ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ದುಬಾರಿಯಾಗಲಿದೆ ಮಾರಿಕಾಂಬೆ ಸೇವೆ, ಇಲ್ಲಿದೆ ಪೂಜಾ ದರ ಪಟ್ಟಿ

ಧಾರ್ಮಿಕ ಸೇವಾದರ ಪರಿಷ್ಕರಣೆಗೆ ಸಿದ್ಧತೆ: ಹೆಚ್ಚಿನ ಮೊತ್ತದ ಬಗ್ಗೆ ಅಪಸ್ವರ
Last Updated 1 ಸೆಪ್ಟೆಂಬರ್ 2021, 6:06 IST
ಅಕ್ಷರ ಗಾತ್ರ

ಶಿರಸಿ: ನಾಡಿನ ಶಕ್ತಿಪೀಠದಲ್ಲಿ ಒಂದೆನಿಸಿ ಲಕ್ಷಾಂತರ ಭಕ್ತರನ್ನು ಸೆಳೆಯುವ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಧಾರ್ಮಿಕ ಸೇವೆ ದುಬಾರಿಯಾಗುವ ಸಾಧ್ಯತೆ ಇದೆ. ಧರ್ಮದರ್ಶಿ ಮಂಡಳಿ ಸೇವಾ ದರ ಪರಿಷ್ಕರಣೆಗೆ ಮುಂದಾಗಿರುವುದು ಭಕ್ತರ ಈ ಅನುಮಾನಕ್ಕೆ ಕಾರಣವಾಗಿದೆ.

ಕಳೆದ ಹಲವು ವರ್ಷದಿಂದ ಸ್ಥಿರತೆ ಕಂಡುಕೊಂಡಿದ್ದ ಸೇವಾದರವನ್ನು ಪರಿಷ್ಕರಿಸಲುಹಾಲಿ ಧರ್ಮದರ್ಶಿ ಮಂಡಳಿ ನಿರ್ಧರಿಸಿದೆ. ಆ.5ರಂದು ಕರಡು ಪಟ್ಟಿಯನ್ನು ಪ್ರಕಟಿಸಿ ದೇವಾಲಯದ ಹೊರಾಂಗಣದ ಸೂಚನಾ ಫಲಕಕ್ಕೆ ಅಳವಡಿಸಲಾಗಿದೆ. ಸೆ.5ರವರೆಗೆ ಭಕ್ತರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಬಹುತೇಕ ಎಲ್ಲ ಸೇವೆಗಳ ದರವನ್ನು ಪ್ರಸ್ತುತಕ್ಕಿಂತ ಎರಡು, ಮೂರು ಪಟ್ಟು ಹೆಚ್ಚಿಸಲಾಗಿದೆ. ರುದ್ರಾಭಿಷೇಕ ಸೇವೆಗೆ ₹10ರ ಬದಲು ₹100, ಮೃತ್ಯುಂಜಯ ಶಾಂತಿಗೆ ₹1001 ಬದಲು ₹3500, ಸತ್ಯನಾರಾಯಣ ಕಥೆಗೆ ₹325ರ ಬದಲು ₹1500ಕ್ಕೆ, ನಿರಂತರ ಪಲ್ಲಕ್ಕಿ ಸೇವೆ ದರ ₹6,001 ರಿಂದ ₹25,000ಕ್ಕೆ ಏರಿಕೆ ಮಾಡಲಾಗಿದೆ.

ಕಾರ್ತೀಕ ದೀಪೋತ್ಸವದ ಒಂದು ದಿನದ ಸೇವೆ ಮೊತ್ತವನ್ನು ₹650 ರಿಂದ ₹5,000, ಶಾಶ್ವತ ಸೇವೆಗೆ ₹6001ರ ಬದಲು ₹10,001, ನಿರಂತರ ಸೇವೆ ಪಾರಾಯಣ ₹2001ರ ಬದಲಾಗಿ ₹5,000, ಶಶ್ವತ ಸೇವೆಗೆ ₹6001ರ ಬದಲು 10,000ಕ್ಕೆ ಏರಿಕೆ ಮಾಡಿ ಕರಡು ಪಟ್ಟಿ ಪ್ರಕಟಿಸಲಾಗಿದೆ.

ಆದರೆ, ಧರ್ಮದರ್ಶಿ ಮಂಡಳಿ ಸದ್ಯ ಪ್ರಕಟಿಸಿರುವ ದರ ಪಟ್ಟಿಯ ಬಗ್ಗೆ ಭಕ್ತ ವಲಯ ಅಸಮಾಧಾನ ವ್ಯಕ್ತಪಡಿಸುತ್ತಿದೆ. ನಿಗದಿತ ಮಾನದಂಡವಿಲ್ಲದೆ ಕೆಲ ಸೇವೆಗಳಿಗೆ ಏಕಾಏಕಿ ಐದಾರು ಪಟ್ಟು ದರ ಹೆಚ್ಚಳ ಮಾಡಲು ಹೊರಟಿದ್ದು ಸರಿಯಲ್ಲ ಎಂಬುದು ಭಕ್ತರ ಅಭಿಪ್ರಾಯ.

‘ಕೋವಿಡ್ ಸಮಯದಲ್ಲಿ ಸೇವೆದರ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ವ್ಯಾವಹಾರಿಕ ಚಿಂತನೆಯೊಂದಿಗೆ ದರ ಏರಿಕೆ ಮಾಡಲು ಹೊರಟಂತಿದೆ’ ಎಂದು ಭಕ್ತರಾದ ಗಣೇಶ ನಗರದ ಅನಂತ ನಾಯ್ಕ ಆಕ್ಷೇಪಿಸಿದರು.

‘ಸೇವಾದರ ಏರಿಕೆ ಮಾಡುವ ಅಗತ್ಯ ಸದ್ಯಕ್ಕೆ ಇಲ್ಲ. ಅಭಿವೃದ್ಧಿ ಕೆಲಸಕ್ಕೆ ಸೇವಾದರ ಪರಿಷ್ಕರಣೆಯೇ ಮಾರ್ಗವಲ್ಲ ಎಂಬುದನ್ನು ಮಂಡಳಿಗೆ ತಿಳಿಸಲಾಗಿತ್ತು. ಆದರೂ, ದರ ಪರಿಷ್ಕರಣೆ ಪ್ರಕ್ರಿಯೆಗೆ ಮುಂದಾಗಿದ್ದಕ್ಕೆ ಸಹಮತವಿಲ್ಲ’ ಎಂದು ದೇವಸ್ಥಾನದ ಬಾಬುದಾರ ಜಗದೀಶ ಗೌಡ ಪ್ರತಿಕ್ರಿಯಿಸಿದರು.

‘ಈಗಿನ ಕಾಲಮಾನಕ್ಕೆ ಅನುಗುಣವಾಗಿ ಸೇವಾದರ ಪರಿಷ್ಕರಿಸಲು ನಿಯಮದ ಪ್ರಕಾರ ಮುಂದಾಗಿದ್ದೇವೆ. ಭಕ್ತರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ಅವರ ಅಭಿಪ್ರಾಯ ಪಡೆದು ಅಂತಿಮ ನಿರ್ಣಯವಾಗುತ್ತದೆ’ ಎಂದುಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ ಹೇಳಿದರು.

ಮಾಹಿತಿ ಕೊರತೆ, ತರಾತುರಿ ಸಿದ್ಧತೆ:‘ದೇವಸ್ಥಾನದಲ್ಲಿ ಸೇವಾದರ ಪರಿಷ್ಕರಣೆ ಸಂಬಂಧ ಭಕ್ತ ವಲಯಕ್ಕೆ ಮಾಹಿತಿ ನೀಡಿಲ್ಲ. ಸಾರ್ವಜನಿಕ ವಲಯಕ್ಕೆ ಪ್ರಚುರಪಡಿಸದೆ ಕೇವಲ ದೇವಸ್ಥಾನದ ಸೂಚನಾ ಫಲಕದಲ್ಲಿ ದರಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಇದೇ ಪಟ್ಟಿ ಅಂತಿಮವಾಗಲಿದೆ. ಅದು ಭಕ್ತರಿಗೆ ಆರ್ಥಿಕ ಹೊರೆ ತರಲಿದೆ’ ಎಂಬುದು ಅನಂತ ನಾಯ್ಕ ಸೇರಿದಂತೆ ಹಲವು ಭಕ್ತರ ಆರೋಪ.‌

‘ದರ ಪಟ್ಟಿ ಪರಿಷ್ಕರಣೆ ಸಂಬಂಧ ಈ ಹಿಂದೆಯೇ ಪ್ರಕಟಣೆ ಹೊರಡಿಸಿದ್ದೇವೆ. ನಿಯಮಾವಳಿ ಪ್ರಕಾರವೇ ಎಲ್ಲ ಕ್ರಮ ಅನುಸರಿಸಿದ್ದೇವೆ. ಭಕ್ತರು ತಮ್ಮ ಆಕ್ಷೇಪಣೆಯನ್ನು ದೇವಸ್ಥನದ ಕಚೇರಿಗೆ ನೇರವಾಗಿ ಸಲ್ಲಿಸಬಹುದು’ ಎನ್ನುತ್ತಾರೆ ಧರ್ಮದರ್ಶಿ ಮಂಡಳದ ಅಧ್ಯಕ್ಷ ರವೀಂದ್ರ ಜಿ.ನಾಯ್ಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT