ಹಾಂಗ್‌ಝೌ: ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಲ್ಲಿ ನೇಪಾಳದ ಬ್ಯಾಟರ್‌ಗಳು ಮೂರು ವಿಶ್ವದಾಖಲೆಗಳನ್ನು ಪೇರಿಸಿದರು.
ಏಷ್ಯನ್ ಕ್ರೀಡಾಕೂಟದ ಪುರುಷರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಂಗೋಲಿಯಾ ಎದುರಿನ ಪಂದ್ಯದಲ್ಲಿ ನೇಪಾಳ ತಂಡವು 300ಕ್ಕೂ ಹೆಚ್ಚು ರನ್‌ಗಳ ಮೊತ್ತ ದಾಖಲಿಸಿತು. ಈ ಸಾಧನೆ ಮಾಡಿದ ಮೊಟ್ಟಮೊದಲ ತಂಡವಾಯಿತು. ಅಫ್ಗಾನಿಸ್ತಾನ ತಂಡವು 2019ರಲ್ಲಿ ಐರ್ಲೆಂಡ್ ವಿರುದ್ಧ ಗಳಿಸಿದ್ದ 278 ರನ್‌ಗಳ ಮೊತ್ತವೇ ಈ ಮಾದರಿಯಲ್ಲಿ ಗರಿಷ್ಠವಾಗಿತ್ತು.
ಟಾಸ್ ಗೆದ್ದ ಮಂಗೋಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನೇಪಾಳ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 314 ರನ್ ಗಳಿಸಿತು. ಅದಕ್ಕೆ ಕಾರಣವಾಗಿದ್ದು ಕುಶಾಲ ಮಲ್ಲಾ ಹೊಡೆದ ಶರವೇಗದ ಶತಕ ಮತ್ತು ದೀಪೆಂದ್ರಸಿಂಗ್ ಗಳಿಸಿದ ಮಿಂಚಿನ ಅರ್ಧಶತಕ. ಎರಡೂ ವಿಶ್ವದಾಖಲೆಯ ಪುಟ ಸೇರಿದವು.
19 ವರ್ಷದ ಎಡಗೈ ಬ್ಯಾಟರ್ ಕುಶಾಲ ಮಲ್ಲಾ 34 ಎಸೆತಗಳಲ್ಲಿ ಶತಕ ಬಾರಿಸಿದರು. ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಭಾರತದ ರೋಹಿತ್ ಶರ್ಮಾ ಈ ಮೊದಲು 35 ಎಸೆತಗಳಲ್ಲಿ 100ರ ಗಡಿ ದಾಟಿದ್ದರು. ಕುಶಾಲ ಒಟ್ಟು 50 ಎಸೆತಗಳಲ್ಲಿ 137 ರನ್ ಹೊಡೆದರು. ಅದರಲ್ಲಿ 12 ಸಿಕ್ಸರ್ ಮತ್ತು 8 ಬೌಂಡರಿ ಇದ್ದವು.
ನೇಪಾಳದ ಐದನೇ ಕ್ರಮಾಂಕದ ಬ್ಯಾಟರ್ ದೀಪೆಂದ್ರ ಸಿಂಗ್ ಐರೀ 9 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಭಾರತದ ಯುವರಾಜ್ ಸಿಂಗ್ (12 ಎಸೆತದಲ್ಲಿ 58) ದಾಖಲೆಯನ್ನು ನುಚ್ಚುನೂರು ಮಾಡಿದರು. ಯುವಿ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಈ ಸಾಧನೆ ಮಾಡಿದ್ದರು. 16 ವರ್ಷಗಳ ನಂತರ ದೀಪೆಂದ್ರ ಆ ದಾಖಲೆಯನ್ನು ಮುರಿದರು. ಅವರು 520ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 52 ರನ್ ದಾಖಲಿಸಿದರು. ಒಟ್ಟು ಹತ್ತು ಎಸೆತ ಎದುರಿಸಿದರು. ಎಂಟು ಸಿಕ್ಸರ್ ಹೊಡೆದರು.
ಸಂಕ್ಷಿಪ್ತ ಸ್ಕೋರು
ನೇಪಾಳ: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 314 (ಕುಶಾಲ್ ಮಲ್ಲ 137, ರೋಹಿತ್ ಪಾಡೆಲ್ 61, ದೀಪೆಂದ್ರ ಸಿಂಗ್ ಐರಿ 52, ದೆವಾಸುರೇನ್ ಜೆನೈನ್‌ಸುರೇನ್ 60ಕ್ಕೆ 1)
ಮಂಗೋಲಿಯಾ: 13.1 ಓವರ್‌ಗಳಲ್ಲಿ 41 (ದೆವಾಸುರೇನ್ ಜೆನೈನ್‌ಸುರೇನ್ 10, ಕರಣ್ ಕೆಸಿ 1 ರನ್‌ಗೆ 2, ಅವಿನಾಶ್ ಬೊಹ್ರಾ 2ಕ್ಕೆ2, ಸಂದೀಪ್ ಲಾಮಿಚಾನೆ 7ಕ್ಕೆ2)
ಫಲಿತಾಂಶ: 273 ರನ್‌ಗಳ ಜಯ.
__________________________________________________________________________
ಕಾಂಬೋಡಿಯಾ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 125 (ಲಕ್ಷಿತ್ ಗುಪ್ತಾ 24, ಎಟಿನಿ ಬೆವುಕಸ್ 15, ಶಾರ್ವನ್ ಗೋಡಾರ 36, ರಿಯಾನ್ ಡ್ರೇಕ್ 15ಕ್ಕೆ3)
ಜಪಾನ್: 18.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 126 (ಲಚ್ಲನ್ ಯರಾಮೊಟೊ 32, ಶಿರಾಯ ಪಿಟಮೊರಾ 23, ಕೆಂಡಲ್ ಕಾಡೊವಾಕಿ 35, ಶಾರ್ವನ್ ಗೋಡಾರ 25ಕ್ಕೆ3, ರಾಮ್ ಶರಣ್ 24ಕ್ಕೆ2)
ಫಲಿತಾಂಶ: ಜಪಾನ್ ತಂಡಕ್ಕೆ 3 ವಿಕೆಟ್‌ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.