ಮಂಗಳವಾರ, ನವೆಂಬರ್ 19, 2019
28 °C

ಶಿರಸಿ ಮಾರಿಕಾಂಬಾ ದೇವಾಲಯದ ದಸರಾ ಕ್ರೀಡಾಕೂಟ | ಕೆಸರುಗದ್ದೆಯಲ್ಲಿ ಕ್ರೀಡೆಯ ಮೋಜು

Published:
Updated:
Prajavani

ಶಿರಸಿ: ಚಿಕ್ಕದಾದ ಕೆಸರು ಗದ್ದೆ, ಸುತ್ತಲೂ ನೂರಾರು ಪ್ರೇಕ್ಷಕರು. ನಿರ್ಣಾಯಕರು ಸಿಳ್ಳೆ ಹಾಕಿದ್ದೇ ತಡ, ಸರದಿಯಲ್ಲಿ ನಿಂತವರು ಓಡಲಾರಂಭಿಸಿದರು. ಕೆಲವರು ತಡವಿ ಬಿದ್ದರು, ಹಲವರು ಕೆಸರಿನಲ್ಲಿ ಹೂತ ಕಾಲನ್ನು ಎತ್ತಲು ತಿಣಕಾಡಿದರು, ಇನ್ನು ಕೆಲವರು ಜಿಗಿಯುತ್ತ ಜಿಗಿಯುತ್ತ ದಡ ಸೇರಿ ಬಹುಮಾನ ಗಿಟ್ಟಿಸಿಕೊಂಡರು.

ಇಲ್ಲಿನ ಮಾರಿಕಾಂಬಾ ದೇವಾಲಯವು ದಸರಾ ಕ್ರೀಡಾಕೂಟದ ಅಂಗವಾಗಿ ಭಾನುವಾರ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಿತ್ತು. ಓಟ, ನೀರಿನ ಕೊಡ ಹೊತ್ತು ಓಡುವ ಸ್ಪರ್ಧೆ, ವಾಲಿಬಾಲ್, ಹಗ್ಗ ಜಗ್ಗಾಟ ಸ್ಪರ್ಧೆಗಳಲ್ಲಿ 700ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮಕ್ಕಳು, ಮಹಿಳೆಯರು, ಪುರುಷರು ಅತ್ಯುತ್ಸಾಹದಿಂದ ‍ಪಾಲ್ಗೊಂಡರು. ಕಿಕ್ಕಿರಿದು ಸೇರಿದ್ದ ಜನರು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶಾಂತವೀರ ಶಿವಪ್ಪ ಕ್ರೀಡಾಕೂಟ ಉದ್ಘಾಟಿಸಿದರು. ‘ರೈತರ ಮನರಂಜನೆಗಾಗಿ ಮೊದಲು ಕೆಸರು ಗದ್ದೆ ಕ್ರೀಡಾಕೂಟ ನಡೆಯುತ್ತಿತ್ತು. ಇಂತಹ ದೇಸಿ ಕ್ರೀಡೆಗೆ ಎಲ್ಲೆಡೆ ಪ್ರೋತ್ಸಾಹ ಸಿಗುತ್ತಿರುವುದು ಖುಷಿಯ ಸಂಗತಿ. ಅದರಲ್ಲೂ ಮಾರಿಕಾಂಬಾ ದೇವಾಲಯ ಈ ಕ್ರೀಡೆ ಆಯೋಜಿಸಿದ್ದು ಸ್ತುತ್ಯಾರ್ಹ’ ಎಂದರು.

ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ‘ಮಾರಿಕಾಂಬೆಯ ಭಕ್ತರು, ಬಾಬುದಾರರಲ್ಲಿ ರೈತರು ಬಹುಸಂಖ್ಯೆಯಲ್ಲಿದ್ದಾರೆ. ಮನುಷ್ಯ ಮತ್ತು ಮಣ್ಣಿನ ಸಂಬಂಧ ಗಟ್ಟಿಗೊಳಿಸಲು ಕಳೆದ ವರ್ಷದಿಂದ ಕೆಸರು ಗದ್ದೆ ಕ್ರೀಡಾಕೂಟ ನಡೆಸಲಾಗುತ್ತಿದೆ. ಪ್ರಥಮ ವರ್ಷ 250 ಸ್ಪರ್ಧಿಗಳು ಭಾಗವಹಿಸಿದ್ದರೆ, ಈ ಬಾರಿ ಮೂರುಪಟ್ಟು ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಜನರಿಗೆ ಕ್ರೀಡೆಯಲ್ಲಿರುವ ಒಲವನ್ನು ತೋರಿಸಿದೆ’ ಎಂದರು.

ಸಿವಿಲ್ ನ್ಯಾಯಾಧೀಶೆ ಸುನೀತಾ, ದೇವಾಲಯದ ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಶಶಿಕಲಾ ಚಂದ್ರಾಪಟ್ಟಣ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕರು, ದೇವಾಲಯದ ಸಿಬ್ಬಂದಿ ಸಹಕರಿಸಿದರು. ಕ್ರೀಡಾಧಿಕಾರಿ ಕಿರಣ ನಾಯ್ಕ ನಿರೂಪಿಸಿದರು.

 

ಪ್ರತಿಕ್ರಿಯಿಸಿ (+)