ಸೋಮವಾರ, ಜೂಲೈ 6, 2020
27 °C
ಐದು ವರ್ಷಗಳಲ್ಲಿ ₹ 2.25 ಕೋಟಿ ಮೌಲ್ಯದ ಉರುವಲು ಕಟ್ಟಿಗೆ ಉಳಿತಾಯ

ಶಿರಸಿ | ಶೀಗೇಹಳ್ಳಿಯಲ್ಲಿ ಸೌರ ಕ್ರಾಂತಿ: ಕಾಡಿನ ಮೇಲಿನ ಭಾರ ಹಗುರ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

‌ಶಿರಸಿ: ಸ್ನಾನಕ್ಕೆ ನೀರು ಕಾಯಿಸಲು ಸೋಲಾರ್ ಘಟಕಗಳನ್ನು ಅಳವಡಿಸಿಕೊಂಡಿರುವ ಈ ಗ್ರಾಮವು ಕಾಡಿನ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿ, ವಾರ್ಷಿಕವಾಗಿ ₹ 45 ಲಕ್ಷ ಮೌಲ್ಯದ ಉರುವಲು ಕಟ್ಟಿಗೆಯನ್ನು ಉಳಿತಾಯ ಮಾಡುತ್ತಿದೆ. ಆ ಮೂಲಕ ಪರಿಸರಸ್ನೇಹಿ ಗ್ರಾಮವಾಗಿ ರೂಪುಗೊಂಡಿದೆ.  

ಅರಣ್ಯದಿಂದ ಆವೃತ್ತವಾಗಿರುವ ಶಿರಸಿ ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ 132 ಮನೆಗಳಿವೆ. ಇಲ್ಲಿನ ಎಲ್ಲ ಮನೆಗಳು ಸ್ನಾನಕ್ಕೆ ನೀರು ಕಾಯಿಸಲು ಸಾಂಪ್ರದಾಯಿಕ ಕಟ್ಟಿಗೆ ಒಲೆಯನ್ನೇ ಅವಲಂಬಿಸಿದ್ದವು. ವಾರ್ಷಿಕವಾಗಿ ಅಂದಾಜು 1200 ಕ್ಯೂಬಿಕ್ ಮೀಟರ್ ಕಟ್ಟಿಗೆ ಇಲ್ಲಿ ಬಳಕೆಯಾಗುತ್ತಿತ್ತು. ಕ್ರಿಯಾಶೀಲವಾಗಿರುವ ಇಲ್ಲಿನ ಗ್ರಾಮ ಅರಣ್ಯ ಸಮಿತಿ(ವಿಎಫ್‌ಸಿ)ಯು, ಅರಣ್ಯ ಇಲಾಖೆಯ ‘ಪಾಲಿಸಿದರೆ ಪಾಲು’ ಯೋಜನೆಯ ಮೂಲಕ ಈ ಗ್ರಾಮದ ಚಿತ್ರಣವನ್ನೇ ಬದಲಿಸಿದೆ.

‘ಅರಣ್ಯ ಇಲಾಖೆ ₹ 10,500, ಫಲಾನುಭವಿ ಭರಿಸಿದ ವೆಚ್ಚ ₹ 5000 ಹಾಗೂ ವಿಎಫ್‌ಸಿಯ ಗ್ರಾಮ ಅಭಿವೃದ್ಧಿ ನಿಧಿಯಲ್ಲಿ ₹ 2300 ನೆರವು ಸೇರಿ, ಒಟ್ಟು ₹ 17,800 ಮೊತ್ತದಲ್ಲಿ ಈ ಗ್ರಾಮದ ಪ್ರತಿ ಮನೆಯಲ್ಲಿ ಸೋಲಾರ್ ಬಾಯ್ಲರ್ ಅಳವಡಿಸಲಾಯಿತು. 2015–16ನೇ ಸಾಲಿನಲ್ಲಿ ಅನುಷ್ಠಾನಗೊಂಡ ಯೋಜನೆ, ಯಶಸ್ವಿಯಾಗಿ ಮುನ್ನಡೆದಿದೆ. ಐದು ವರ್ಷಗಳಲ್ಲಿ ಸುಮಾರು ₹ 2.25 ಕೋಟಿ ಮೌಲ್ಯದ ಉರುವಲು ಕಟ್ಟಿಗೆ ಉಳಿತಾಯವಾಗಿ, ಅರಣ್ಯದ ಮೇಲಿನ ಭಾರ ಕಡಿಮೆಯಾಗಿದೆ’ ಎನ್ನುತ್ತಾರೆ ಶಿರಸಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ.

‘ಮಲೆನಾಡಿನ ಮಳೆಗಾಲದ ನಾಲ್ಕು ತಿಂಗಳು ಹೊರತುಪಡಿಸಿ, ಉಳಿದ ಎಂಟು ತಿಂಗಳು ಎಲ್ಲ ಮನೆಗಳು ಸೋಲಾರ್ ನೀರನ್ನೇ ಸ್ನಾನಕ್ಕೆ ಬಳಸುತ್ತವೆ. ಪ್ರತಿ ಮನೆಗೆ ವರ್ಷಕ್ಕೆ ಅಂದಾಜು 10 ಮೀಟರ್ ಕಟ್ಟಿಗೆ ಬೇಕಾಗುತ್ತಿತ್ತು. ಜಮೀನು ಇದ್ದವರು ಬೆಟ್ಟ–ಬೇಣದಲ್ಲಿ, ಜಮೀನುರಹಿತರು ಅರಣ್ಯದಲ್ಲಿ ಉರುವಲು ಸಂಗ್ರಹಿಸುತ್ತಿದ್ದರು. ಇದಕ್ಕೆ 20 ಕೂಲಿಯಾಳು ಕೆಲಸವಾಗುತ್ತಿತ್ತು. ಆ ಸಮಯವನ್ನು ಈಗ ತೋಟದ ಕೆಲಸಕ್ಕೆ ಬಳಸಿಕೊಳ್ಳಬಹುದು. ಉರುವಲಿಗಾಗಿ ಅರಣ್ಯದ ಅವಲಂಬನೆ ಕಡಿಮೆ ಮಾಡಿರುವ ನಾವು, ಕಾಡಿನ ಕಾವಲು ಕಾಯುವಲ್ಲೂ ಮುಂದಿದ್ದೇವೆ’ ಎನ್ನುತ್ತಾರೆ ವಿಎಫ್‌ಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ.

ಸೋಲಾರ್ ಅಳವಡಿಸಿಕೊಂಡಿರುವ ಕಾರಣ ಪ್ರತಿ ಮನೆಯ ವಿದ್ಯುತ್ ಬಿಲ್‌ನಲ್ಲಿ ₹ 50 ವಿನಾಯಿತಿ ಸಿಗುತ್ತಿದೆ. ತಿಂಗಳಿಗೆ ಗ್ರಾಮಸ್ಥರ ಹಣ ಒಟ್ಟು ₹ 6500 ಉಳಿತಾಯವಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು