ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಷ್ಟೇ ಕ್ರೀಡೆಗೆ ಪ್ರಾಮುಖ್ಯತೆ

ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಆವೆಮರಿಯಾ ಶಾಲೆ ವಿದ್ಯಾರ್ಥಿಗಳು
Last Updated 6 ಸೆಪ್ಟೆಂಬರ್ 2019, 12:13 IST
ಅಕ್ಷರ ಗಾತ್ರ

ಶಿರಸಿ: ಜ್ಞಾನಾರ್ಜನೆಯ ಜೊತೆಗೆ ಮಕ್ಕಳಲ್ಲಿ ದೈಹಿಕ ಸದೃಢತೆ ಬೆಳೆಸುವ ನಿಟ್ಟಿನಲ್ಲಿ ಕ್ರೀಡೆಗೆ ವಿಶೇಷ ಮಹತ್ವ ನೀಡುತ್ತಿದೆ ಇಲ್ಲಿನ ಆವೆಮರಿಯಾ ಶಾಲೆ. ಪ್ರಾಥಮಿಕ ಶಾಲೆಯಲ್ಲಿ ಶಿಸ್ತುಬದ್ಧ ತರಬೇತಿ ಪಡೆಯುವ ಮಕ್ಕಳು ಪ್ರೌಢ ಶಿಕ್ಷಣಕ್ಕೆ ಬರುವ ಹೊತ್ತಿಗೆ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರೆ.

ಬೆಥನಿ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾಗಿ ಆವೆಮರಿಯಾ ಶಾಲೆಯ ಪ್ರಾಥಮಿಕ ವಿಭಾಗವು 1945ರಲ್ಲಿ ಹಾಗೂ ಪ್ರೌಢಶಾಲೆಯು 1959ರಲ್ಲಿ ಪ್ರಾರಂಭಗೊಂಡಿತು. ಕ್ರೀಡೆ ಮತ್ತು ಪಠ್ಯ ಚಟುವಟಿಕೆಗೆ ಸಮಾನ ಮಹತ್ವ ನೀಡುವ ಈ ಶಾಲೆಯ ಹಲವಾರು ಮಕ್ಕಳು ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸ್ಥಾನ ಪಡೆದಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರಾದ ಗಜೇಂದ್ರ ಬೈಂದೂರು, ಪ್ರದೀಪ ನಾಯ್ಕ, ರಾಜೇಶ ಡಿಸೋಜಾ ಈ ಮಕ್ಕಳಿಗೆ ತರಬೇತುದಾರರು. ‘ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಐದನೇ ತರಗತಿಯಿಂದ ವಾಲಿಬಾಲ್ ತರಬೇತಿ ಆರಂಭವಾಗುತ್ತದೆ. ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳ ಪಾಲಕರ ಅನುಮತಿ ಪಡೆದು, ಅವರನ್ನು ಕ್ರೀಡೆಗೆ ಅಣಿಗೊಳಿಸುತ್ತೇವೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಒಂದು ತಾಸು ತರಬೇತಿ ಪಡೆಯುವ ಮಕ್ಕಳು 6ನೇ ತರಗತಿಗೆ ಬರುವಷ್ಟರಲ್ಲಿ ಹೆಚ್ಚುವರಿ ಆಟಗಾರರಾಗಿ ರೂಪುಗೊಳ್ಳುತ್ತಾರೆ. 7ನೇ ತರಗತಿಯಲ್ಲಿ 14 ವರ್ಷದೊಳಗಿನ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಪ್ರೌಢಶಾಲೆಗೆ ಬರುವ ವೇಳೆಗೆ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರಾಗಿ ಬೆಳೆಯುತ್ತಾರೆ’ ಎನ್ನುತ್ತಾರೆ ರಾಜೇಶ ಡಿಸೋಜಾ.

ಎಂಟನೇ ತರಗತಿ ಮಕ್ಕಳಿಗೆ ಬಾಲ್ ಬ್ಯಾಡ್ಮಿಂಟನ್‌ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಈವರೆಗೆ ಭಾಗವಹಿಸಿರುವ ವಿದ್ಯಾರ್ಥಿಗಳು ಸುಮಾರು 96. 182 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪದಕಗಳನ್ನು ಪಡೆದಿದ್ದಾರೆ.

‘ಗುಂಪು ಆಟ ಮಾತ್ರವಲ್ಲ, ವೈಯಕ್ತಿಕ ಆಟಗಳನ್ನು ಮಕ್ಕಳು ಸಾಧನೆ ಮಾಡಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಜ್ಞಾನ ಬೆಳೆಸುವ ಉದ್ದೇಶದಿಂದ ದುಶ್ಚಟಗಳ ವಿರುದ್ಧ ಜಾಗೃತಿ, ಸಂಚಾರ ನಿಯಮ ತಿಳಿವಳಿಕೆ, ಆರೋಗ್ಯ ಸಲಹೆ, ವಿಜ್ಞಾನ ಗೋಷ್ಠಿ, ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಮಕ್ಕಳ ಉತ್ತಮ ಪ್ರತಿಭೆ ತೋರುತ್ತಾರೆ’ ಎಂದು ಮುಖ್ಯ ಶಿಕ್ಷಕಿ ಸಿಸ್ಟರ್ ಸುಜಾತಾ ಜೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT