ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಸ್ಪರ್ಧೆಗೆ ‘ನೆಟ್’ ಸಮಸ್ಯೆ

ಯುವ ಸ್ಪರ್ಧಿಗಳ ಆಸಕ್ತಿಗೆ ತೊಡಕಾದ ಇಂಟರ್‌ನೆಟ್ ವೇಗ: ಅವಕಾಶ ವಂಚಿತರಾದ ಹಲವರು
Last Updated 30 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ದೇಶದಲ್ಲಿ ಲಾಕ್‌ಡೌನ್ ಜಾರಿಯಾದ ಬಳಿಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಆದರೆ, ನಿಧಾನಗತಿಯ ಇಂಟರ್‌ನೆಟ್ ಸ್ಪರ್ಧಾಕಾಂಕ್ಷಿಗಳ ಆಸಕ್ತಿಗೆ ತಣ್ಣೀರು ಎರಚುತ್ತಿದೆ.

ನೃತ್ಯ, ಗಾಯನ, ಯೋಗ, ಭಜನೆ, ಮಾಡೆಲಿಂಗ್ ಮುಂತಾದ ವಿವಿಧ ವಿಭಾಗಗಳಲ್ಲಿ ಆನ್‌ಲೈನ್ ಸ್ಪರ್ಧೆಗಳು ಜಿಲ್ಲೆಯಲ್ಲಿ ಈಗ ಜನಪ್ರಿಯವಾಗಿವೆ. ಸ್ಪರ್ಧಿಗಳು ಭಾಗವಹಿಸಿದ್ದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದಾಗ ಅವುಗಳಿಗೆ ಸಿಗುವ ‘ಲೈಕ್ಸ್’ ಅನ್ನು ಗೆಲುವಿಗೆ ಮುಖ್ಯವಾದ ಮಾನದಂಡವನ್ನಾಗಿ ಪರಿಗಣಿಸಲಾಗುತ್ತಿದೆ. ಹಾಗಾಗಿ ಅವುಗಳ ವಿಡಿಯೊಗಳು ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್‌ಆ್ಯಪ್‌, ಟೆಲಿಗ್ರಾಂಗಳಲ್ಲಿ ಅವುಗಳ ಲಿಂಕ್‌ಗಳು ಹೆಚ್ಚು ಹರಿದಾಡುತ್ತಿವೆ.

‘ಸ್ಪರ್ಧೆಗಳು ಇದ್ದರೇ ನಾವು ಸಕ್ರಿಯವಾಗಿ ಇರಲು ಸಾಧ್ಯ. ಮೊದಲಾದರೆ ದೊಡ್ಡ ವೇದಿಕೆಗಳು, ನೂರಾರು ಪ್ರೇಕ್ಷಕರು, ಕಿವಿಗಡಚಿಕ್ಕುವ ಸದ್ದಿನ ನಡುವೆ ಸ್ಪರ್ಧೆಗಳು ಅದ್ಧೂರಿಯಾಗಿ ಆಯೋಜನೆಯಾಗುತ್ತಿದ್ದವು. ಈಗ ಬದಲಾದ ಸನ್ನಿವೇಶದಲ್ಲಿ ಎಲ್ಲವೂ ಅತ್ಯಂತ ಸರಳ ಹಾಗೂ ನೀರಸವಾಗಿರುತ್ತವೆ. ಆನ್‌ಲೈನ್ ಸ್ಪರ್ಧೆಗಳಿಂದ ತಕ್ಕಮಟ್ಟಿಗೆ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಇಂಟರ್‌ನೆಟ್ ವೇಗ ಇಲ್ಲದಿರುವುದು ದೊಡ್ಡ ತಲೆನೋವಾಗಿದೆ’ ಎನ್ನುತ್ತಾರೆ ಫೇಸ್‌ಬುಕ್ ಲೈವ್ ನೃತ್ಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದ ಕಾರವಾರದ ಪ್ರೇಕ್ಷಾ ರೇವಣಕರ್.

‘ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಿಗೆ ವಿಡಿಯೊ ಅಪ್‌ಲೋಡ್ ಮಾಡಲು ಕನಿಷ್ಠವೆಂದರೂ ಎರಡು ಎಂ.ಬಿ.ಪಿ.ಎಸ್‌.ನಷ್ಟು ಇಂಟರ್‌ನೆಟ್ ವೇಗ ಬೇಕಾಗುತ್ತದೆ. ಆದರೆ, ಕಾರವಾರ ನಗರದಲ್ಲೇ ಬಹುತೇಕ ಕಡೆಗಳಲ್ಲಿ ಇಂದಿಗೂ ಕಿಲೋಬೈಟ್ (ಕೆ.ಬಿ) ಲೆಕ್ಕದಲ್ಲಿ ಇಂಟರ್‌ನೆಟ್ ವೇಗವಿದೆ. ಇದರಿಂದ ಸಮಯಕ್ಕೆ ಸರಿಯಾಗಿ ವಿಡಿಯೊಗಳನ್ನು ಜಾಲತಾಣಗಳಿಗೆ ಅಪ್‌ಲೋಡ್ ಮಾಡಲಾಗದೇ ನಿರಾಸೆಯಾಗಿದ್ದೂ ಇದೆ’ ಎನ್ನುತ್ತಾರೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರ್ಗವಿ ನಾಯ್ಕ.

ಆಸಕ್ತಿಯಿದೆ: ‘ಆನ್‌ಲೈನ್ ಸ್ಪರ್ಧೆಗಳು ಈಗ ಭಾರಿ ಜನಪ್ರಿಯತೆ ಹೊಂದಿವೆ. ನಮ್ಮ ನಿರೀಕ್ಷೆಗೂ ಮೀರಿ ಸ್ಪರ್ಧಿಗಳು ನೊಂದಣಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ, ಹಲವರಿಗೆ ಇಂಟರ್‌ನೆಟ್ ವೇಗವಿಲ್ಲದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ’ ಎನ್ನುತ್ತಾರೆ ಕಾರವಾರದ ಶ್ರೀ ಸತ್ಯಸಾಯಿ ಸೇವಾ ಸಂಘಟನೆಯ ವೇದ ಸಂಯೋಜಕ ನವೀನ ಅಂಕೋಲೆಕರ್.

‘ನಮ್ಮ ಸಂಘಟನೆಯಿಂದ ಜುಲೈ 15ರಿಂದ ಭಜನೆ ಸ್ಪರ್ಧೆ ಆಯೋಜಿಸಿದ್ದೇವೆ. 218 ವಿಡಿಯೊಗಳು ಬಂದಿದ್ದು, 203 ಸ್ಪರ್ಧೆಗೆ ಆಯ್ಕೆಯಾಗಿವೆ. ಅವುಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ನೆಟ್‌ವರ್ಕ್ ಸಮಸ್ಯೆ ತಲೆನೋವಾಯಿತು. ಕೊನೆಗೆ ಇಂಟರ್‌ನೆಟ್ ವೇಗವಾಗಿ ಸಿಗುವ ಸ್ಥಳಕ್ಕೇ ಹೋಗಿ ರಾತ್ರಿಯಿಡೀ ಕುಳಿತು ಅವುಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದೇವೆ. ಪ್ರತಿ ವಿಡಿಯೊಗೂ ಕನಿಷ್ಠವೆಂದರೂ 700 ವ್ಯೂಸ್ ಬಂದಿವೆ’ ಎಂದು ಸಂತಸ ಹಂಚಿಕೊಂಡರು.

***

ಆನ್‌ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಗ್ರಾಮೀಣ ಭಾಗದ ಪ್ರತಿಭೆಗಳೂ ತುಂಬ ಆಸಕ್ತಿ ತೋರುತ್ತಾರೆ. ಆದರೆ, ಇಂಟರ್‌ನೆಟ್ ಸಮಸ್ಯೆಯಿಂದಾಗಿ ಅವರು ಅವಕಾಶ ವಂಚಿತರಾಗುತ್ತಾರೆ.

– ನವೀನ ಅಂಕೋಲೆಕರ್, ಶ್ರೀ ಸತ್ಯಸಾಯಿ ಸೇವಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT