ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಹೆಚ್ಚಳಕ್ಕೆ ರಾತ್ರಿ ಶಿಕ್ಷಣ

ಮುಂಡಗೋಡ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನ
Last Updated 29 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ಮುಂಡಗೋಡ:ನಾಲ್ಕು ವರ್ಷಗಳ ಹಿಂದೆ ಆ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ100ಫಲಿತಾಂಶ ದಾಖಲಿಸಿತ್ತು. ಕೆಲವು ವರ್ಷಗಳವರೆಗೆ ಶೇ 60ರಿಂದ ಶೇ 78ರವರೆಗೆ ಫಲಿತಾಂಶ ಬರುತ್ತಿತ್ತು. ಆದರೆ, ಕಳೆದ ವರ್ಷ ಫಲಿತಾಂಶ ಶೇ 50ಕ್ಕಿಂತ ಕಡಿಮೆಯಾಗಿತ್ತು. ಇದರಿಂದ ಚಿಂತೆಗೀಡಾದ ಶಿಕ್ಷಕರು, ವಿದ್ಯಾರ್ಥಿಗಳಿಗೆ ವಸತಿ ಸಹಿತ ರಾತ್ರಿ ಶಿಕ್ಷಣ ನೀಡುತ್ತಿದ್ದಾರೆ.

ಪಟ್ಟಣದ ಆದಿಜಾಂಭವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೆಚ್ಚುವರಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಪಾಠದ ಬಳಿಕ ವಿದ್ಯಾರ್ಥಿಗಳು ಶಾಲೆಯಲ್ಲೇ ಮಗಲುತ್ತಿದ್ದಾರೆ. ಎಸ್‌ಎಸ್ಎಲ್‌ಸಿ ಪರೀಕ್ಷೆ ಆರಂಭಕ್ಕೂ ಒಂದು ತಿಂಗಳಮೊದಲಿನಿಂದಲೇ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪರೀಕ್ಷೆ ಸಮಯದಲ್ಲಿ ಮಕ್ಕಳು ಸರಿಯಾಗಿ ಅಭ್ಯಾಸ ಮಾಡುವುದಿಲ್ಲ ಎಂಬ ಆತಂಕದಲ್ಲಿದ್ದ ಹಲವು ಪಾಲಕರಿಗೆ ಶಿಕ್ಷಕರ ಕ್ರಮದಿಂದ ಸಂತಸವಾಗಿದೆ. ಕೆಲವು ಪಾಲಕರು ಶಾಲೆಗೆ ಭೇಟಿ ನೀಡಿ, ಶಿಕ್ಷಕರನ್ನು ಅಭಿನಂದಿಸಿದ ಉದಾಹರಣೆಗಳೂ ಇವೆ.

‘ಕಳೆದ ವರ್ಷ ಶಾಲೆಯ ಫಲಿತಾಂಶ ಕಡಿಮೆ ಆಯಿತು. ಸಹಜವಾಗಿಯೇ ಮೇಲಧಿಕಾರಿಗಳು, ಆಡಳಿತ ಮಂಡಳಿ ಫಲಿತಾಂಶ ಕುಸಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಶಾಲೆಯ ಎಲ್ಲ ಶಿಕ್ಷಕರ ಜೊತೆ ಚರ್ಚಿಸಲಾಯಿತು. ನಿತ್ಯ ಪಾಠದ ಜೊತೆಗೆ ರಾತ್ರಿಯೂ ಶಾಲೆಯಲ್ಲಿಯೇ ಮಕ್ಕಳಿಗೆ ಊಟ ವಸತಿ ವ್ಯವಸ್ಥೆ ಮಾಡಿ, ಅಭ್ಯಾಸ ಮಾಡಿಸುವ ಬಗ್ಗೆ ನಿರ್ಧರಿಸಲಾಯಿತು. ಇದಕ್ಕೆ ಪಾಲಕರು ಸಹ ಒಪ್ಪಿಗೆ ನೀಡಿದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಸುಧಾರಿಸುವುದರ ಜೊತೆಗೆ ಶಾಲೆಯ ಫಲಿತಾಂಶ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಯಿತು’ ಎನ್ನುತ್ತಾರೆ ಮುಖ್ಯಶಿಕ್ಷಕ ಎಸ್‌.ಡಿ.ಮುಡೆಣ್ಣನವರ್.

‘ಹೆಚ್ಚಿನ ಫಲಿತಾಂಶದ ನಿರೀಕ್ಷೆ’:‘ಸದ್ಯ ಪರೀಕ್ಷೆ ಕೊನೆಯ ಹಂತದಲ್ಲಿದೆ.ಈಗಲೂ 31 ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನಿಯರು ರಾತ್ರಿ ಎಂಟು ಗಂಟೆಯವರೆಗೆ ಶಾಲೆಯಲ್ಲಿ ಅಭ್ಯಾಸ ಮಾಡಿ ಮರಳಿ ವಸತಿ ನಿಲಯಕ್ಕೆ ತೆರಳುತ್ತಾರೆ. ಬಾಲಕರು ರಾತ್ರಿ 10ರವರೆಗೆ ಶಾಲೆಯಲ್ಲಿಯೇ ಅಭ್ಯಾಸ ಮಾಡಿ, ಬೆಳಿಗ್ಗೆ 5 ಗಂಟೆಗೆ ಮತ್ತೆ ಎದ್ದು ಓದುತ್ತಾರೆ. ಪ್ರತಿದಿನ ಒಬ್ಬ ವಿಷಯ ಶಿಕ್ಷಕ ಹಾಗೂ ಪಠ್ಯೇತರ ಸಿಬ್ಬಂದಿ ಮಕ್ಕಳೊಂದಿಗೆ ಶಾಲೆಯಲ್ಲಿ ಮಲಗುತ್ತಾರೆ. ಈ ವರ್ಷ ಹೆಚ್ಚಿನ ಫಲಿತಾಂಶ ನಿರೀಕ್ಷಿಸಲಾಗಿದೆ’ ಎಂದರು.

‘ತಾಲ್ಲೂಕಿನ ಮೂರು ಅನುದಾನಿತ ಪ್ರೌಢಶಾಲೆಗಳಲ್ಲಿ ಈ ವರ್ಷ ವಸತಿ ಸಹಿತ ರಾತ್ರಿ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಕರು ಮಾಡಿದ್ದಾರೆ. ಇದೊಂದು ಉತ್ತಮ ಪ್ರಯತ್ನ’ ಎಂದುಕ್ಷೇತ್ರ ಶಿಕ್ಷಣಾಧಿಕಾರಿಡಿ.ಎಂ.ಬಸವರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT