ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ| ಮಾರ್ಚ್‌ 3ರಿಂದ ಮಾರಿಕಾಂಬಾ ದೇವಿ ಜಾತ್ರೆ

Last Updated 29 ಡಿಸೆಂಬರ್ 2019, 11:45 IST
ಅಕ್ಷರ ಗಾತ್ರ

ಶಿರಸಿ: ದಕ್ಷಿಣ ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಒಂದಾಗಿರುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್‌ 3ರಿಂದ 11ರವರೆಗೆ ಜರುಗಲಿದೆ.

ಭಾನುವಾರ ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ಶರಣ ಆಚಾರ್ಯ ಜಾತ್ರೆಯ ದಿನಾಂಕ ಘೋಷಿಸಿದರು. ವಿಕಾರಿನಾಮ ಸಂವತ್ಸರದ ಫಾಲ್ಗುಣ ಶುಕ್ಲ ಅಷ್ಟಮಿಯಂದು ಜಾತ್ರೆ ಆರಂಭವಾಗಲಿದೆ. ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ.22ರಿಂದ ಪ್ರಾರಂಭವಾಗಲಿವೆ. ಜ.22ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.11ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ.14ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಫೆ.18ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಫೆ.21ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು, ಫೆ.25 ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ.ಫೆ.26ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.

ಮಾರ್ಚ್3ರ ಮಧ್ಯಾಹ್ನ 12.43ಗಂಟೆಯಿಂದ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.11ರಿಂದ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 4ರಂದು ಬೆಳಿಗ್ಗೆ 7.05 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, 12.43 ಗಂಟೆಯೊಳಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾ.5ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ.

ಮಾರ್ಚ್11ರಂದು ಬೆಳಿಗ್ಗೆ 10.30 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಮಾರ್ಚ್25 ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ನಾಡಿಗ ಮನೆತನದ ಪ್ರಮುಖ ಅಜಯ್ ನಾಡಿಗ್ ದೇವಿ ಸಾನ್ನಿಧ್ಯದಲ್ಲಿ ದೀಪ ಬೆಳಗಿಸಿದರು.ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.

ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಶಶಿಕಲಾ ಚಂದ್ರಾಪಟ್ಟಣ, ಬಾಬುದಾರ ಜಗದೀಶ ಗೌಡ, ಅಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಉತ್ಸವದ ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT