ಶನಿವಾರ, ಜೂನ್ 25, 2022
24 °C
ಕೋವಿಡ್: ಮಕ್ಕಳ ಚಿಕಿತ್ಸೆಗೆ ವಿಶೇಷ ವಾರ್ಡ್

ಸಂಭಾವ್ಯ ಮೂರನೇ ಅಲೆ ಎದುರಿಸಲು ಅಗತ್ಯ ಕ್ರಮ: ಸಚಿವ ಹೆಬ್ಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕೋವಿಡ್‌ನ ಮೂರನೇ ಸಂಭಾವ್ಯ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗಿದೆ. ವಿಶೇಷವಾಗಿ ಮಕ್ಕಳ ತಜ್ಞರ ಅಭಿಪ್ರಾಯದಂತೆ ಜಿಲ್ಲೆಯಾದ್ಯಂತ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ತೊಂದರೆಯಾಗಬಹುದು ಎಂದು ತಜ್ಞರು ಊಹಿಸಿದ್ದಾರೆ. ಹೀಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ತಲಾ 25 ಹಾಸಿಗೆಗಳ ವಿಶೇಷ ಕೋವಿಡ್ ವಾರ್ಡ್‌ಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಇವು ಮಕ್ಕಳಿಗೆ ಕೋವಿಡ್ ಚಿಕಿತ್ಸೆಗೆಂದೇ ಬಳಕೆಯಾಗಲಿವೆ. ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆ, ಅಂಕೋಲಾ, ಕುಮಟಾ, ಭಟ್ಕಳ, ಶಿರಸಿ, ದಾಂಡೇಲಿ, ಯಲ್ಲಾಪುರದಲ್ಲಿ ವಿಶೇಷ ವಾರ್ಡ್‌ಗಳು ಆರಂಭವಾಗಲಿವೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಐಸೋಲೇಷನ್ ವಾರ್ಡ್‌ ಆರಂಭಿಸಲಾಗುವುದು. ಅಲ್ಲಿಗೆ ಬೇಕಾದ ಸಿಬ್ಬಂದಿ, ಸಲಕರಣೆಗಳು, ವಾಹನಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳಲ್ಲಿ ಕೋವಿಡ್ ಪತ್ತೆಗೆ ‘ಡಿ ಡಿಮರ್’ ಪರೀಕ್ಷಾ ಯಂತ್ರಗಳು ಅಗತ್ಯ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಹಾಗಾಗಿ ಜಿಲ್ಲೆಯ ಪ್ರತಿ ತಾಲ್ಲೂಕು ಆಸ್ಪತ್ರೆಗೆ ಒದಗಿಸಲು ನಿರ್ಣಯಿಸಲಾಗಿದೆ’ ಎಂದು ತಿಳಿಸಿದರು.

ಮಕ್ಕಳ ತಜ್ಞರಿಂದ ತರಬೇತಿ: ‘ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 18 ಮಂದಿ ಮತ್ತು ಖಾಸಗಿಯಾಗಿ 17 ಮಂದಿ ಮಕ್ಕಳ ತಜ್ಞರಿದ್ದಾರೆ. ಹುಬ್ಬಳ್ಳಿಯ ‘ಕಿಮ್ಸ್’ ಆಸ್ಪತ್ರೆಯಲ್ಲಿ 70 ಮಂದಿ ತಜ್ಞರಿದ್ದಾರೆ. ಕೋವಿಡ್‌ನ ಮೂರನೇ ಅಲೆ ಎದುರಿಸಲು ಸಿದ್ಧತೆಯ ಭಾಗವಾಗಿ ಅವರಿಂದ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ. ಅಲ್ಲದೇ ನಿವೃತ್ತಿ ಹೊಂದಿರುವ ಮಕ್ಕಳ ತಜ್ಞರ ಸೇವೆಯನ್ನೂ ಗುತ್ತಿಗೆ ಮೂಲಕ ಪಡೆಯಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರವು ಮಂಗಳವಾರದ ಮಾಹಿತಿಯಂತೆ ಶೇ 20.6ಕ್ಕೆ ಇಳಿಕೆಯಾಗಿದೆ. ಲಾಕ್‌ಡೌನ್ ನಿಯಮಾವಳಿಯ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದರು.

56 ವೈದ್ಯರ ನೇಮಕ: ‘ಉತ್ತರ ಕನ್ನಡ ಜಿಲ್ಲೆಗೆ ಕೆಲವು ದಿನಗಳ ಹಿಂದೆ ಒಟ್ಟು 56 ವೈದ್ಯರನ್ನು ರಾಜ್ಯ ಸರ್ಕಾರ ನೇಮಿಸಿದೆ. ಈಗ ಜಿಲ್ಲೆಗೆ ಒಟ್ಟು 94 ವೈದ್ಯರು ಸಿಕ್ಕಿದಂತಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೈದ್ಯರ ನೇಮಕವಾಗಿರುವುದು ಇದೇ ಮೊದಲು. ಇದು ಕೋವಿಡ್‌ನಂಥ ಸಮಯದಲ್ಲಿ ಸಂಜೀವಿನಿ ಸಿಕ್ಕಿದಂತಾಗಿದೆ’ ಎಂದು ಶಿವರಾಮ ಹೆಬ್ಬಾರ ಸಂತಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಸೌಕರ್ಯಗಳನ್ನು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಐವರಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೋಹನ ರಾಜ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು