೆಯಲ್ಲೇ ಉಳಿದಿದ್ದೇನೆ’ ಎನ್ನುತ್ತಾರೆ ಇಂದಿರೇಶ.

‘ಜವಾಬ್ದಾರಿಯುತ ನಾಗರಿಕರು ಎಚ್ಚೆತ್ತು ಮುಂದಿನ 15 ದಿನಗಳ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಬರಬಹುದು. ಲಾಕ್‌ಡೌನ್ ಜಾರಿಗೊಳಿಸುವಂತೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ಶಿಫಾರಸು ಮಾಡಬೇಕು’ ಎಂಬ ಸಂದೇಶವು ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 ‘ಮಾಹಿತಿ ಗೌಪ್ಯವಾಗಿಡುವುದೇ ಸಮಸ್ಯೆ’

‘ಥಂಡಿ, ಜ್ವರದಿಂದ ಬಳಲುತ್ತಿರುವ ವ್ಯಕ್ತಿ ಆಸ್ಪತ್ರೆಗೆ ಬಂದಾಗ, ವೈದ್ಯರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಪ್ರಯಾಣದ ವಿವರಗಳ ಬಗ್ಗೆ ಸತ್ಯ ಸಂಗತಿಯನ್ನು ತಿಳಿಸಿದರೆ, ಸಾಂಕ್ರಾಮಿಕ ರೋಗ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಬಹುದು. ಈಗಾಗಲೇ ಪತ್ತೆಯಾಗಿರುವ 2–3 ಪ್ರಕರಣಗಳಲ್ಲಿ ರೋಗಿಗಳು, ಸತ್ಯ ಸಂಗತಿ ಮರೆಮಾಚಿರುವ ಕಾರಣ, ಹಲವರನ್ನು ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಬಂದಿದೆ’ ಎಂದು ವೈದ್ಯರೊಬ್ಬರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು