ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಬಿದಿರು ಹಿಂಡು ತಕ್ಷಣ ತೆರವುಗೊಳಿಸಿ

ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಸದಸ್ಯರ ಸೂಚನೆ
Last Updated 6 ಆಗಸ್ಟ್ 2020, 11:51 IST
ಅಕ್ಷರ ಗಾತ್ರ

ಶಿರಸಿ: ಮಳೆ–ಗಾಳಿಗೆ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ರಸ್ತೆಯ ಮೇಲೆ ಬಿದಿರು ಹಿಂಡು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಹೆಸ್ಕಾಂ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು, ಒಣ ಬಿದಿರು ಹಿಂಡು ತೆರವುಗೊಳಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಸೂಚಿಸಿದರು.

ಗುರುವಾರ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅವರು, ‘ತಾಲ್ಲೂಕಿನ ಪೂರ್ವ ಭಾಗ ಹಾಗೂ ಪಶ್ಚಿಮ ಭಾಗದ ಬಹಳಷ್ಟು ರಸ್ತೆಗಳ ಮೇಲೆ ಒಣ ಬಿದಿರು ಹಿಂಡು ಬಿದ್ದಿದೆ. ಅರಣ್ಯ ಇಲಾಖೆಗೆ ಮಳೆಗಾಲದ ಪೂರ್ವದಲ್ಲೇ ಇದರ ಬಗ್ಗೆ ತಿಳಿಸಲಾಗಿತ್ತು. ಒಣ ಬಿದಿರನ್ನು ಜನರ ಬಳಕೆಗಾದರೂ ಕೊಡಬಹುದಿತ್ತು. ಈಗ ಅವು ನಿಷ್ಪ್ರಯೋಜಕವಾಗಿ ರಸ್ತೆ ಮೇಲೆ ಬೀಳುತ್ತಿವೆ’ ಎಂದರು.

ಹೆಸ್ಕಾಂ ಮತ್ತು ಅರಣ್ಯ ಇಲಾಖೆ ದಿನ ನಿಗದಿ ಮಾಡಿಕೊಂಡು, ಅವುಗಳನ್ನು ಶೀಘ್ರ ತೆರವುಗೊಳಿಸಬೇಕು ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಸದಸ್ಯೆ ರತ್ನಾ ಶೆಟ್ಟಿ ಸೂಚಿಸಿದರು.

ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮನೆಗಳ ವಿದ್ಯುತ್ ಬಿಲ್‌ ಮೊತ್ತ ವಿಪರೀತ ಹೆಚ್ಚು ಬರುತ್ತಿದೆ. ಈ ವ್ಯತ್ಯಾಸ ಸರಿಪಡಿಸಬೇಕು ಎಂದು ಚಂದ್ರು ದೇವಾಡಿಗ ಹೇಳಿದರು.

ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಚಿಕಿತ್ಸೆಗೆ ತೆಗೆದುಕೊಂಡು ಹೋದರೆ, ವೈದ್ಯರ ಬದಲಾಗಿ ಅಟೆಂಟರ್ ಚುಚ್ಚುಮದ್ದು ನೀಡುತ್ತಾರೆ ಎಂದು ಕೆಲವು ಸದಸ್ಯರು ಆಕ್ಷೇಪಿಸಿದರು. ‘ಪಶುಸಂಗೋಪನಾ ಇಲಾಖೆಯ ಯೋಜನೆಗಳು ಎಲ್ಲ ಹೈನುಗಾರರನ್ನು ತಲುಪುತ್ತಿಲ್ಲ. ಕೆಲವೇ ಜನರಿಗೆ ಇದನ್ನು ನೀಡಲಾಗುತ್ತಿದೆ. ಹಳೆಯ ಯೋಜನೆಗಳು ಹಣ ಮಂಜೂರುಗೊಳಿಸಲೂ ಸತಾಯಿಸಲಾಗುತ್ತಿದೆ’ ಎಂದು ಸದಸ್ಯ ನಾಗರಾಜ ಶೆಟ್ಟಿ ಆರೋಪಿಸಿದರು.

ಆಯುಷ್ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಮಾತನಾಡಿ, ‘ಈಗಾಗಲೇ ವಿವಿಧ ಇಲಾಖೆಗಳು, ಕೊರೊನಾ ವಾರಿಯರ್ಸ್‌ಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 2300ರಷ್ಟು ಕಿಟ್ ವಿತರಿಸಲಾಗಿದೆ. ಹೆಚ್ಚುವರಿ ಕಿಟ್ ಬಂದಲ್ಲಿ ಇನ್ನಷ್ಟು ಜನರಿಗೆ ನೀಡಲಾಗುವುದು. ಕೊರೊನಾ ನಿಯಂತ್ರಕಗಳೆಂದು ಮಾರುಕಟ್ಟೆಯಲ್ಲಿ ಬರುವ ಲೇಬಲ್‌ ಇಲ್ಲದ ಕಷಾಯಗಳಿಗೆ ಮಾರುಹೋಗಬಾರದು. ಅಧಿಕೃತ ಔಷಧಗಳನ್ನು ಮಾತ್ರ ಸೇವಿಸಬೇಕು’ ಎಂದರು.

ತಾಲ್ಲೂಕಿನಲ್ಲಿ ಈವರೆಗೆ 1652 ಮಿ.ಮೀ ಮಳೆಯಾಗಿದೆ. ಯೂರಿಯಾ ಅಥವಾ ಯಾವುದೇ ರಸಗೊಬ್ಬರದ ಕೊರತೆಯಿಲ್ಲ ಎಂದು ಕೃಷಿ ಅಧಿಕಾರಿ ಮಧುಕರ ನಾಯ್ಕ ತಿಳಿಸಿದರು. ಮೆಕ್ಕೆಜೋಳದ ಗಿಡಗಳು ದೊಡ್ಡ ಪ್ರಮಾಣದಲ್ಲಿ ಮುರಿದು ಬಿದ್ದಿದ್ದು, ಹಾನಿ ಸಮೀಕ್ಷೆ ನಡೆಸಬೇಕು ಸದಸ್ಯೆ ಪ್ರೇಮಾ ಬೇಡರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT