ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಪರೀಕ್ಷೆ ಬರೆದ 10,227 ವಿದ್ಯಾರ್ಥಿಗಳು

ಬಿಡುವು ನೀಡಿದ ಮಳೆ; ಸಮಯಕ್ಕೆ ಸರಿಯಾಗಿ ತಲುಪಿದ ಮಕ್ಕಳು
Last Updated 19 ಜುಲೈ 2021, 12:17 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ 122 ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿಯ ಮೊದಲ ಪರೀಕ್ಷೆಯು ಸಾಂಗವಾಗಿ ನೆರವೇರಿತು. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,259 ವಿದ್ಯಾರ್ಥಿಗಳಲ್ಲಿ 10,227 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 32 ಮಂದಿ ಬರಲಿಲ್ಲ.

ಪರೀಕ್ಷೆಯು ಬೆಳಿಗ್ಗೆ 10.30ಕ್ಕೆ ಆರಂಭವಾದರೂ ಕೋವಿಡ್ ನಿಯಮಾವಳಿಗಳ ಪಾಲನೆಗಾಗಿ ಎರಡು ತಾಸು ಮೊದಲೇ ಬರಲು ಸೂಚಿಸಲಾಗಿತ್ತು. ಹಾಗಾಗಿ 8.30ರ ಸುಮಾರಿಗೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಬಳಿ ಸೇರಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ದೇಹದ ತಾಪಮಾನವನ್ನು ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್ ಸಿಂಪಡಿಸಿ, ಮುಖಗವಸು ಧರಿಸಿದ್ದನ್ನು ಖಾತ್ರಿ ಪಡಿಸಿಯೇ ಶಿಕ್ಷಣ ಇಲಾಖೆಯ ಸಿಬ್ಬಂದಿ ಕೊಠಡಿಗೆ ಕಳುಹಿಸಿದರು.

ಹಲವು ತಿಂಗಳ ಬಳಿಕ ಶಾಲೆಯತ್ತ ಬಂದ ವಿದ್ಯಾರ್ಥಿಗಳು, ತಮ್ಮ ಗೆಳೆಯರನ್ನು ಕಂಡು ಸಂತಸಪಟ್ಟರು. ಪರೀಕ್ಷೆಯ ನೆಪದಲ್ಲಾದರೂ ಭೇಟಿಯಾಗಲು ಅವಕಾಶವಾಯಿತು ಎಂದು ವಿದ್ಯಾರ್ಥಿ ಗೌರವ್ ನಗುತ್ತ ಸಂತಸ ವ್ಯಕ್ತಪಡಿಸಿದ.

‘ಬದಲಾದ ಪರೀಕ್ಷಾ ಪದ್ಧತಿಯ ಬಗ್ಗೆ ಅರಿವಿದೆ. ಶಿಕ್ಷಕರು ಸಾಕಷ್ಟು ಮಾಹಿತಿ ಕೊಟ್ಟಿದ್ದಾರೆ. ಬಹು ಆಯ್ಕೆ ಮಾದರಿಯ ಉತ್ತರ ಪತ್ರಿಕೆಯಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದೇನೆ. ಈ ಮಾದರಿಯ ಬಗ್ಗೆ ಶಿಕ್ಷಕರು ಮೊದಲೇ ತಿಳಿಸಿದ್ದರು. ಹಾಗಾಗಿ ಗೊಂದಲವಾಗಲಿಲ್ಲ’ ಎಂದು ವಿದ್ಯಾರ್ಥಿನಿ ದಿಶಾ ಹೇಳಿದಳು.

ಭಾನುವಾರವಿಡೀ ಅಬ್ಬರಿಸಿದ್ದ ಮಳೆ ಸೋಮವಾರ ತುಸು ವಿರಾಮ ನೀಡಿದ್ದು, ಮಕ್ಕಳಿಗೆ ಬರಲು ಸಾಕಷ್ಟು ಅನುಕೂಲವಾಯಿತು. ಕುಗ್ರಾಮಗಳಿಂದ ಬರಲು ಬಸ್, ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೊನ್ನಾವರ ತಾಲ್ಲೂಕಿನ ಮಹಿಮೆಯಿಂದ 10 ವಿದ್ಯಾರ್ಥಿಗಳನ್ನು ಮುಖ್ಯ ರಸ್ತೆಗೆ ಕರೆತಂದು, ಗೇರುಸೊಪ್ಪ ಬಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಯಿತು. ಅಂತೆಯೇ ಗುಂಡಬಾಳಕ್ಕೆ ಬಸ್ ಹೋಗದ ಕಾರಣ, ಪರ್ಯಾಯ ವಾಹನದ ವ್ಯವಸ್ಥೆ ಮಾಡಲಾಯಿತು.

ಆರೈಕೆ ಕೇಂದ್ರದಲ್ಲೂ ವ್ಯವಸ್ಥೆ:‘ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಏನೂ ಗೊಂದಲವಾಗಿಲ್ಲ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳ ಮೇಲಿನ ಕಾಳಜಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ ಗಾಂವ್ಕರ್ ತಿಳಿಸಿದರು.

‘ಅಂಕೋಲಾದ ಮೂವರು ಮತ್ತು ಕುಮಟಾದ ಒಬ್ಬ ವಿದ್ಯಾರ್ಥಿ ಕೋವಿಡ್ ಆರೈಕೆ ಕೇಂದ್ರದಲ್ಲೇ ಪರೀಕ್ಷೆ ಬರೆದರು. ಕಾರವಾರ ತಾಲ್ಲೂಕಿನ ಉಳಗಾ ಮಹಾಸತಿ ವಿದ್ಯಾಲಯದಲ್ಲಿ ಗೋವಾದ 67 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಮಾಜಾಳಿಯ ರಾಜ್ಯ ಗಡಿಯಲ್ಲಿ ಅವರಿಗೆ ಕೋವಿಡ್ ಪರೀಕ್ಷೆ ಮಾಡಿ ಕರೆಸಿಕೊಳ್ಳಲಾಯಿತು. ಅವರಲ್ಲಿ ಒಬ್ಬ ವಿದ್ಯಾರ್ಥಿಗೆ ಕೋವಿಡ್ ಕಂಡುಬಂದಿದ್ದು, ಕಾರವಾರದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಅಲ್ಲಿಂದಲೇ ಪರೀಕ್ಷೆ ಬರೆಯಲೂ ವ್ಯವಸ್ಥೆ ಮಾಡಲಾಗಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT