ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಳಕೊಂಡವರಿಗೆ ವಸತಿ ಮನೆ ಕೊಡಿ

ಅಧಿಕಾರಿಗಳ ಸಭೆ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ
Last Updated 14 ಆಗಸ್ಟ್ 2019, 11:07 IST
ಅಕ್ಷರ ಗಾತ್ರ

ಶಿರಸಿ: ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಹಾಗೂ ವಾಸಕ್ಕೆ ಯೋಗ್ಯವಿಲ್ಲದ ಮನೆ ಮಾಲೀಕರಿಗೆ ಸರ್ಕಾರದ ವಸತಿ ಯೋಜನೆಯಡಿ ಆದ್ಯತೆ ಮೇರೆಗೆ ಮನೆ ಮಂಜೂರು ನೀಡುವಂತೆ ಮುಖ್ಯಮಂತ್ರಿ ಬಳಿ ಚರ್ಚಿಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮಂಗಳವಾರ ಇಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಡೆಸಿದ ಅವರು, ಒಂದು ವಾರ ಸುರಿದ ಮಳೆಗೆ ತಾಲ್ಲೂಕಿನಲ್ಲಿ 98 ಮನೆಗಳು ಬಿದ್ದಿವೆ. ಇಡೀ ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಸಂಭವಿಸಿದೆ. ಮನೆ ಕಳೆದುಕೊಂಡವರಿಗೆ ವಸತಿ ಯೋಜನೆಯಡಿ ಬಂದಿರುವ ಮನೆಗಳ ಹಂಚಿಕೆಯಲ್ಲಿ ಆದ್ಯತೆ ನೀಡಲು ಪಿಡಿಒಗಳು ಮುಂದಾಗಬೇಕು. ಈಗಾಗಲೇ ವಸತಿ ಯೋಜನೆಯ ಫಲಾನುಭವಿಗಳಾಗಿದ್ದರೂ, ಅಂತಹವರ ಮನೆಗಳು ಬಿದ್ದಿದ್ದರೂ, ಸರ್ಕಾರದ ನಿಯಮ ಸಡಿಲಗೊಳಿಸಿ ಆ ಫಲಾನುಭವಿಗಳಿಗೂ ಮನೆ ನೀಡಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ಮಾಹಿತಿ ನೀಡಿ, ‘ಈವರೆಗಿನ ವಾಡಿಕೆ ಮಳೆ 1767 ಮಿ.ಮೀ. ಆದರೆ, 2687 ಮಿ.ಮೀ ಮಳೆಯಾಗಿದೆ. ಆ.1ರಿಂದ 12ರವರೆಗಿನ ವಾಡಿಕೆ ಮಳೆ 264 ಮಿ.ಮೀ, ವಾಸ್ತವದಲ್ಲಿ 1109 ಮಿ.ಮೀ ಮಳೆಯಾಗಿದೆ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಒಣ ಬಿದಿರು ಮಟ್ಟಿಗಳಿಂದ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಅರಣ್ಯ, ಲೋಕೋಪಯೋಗಿ ಇಲಾಖೆ ಮತ್ತು ಹೆಸ್ಕಾಂ ಸಮನ್ವಯದಿಂದ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕಾಲುಸಂಕ, ಸೇತುವೆ, ರಸ್ತೆ, ಕೃಷಿ, ತೋಟಗಾರಿಕಾ ಬೆಳೆಗಳಿಗೆ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ. ಅಧಿಕಾರಿಗಳು ಮಾನವೀಯತೆಯಿಂದ ಕೆಲಸ ಮಾಡಬೇಕು’ ಎಂದು ಕಾಗೇರಿ ಸೂಚಿಸಿದರು.

₹ 5 ಲಕ್ಷ ಸಾಲ ಕೊಡಿ:ಮಳೆಯಿಂದಾಗಿ ರೈತರ ಬೆಳೆಗಳು ನಾಶವಾಗಿದ್ದು, ಶೂನ್ಯ ಬಡ್ಡಿ ದರದಲ್ಲಿ ₹ 5 ಲಕ್ಷದವರೆಗೆ ಸರ್ಕಾರ ಸಾಲ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಸಲಹೆ ಮಾಡಿದರು. ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿರುವ ಮೊಗವಳ್ಳಿಯಲ್ಲಿರುವ 130 ಕುಟುಂಬಗಳ ಶಾಶ್ವತ ಸ್ಥಳಾಂತರದ ಕುರಿತು ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಕ ಪ್ರಸ್ತಾಪಿಸಿದರು. ಈ ಕುರಿತು ಸರ್ಕಾರದ ಬಳಿ ಚರ್ಚಿಸಲಾಗುವುದು ಎಂದು ಕಾಗೇರಿ ಭರವಸೆ ನೀಡಿದರು.

ಮಳೆ ಕಡಿಮೆಯಾದ ನಂತರ ಕೆಲ ಮನೆಗಳು ಬೀಳಬಹುದು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಡಬೇಕು. ಅನೇಕರ ಮನೆಯೊಳಗೆ ನೀರು ನುಗ್ಗಿ ಅಗತ್ಯ ದಾಖಲೆಗಳು ನಾಶವಾಗಿದ್ದು, ಅಂತಹವರಿಗೆ ಕೂಡಲೇ ಹೊಸ ದಾಖಲೆ ಪೂರೈಸಬೇಕು. ತುರ್ತು ಕೆಲಸಗಳಿಗೆ ಗ್ರಾಮ ಪಂಚಾಯ್ತಿಯ 14ನೇ ಹಣಕಾಸು ಯೋಜನೆ ಅನುದಾನವನ್ನು ಬಳಸಿಕೊಂಡು ನಂತರ ಅನುಮತಿ ಪಡೆಯಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ಉಷಾ ಹೆಗಡೆ, ಪ್ರಭಾವತಿ ಗೌಡ, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT