ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡದಲ್ಲಿ 10 ದಿನದಲ್ಲಿ 698 ಜನರಿಗೆ ಸೋಂಕು

ಕೋವಿಡ್ ಎರಡನೇ ಅಲೆಯ ಆತಂಕ: ಏ.6ರ ನಂತರ ನಾಲ್ವರ ಸಾವು
Last Updated 15 ಏಪ್ರಿಲ್ 2021, 14:28 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಾಣುತ್ತಿದೆ. 10 ದಿನಗಳಿಂದ ಈಚೆಗೆ ಒಟ್ಟು 698 ಮಂದಿಗೆ ಸೋಂಕು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದಿನವರೆಗೂ ದಿನವೊಂದಕ್ಕೆ ಗರಿಷ್ಠ 10 ಮಂದಿಗೆ ಕೋವಿಡ್ ಖಚಿತವಾಗುತ್ತಿತ್ತು. ಕೆಲವು ದಿನ ಯಾರಿಗೂ ದೃಢಪಡದ ಉದಾಹರಣೆಗಳೂ ಇವೆ. ಸಕ್ರಿಯ ಪ್ರಕರಣಗಳು ಬೆರಳೆಣಿಕೆಯಷ್ಟಕ್ಕೆ ತಲುಪಿದ್ದವು. ಇದರಿಂದ ಜನ ನಿಟ್ಟುಸಿರುವ ಬಿಡುವ ವೇಳೆಗೇ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣಲಾರಂಭಿಸಿದೆ.

ಸೋಂಕು ನಿಯಂತ್ರಣಕ್ಕೆ ಸರ್ಕಾರವು ರೂಪಿಸಿದ ನಿಯಮಾವಳಿಗಳನ್ನು ‍ಪಾಲಿಸುವಂತೆ ವಿವಿಧ ರೀತಿಯಲ್ಲಿ ತಿಳಿವಳಿಕೆ ನೀಡಲಾಗುತ್ತಿದೆ. ಆದರೂ ಜನ ಅದನ್ನು ಅನುಸರಿಸುವಲ್ಲಿ ನಿಷ್ಕಾಳಜಿ ತೋರುತ್ತಿರುವುದು ಕಾಣುತ್ತಿದೆ. ಕಾರವಾರದಲ್ಲಿ ಭಾನುವಾರದ ಸಂತೆಯಲ್ಲಿ, ನಗರದ ಮೀನು ಮಾರುಕಟ್ಟೆಯಲ್ಲಿ, ಸೂಪರ್ ಮಾರ್ಕೆಟ್‌ಗಳಲ್ಲಿ ಜನ ಮೈಮರೆಯುತ್ತಿರುವುದು ಆತಂಕ ಮೂಡಿಸಿದೆ.

‘ನಮ್ಮ ಮನೆಗೆ ವಾರಕ್ಕೆ ಬೇಕಾದಷ್ಟು ತರಕಾರಿಗಳನ್ನು ಪ್ರತಿ ಭಾನುವಾರ ಸಂತೆಯಿಂದಲೇ ತರುತ್ತಿದ್ದೆ. ಆದರೆ, ಅಲ್ಲಿ ಜನ ಸೇರುವ ರೀತಿ ಮತ್ತು ನಿಷ್ಕಾಳಜಿ ನೋಡಿ ಆತಂಕಗೊಂಡೆ. ಹಾಗಾಗಿ ಸಂತೆಯತ್ತ ಹೋಗುವುದನ್ನೇ ಬಿಟ್ಟಿದ್ದೇನೆ. ರಸ್ತೆ ಬದಿಯಲ್ಲಿ, ಜನ ಕಡಿಮೆ ಇರುವ ವರ್ತಕರ ಬಳಿಯಿಂದ ಖರೀದಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಹಬ್ಬುವಾಡದ ರಾಜೇಶ ನಾಯ್ಕ.

‘ಬಹುತೇಕ ವರ್ತಕರಾಗಲೀ ಗ್ರಾಹಕರಾಗಲೀ ಮುಖಗವಸು ಧರಿಸುವುದಿಲ್ಲ. ಒಂದುವೇಳೆ ಧರಿಸಿದ್ದರೂ ಅದು ಅವರ ಮೂಗು ಮತ್ತು ಬಾಯಿಯನ್ನು ಮುಚ್ಚುವ ಬದಲು ಗಲ್ಲಕ್ಕೆ ಜಾರಿರುತ್ತದೆ. ಸಂತೆಯಾದ್ದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ ಎಂಬ ಅಂಶವನ್ನು ಒಪ್ಪೋಣ. ಆದರೆ, ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮುಖಗವಸನ್ನು ಸರಿಯಾದ ರೀತಿಯಲ್ಲೇ ಧರಿಸಲು ಕಷ್ಟವೇನು? ನನ್ನ ಹಾಗೆ ಅದೆಷ್ಟೋ ಮಂದಿ ಸಂತೆಯ ಸಹವಾಸವೇ ಬೇಡ ಎಂದು ಕುಳಿತಿರಬಹುದು. ಇದರಿಂದ ನಷ್ಟವಾಗುವುದು ವರ್ತಕರಿಗೇ ಅಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.

ನಗರಸಭೆಯ ಅಧಿಕಾರಿಗಳು ಮುಖಗವಸು ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ಅದರ ಜೊತೆಗೇ ಲಸಿಕೆ ಪಡೆದುಕೊಳ್ಳುವ ಬಗ್ಗೆ ಮನೆ ಮನೆಗಳಿಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಸಂದೇಶ ಸಾರಲಾಗುತ್ತಿದೆ. ಅಲ್ಲದೇ ಕಂಡಕಂಡಲ್ಲಿ ಉಗುಳದಂತೆ, ಕೆಮ್ಮುವಾಗ, ಸೀನುವಾಗ ಮುಖಕ್ಕೆ ಅಡ್ಡಲಾಗಿ ಬಟ್ಟೆ ಹಿಡಿದುಕೊಳ್ಳಬೇಕು ಎಂಬ ಅರಿವಿದ್ದರೂ ಜನ ಮರೆಯುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಕೈಮೀರಿ ಹೋಗಬಹುದು ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಗಡಿಯಿಂದಲೇ ವಾಪಸ್

72 ಗಂಟೆಗಳಲ್ಲಿ ಪಡೆದಿರುವ ಆರ್‌ಟಿ– ಪಿಸಿಆರ್ ನೆಗೆಟಿವ್ ವರದಿ ಇಲ್ಲದ ಮಹಾರಾಷ್ಟ್ರದ ಪ್ರಯಾಣಿಕರನ್ನು ರಾಜ್ಯದ ಗಡಿ ಮಾಜಾಳಿಯಿಂದಲೇ ವಾಪಸ್ ಕಳುಹಿಸಲಾಗುತ್ತಿದೆ.

ಗೋವಾದ ಗಡಿಯಲ್ಲಿ ಸಾಗಿ ಬರಲು ಅಲ್ಲಿನ ಆಡಳಿತ ಅವಕಾಶ ನೀಡುತ್ತಿದೆ. ಆದರೆ, ಕರ್ನಾಟಕದ ಚೆಕ್‌ಪೋಸ್ಟ್‌ನಲ್ಲಿ ವರದಿ ಪರಿಶೀಲಿಸಿದ ಬಳಿಕವೇ ಪ್ರವೇಶಾವಕಾಶ ನೀಡಲಾಗುತ್ತಿದೆ. ಸರ್ಕಾರದ ಸೂಚನೆಯನ್ನು ಅಧಿಕಾರಿಗಳು ಮತ್ತು ಪೊಲೀಸರು ಕೆಲವು ದಿನಗಳಿಂದ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ. ನೆಗೆಟಿವ್ ವರದಿ ಹೊಂದಿಲ್ಲದ ಹಲವು ಪ್ರಯಾಣಿಕರನ್ನು ಗುರುವಾರವೂ ಪುನಃ ಕಳುಹಿಸಲಾಯಿತು. ಇದರಿಂದ ಕೆಲವರು ಚೆಕ್‌ಪೋಸ್ಟ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ನಿದರ್ಶನಗಳೂ ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT