7

ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾದ ಪೊಲೀಸ್ ಠಾಣೆ

Published:
Updated:
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ತಾಯಿ ಸುಶೀಲಾ, ತಮ್ಮ ಮಗ ಸುಬ್ರಹ್ಮಣ್ಯನನ್ನು ಆಲಂಗಿಸುತ್ತಿರುವುದು

ಯಲ್ಲಾಪುರ: ನಾಲ್ಕು ವರ್ಷಗಳ ಹಿಂದೆ ಕಾಣೆಯಾದ ಮಗ ಸಿಕ್ಕಿದ ಆನಂದದಿಂದ ತಾಯಿಯ ಕಣ್ಣಲ್ಲಿ ಆನಂದ ಬಾಷ್ಪ ಸುರಿಯುತ್ತಿದ್ದ ಹೃದಯಸ್ಪರ್ಶಿ ಸನ್ನಿವೇಶಕ್ಕೆ ಇಲ್ಲಿನ ಪೊಲೀಸ್ ಠಾಣೆ ಸೋಮವಾರ ಸಾಕ್ಷಿಯಾಯಿತು.

ನಾಲ್ಕು ವರ್ಷಗಳ ಹಿಂದೆ ತಾಯಿ ಸುಶೀಲಾ ಸಿದ್ದಿ ಅವರ ವಿಶೇಷ ಅಗತ್ಯವುಳ್ಳ ಮಗ ಸುಬ್ರಹ್ಮಣ್ಯ ತಾಲ್ಲೂಕಿನ ಗೋರ್ಸಗದ್ದೆಯಿಂದ ಕಾಣೆಯಾಗಿದ್ದ. ಆಗ ತಾಯಿ ಪಟ್ಟ ವೇದನೆ ಅಷ್ಟಿಷ್ಟಲ್ಲ. ನಾಲ್ಕು ವರ್ಷಗಳಿಂದ ಮಗನಿಗಾಗಿ ಹುಡುಕದ ಜಾಗವಿರಲಿಲ್ಲ. ಸುಮಾರು 25 ದಿನಗಳ ಹಿಂದೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ದೂರವಾಣಿ ಕರೆ ಬಂತು. ‘ದೂರದ ಫಿರೋಜಾಬಾದ್ ದಲ್ಲಿ ಒಬ್ಬ ಯುವಕ ಸಿಕ್ಕಿದ್ದಾನೆ, ಅವನು ನಿಮ್ಮ ಮಗನೇ ಇರಬೇಕು’ ಎಂದು ಹೇಳಿದ ಸಿಬ್ಬಂದಿ ವಿಡಿಯೊ ಕರೆ ಮಾಡಿ ತೋರಿಸಿದರು. ಆತ ತನ್ನ ಮಗನೇ ಎಂದು ಅವರಿಗೆ ಖಾತ್ರಿಯಾಯಿತು.

ಸುಬ್ರಹ್ಮಣ್ಯನನ್ನು ಯಲ್ಲಾಪುರ ಪೊಲೀಸ್ ಠಾಣೆಗೆ ಕರೆತಂದಾತ ತಾಯಿ ಸುಶೀಲಾ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಮಗನನ್ನು ಬಿಗಿದಪ್ಪಿ ಆನಂದ ಭಾಷ್ಪ ಸುರಿಸಿದರು. ‘ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡ ಅವರು, ‘ಕಳೆದುಹೋದ ಮಗ ಸಿಕ್ಕುತ್ತಾನೆ ಎಂಬ ನಿರೀಕ್ಷೆ ಇರಲಿಲ್ಲ. ಕಳೆದು ಹೋದ ಮಗ ಸಿಕ್ಕಿದರೆ ಯಾವ ತಾಯಿಗೆ ತಾನೇ ಖುಷಿಯಾಗದಿರುತ್ತದೆ’ ಎಂದು ಭಾವನಾತ್ಮಕವಾಗಿ ಪ್ರಶ್ನಿಸಿದರು. ಪಟ್ಟಣದ ಆಸ್ಪತ್ರೆಯಲ್ಲಿ ನರ್ಸ್ ಅಗಿರುವ ಅವರು, ತಮಗೆ ಸಂಸ್ಥೆ ನೀಡಿದ ಸಹಕಾರವನ್ನು ನೆನೆದುಕೊಂಡರು. ಪೊಲೀಸರಿಗೂ ಧನ್ಯವಾದ ಹೇಳಿದರು.

ತಂದೆಯನ್ನು ಹುಡುಕಲು ₹ 500 ರೂಪಾಯಿ ತೆಗೆದುಕೊಂಡು ಹೋಗಿದ್ದ ಸುಬ್ರಹ್ಮಣ್ಯ ತಾಯಿಗೆ ತಿಳಿಸಿರಲಿಲ್ಲ. ನಾಲ್ಕಾರು ದಿನ ಹುಡುಕಾಡಿದ ಸುಶೀಲಾ, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಬ್ರಹ್ಮಣ್ಯ ಮತ್ತೆ ಮನೆ ಸೇರಿದ್ದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !