ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಕೇಶ್‌ ಬದ್ಧತೆ ಶ್ಲಾಘನೀಯ’

ಪಿ.ಲಂಕೇಶ್‌ ಅವರ 83ನೇ ಜನ್ಮದಿನ ಮತ್ತು ‘ಲಂಕೇಶ್‌’ ಪತ್ರಿಕೆಯ 40ನೇ ವರ್ಷದ ಪದಾರ್ಪಣೆ ಸಮಾರಂಭ
Last Updated 11 ಮಾರ್ಚ್ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ಸರ್ಕಾರದ ಬೆಂಬಲ ಇಲ್ಲದೆ, ಯಾರ ಮರ್ಜಿಗೂ ಒಳಗಾಗದೆ ನಿರ್ಭೀತಿಯಿಂದ ಪತ್ರಿಕೋದ್ಯಮ ನಡೆಸಿದ ಕೀರ್ತಿ ಪಿ.ಲಂಕೇಶ್‌ ಅವರಿಗೆ ಸಲ್ಲಬೇಕು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಶ್ಲಾಘಿಸಿದರು.

ನಗರದಲ್ಲಿ ಭಾನುವಾರ ನಡೆದ ಪಿ.ಲಂಕೇಶ್‌ ಅವರ 83ನೇ ಜನ್ಮದಿನ ಮತ್ತು ‘ಲಂಕೇಶ್‌’ ಪತ್ರಿಕೆಯ 40ನೇ ವರ್ಷದ ಪದಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಲಂಕೇಶ್‌ ಅವರಿಗೆ ಸಮಾಜದ ಮೇಲೆ ಇದ್ದ ಕಾಳಜಿ ಮತ್ತು ಬದ್ಧತೆ ಶ್ಲಾಘನೀಯವಾದ್ದದು. ಯಾರದೇ ಹೊಗಳಿಕೆ ಮತ್ತು ತೆಗಳಿಕೆಗೂ ಎದೆಗುಂದಲಿಲ್ಲ. ನಾಡಿನಲ್ಲಿ ಅನೇಕ ವಾರಪತ್ರಿಕೆಗಳು ಹುಟ್ಟಿದ್ದರೂ 40 ವರ್ಷ ಪೂರೈಸಿದ ಪತ್ರಿಕೆಗಳು ವಿರಳ. ಲಂಕೇಶ್‌ ಅವರು ಗುಣಮಟ್ಟ ಮತ್ತು ನಿರ್ಭೀತಿಯಿಂದ ಮುನ್ನಡೆಸಿದ ರೀತಿಯಲ್ಲೇ ಪತ್ರಿಕೆ 50 ವರ್ಷಗಳನ್ನು ಪೂರೈಸಲಿ’ ಎಂದರು.

ಇಂದ್ರಜಿತ್‌ ಲಂಕೇಶ್‌ ಮಾತನಾಡಿ, ‘ಲಂಕೇಶ್‌ ಯಾವುದೇ ಪಕ್ಷದ ವಿರೋಧಿಯಾಗಿರಲಿಲ್ಲ. ಪ್ರಜಾಪ್ರಭುತ್ವ ವಿರುದ್ಧದ ಧೋರಣೆ ಮತ್ತು ನೀತಿಗಳನ್ನಷ್ಟೇ ಮುಲಾಜಿಲ್ಲದೆ ವಿರೋಧಿಸುತ್ತಿದ್ದರು. ಬರವಣಿಗೆಯಲ್ಲಿ ಸೂಕ್ಷ್ಮತೆ ಕಾಪಾಡಿಕೊಳ್ಳುವಂತೆ ಪಾಠ ಹೇಳುತ್ತಿದ್ದರು’ ಎಂದು ಸ್ಮರಿಸಿದರು.

‘ಇಂದಿನ ಸಮಾಜದಲ್ಲಿ ಕೊಲೆ, ದರೋಡೆ ಹಾಗೂ ಭ್ರಷ್ಟಾಚಾರ ಹೆಚ್ಚುತ್ತಿದೆ. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್‌ ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ ಅಥವಾ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಬಹುದು’ ಎಂದರು.

ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಇಬ್ಬರು ಮಹಿಳೆಯರಿಗೆ ಇಂದ್ರಜಿತ್‌ ಲಂಕೇಶ್‌ ಗೌರವಧನ ನೀಡಿದರು. ಹಾವೇರಿಯ ಹನುಮಂತಪ್ಪ ದೇವಪ್ಪ ತಳವಾರ ಅವರ ಪುತ್ರಿ ರತ್ನಮ್ಮ ಮತ್ತು ಮಂಡ್ಯ ಜಿಲ್ಲೆ ಕೆಳಗೋಡು ಹೋಬಳಿಯ ಸುನೀಲ್‌ ಬಾಬು ಅವರ ಪತ್ನಿ ಭವ್ಯಾ ಗೌರವಧನ ಸ್ವೀಕರಿಸಿದರು.

ಅದಮ್ಯ ಚೇತನಾ ಟ್ರಸ್ಟ್‌ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT